ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ–ದಿ ರೂಲ್ (ಪುಷ್ಪ– 2) ಬರುವ ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. ಆದರೆ, ಘೋಷಣೆಯಾದ ದಿನವೇ ಚಿತ್ರ ಬಿಡುಗಡೆಯಾಗುವುದು ಸಂದೇಹವಿದೆ ಎಂಬ ಮಾತುಗಳು ಟಾಲಿವುಡ್‌ನಿಂದ ಕೇಳಿ ಬರುತ್ತಿವೆ.
ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ– 2’ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು.
ಆದರೆ, ಅಂದೇ ಟಾಲಿವುಡ್ ಸೇರಿದಂತೆ ಹಲವು ಭಾಷೆಗಳ ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಮತ್ತೆ ನಿರ್ಮಾಣೋತ್ತರ ಕಾರ್ಯಗಳು ಇನ್ನೂ ಮುಗಿದಿಲ್ಲವಾಗಿರುವುದರಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವುದು ಬಹುತೇಕ ಖಚಿತ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಆದರೆ, ಪುಷ್ಪ ಚಿತ್ರತಂಡ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಖೇಲ್ ಖೇಲ್ ಮೇ’ ಚಿತ್ರವು ಇದೇ ವರ್ಷ ಆಗಸ್ಟ್ 15ರಂದು ಬಿಡುಗಡೆಯಾಗಲಿದ್ದು, ಅಂದೇ ಬಿಡುಗಡೆಗೆ ಸಜ್ಜಾಗಿರುವ ಪುಷ್ಪ–2 ಸಿನಿಮಾಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಶೃದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿರುವ ಅಮರ್ ಕೌಶಿಕ್ ಅವರ ಕಾಮಿಡಿ, ಹಾರರ್ ‘ಸ್ತ್ರೀ–2’ ಸಿನಿಮಾ, ನಿಖಿಲ್ ಅಡ್ವಾಣಿ ಅವರ ವೇದ ಸಿನಿಮಾ ಅಂದೇ ರಿಲೀಸ್ ಆಗಲಿದೆ.
ಪುಷ್ಪ ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.
ಪುಷ್ಪ-1 ಚಿತ್ರವು 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈ ಸಿನಿಮಾದ ಯಶಸ್ಸಿನಿಂದಾಗಿ ನಟ ಅಲ್ಲು ಅರ್ಜುನ್ ಅವರ ಖ್ಯಾತಿಯೂ ಮತ್ತಷ್ಟು ಹೆಚ್ಚಿತ್ತು. ರಶ್ಮಿಕಾ ಮಂದಣ್ಣ, ಪಹಾದ್ ಫಾಸಿಲ್ ಸೇರಿದಂತೆ ಹಲವರ ತಾರಾಗಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.