ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬಾಕ್ಸ್ ಆಫೀಸ್ ಕಲೆಕ್ಷನ್‌ಗಳನ್ನು ಛಿದ್ರಗೊಳಿಸುವುದರಿಂದ ಹಿಡಿದು ಹೊಸ ದಾಖಲೆಗಳನ್ನು ಸೃಷ್ಟಿಸುವವರೆಗೆ ಪುಷ್ಪ ಸಿನಿಮಾ ಮುಂದಿದೆ. ಈ ಹಿಂದೆಯೇ ಹೇಳಿದಂತೆ ಸುಕುಮಾರ್ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದರು. ಅದರಂತೆ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯ ಎರಡನೇ ಭಾಗವು 2022 ರಲ್ಲಿ ತೆರೆಕಾಣಲಿದೆ.
ಪುಷ್ಪ 2ರ ಬಗ್ಗೆ ಐದು ಆಸಕ್ತಿದಾಯಕ ವಿಷಯಗಳನ್ನು ನೋಡೋಣ...
ಪುಷ್ಪ ವೆಬ್ ಸೀರೀಸ್ ಆಗಬೇಕಿತ್ತು ಗೊತ್ತಾ?
ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ರಕ್ತ ಚಂದನದ ಕಳ್ಳಸಾಗಣೆ ಪ್ರಕರಣವೊಂದು ಸುದ್ದಿ ಮಾಡಿತ್ತು. ಆಗ ಸುಕುಮಾರ್ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿದರು. ಮಾಧ್ಯಮಗಳೊಂದಿಗಿನ ಸಂವಾದದ ವೇಳೆ, ಸುಕುಮಾರ್ ಅವರು ತಮ್ಮ ಜೀವನದ ಆರು ತಿಂಗಳು ರಕ್ತ ಚಂದನದ ಕಳ್ಳಸಾಗಣೆ ಬಗ್ಗೆ ಸಂಶೋಧನೆ ಮಾಡಿದ್ದೇನೆ ಎಂದು ಬಹಿರಂಗಪಡಿಸಿದರು. ಆರಂಭದಲ್ಲಿ ವೆಬ್ ಸೀರೀಸ್ ಮಾಡಲು ಯೋಚಿಸಿದ್ದಾಗಿಯೂ ಅವರು ಬಹಿರಂಗಪಡಿಸಿದ್ದಾರೆ. ಆದರೆ, ಬಹಳ ಯೋಚಿಸಿದ ನಂತರ ಅದನ್ನು ಸಿನಿಮಾ ಮಾಡಲು ನಿರ್ಧರಿಸಿದರು.
ಸೀಕ್ವೆಲ್ 2ಗೆ ₹3 ಕೋಟಿ ಸಂಭಾವನೆ ಕೇಳ್ತಾರಾ ರಶ್ಮಿಕಾ ಮಂದಣ್ಣ?
ಪುಷ್ಪಾ: ದಿ ರೈಸ್ ಸಿನಿಮಾ ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದರು. ವರದಿಗಳ ಪ್ರಕಾರ, ನಟಿಗೆ ₹ 2 ಕೋಟಿ ನೀಡಲಾಗಿತ್ತು. ಆದರೆ, ಈಗ ಚಿತ್ರವು ಬ್ಲಾಕ್ ಬಸ್ಟರ್ ಆಗುವುದರೊಂದಿಗೆ ರಶ್ಮಿಕಾ ಕೂಡ ತಮ್ಮ ಸಂಭಾವನೆಯನ್ನು ಶೇ 50ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ, ಪುಷ್ಪ: ದಿ ರೂಲ್‌ಗಾಗಿ ರಶ್ಮಿಕಾ ₹3 ಕೋಟಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಪುಷ್ಪ: ದಿ ರೂಲ್ ಸಿನಿಮಾದ ಕಥೆ ಏನು?
ಪುಷ್ಪಾ: ದಿ ರೈಸ್ ಸಿನಿಮಾದಲ್ಲಿ ಕೂಲಿಯಾಗಿದ್ದ ಪುಷ್ಪರಾಜ್, ಕಳ್ಳಸಾಗಣೆ ಸಿಂಡಿಕೇಟ್ ಮುಖ್ಯಸ್ಥರಾಗಿ ಏರಿದ ಕಥೆಯಿದೆ. ಪುಷ್ಪ ಅಂತ್ಯದ ವೇಳೆಗೆ ಅಹಂಕಾರಿ ಮತ್ತು ಭ್ರಷ್ಟ ಭನ್ವರ್ ಸಿಂಗ್ ಶೇಖಾವತ್ (ಫಹಾದ್ ಫಾಸಿಲ್) ಪರಿಚಯವಾಯಿತು. ಎರಡನೆ ಭಾಗವು ಇಬ್ಬರು ಅಹಂಕಾರಿಗಳ ನಡುವಿನ ಮುಖಾಮುಖಿಯನ್ನು ತೋರಿಸುತ್ತದೆ.
ಪುಷ್ಪ 2ಗಾಗಿ ರೀಶೂಟ್ ಮಾಡ್ತಾರಾ ನಿರ್ದೇಶಕ ಸುಕುಮಾರ್?
ನಿರ್ದೇಶಕ ಸುಕುಮಾರ್ ಅವರು ಎರಡನೇ ಭಾಗದ ಕೆಲವು ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಿದ್ದಾರೆ. ಆದರೆ, ಮೊದಲ ಭಾಗವು ದೊಡ್ಡ ಯಶಸ್ಸನ್ನು ಕಂಡಿದ್ದರಿಂದ, ಚಿತ್ರವನ್ನು ಸಂಪೂರ್ಣವಾಗಿ ರೀಶೂಟ್ ಮಾಡಲು ಯೋಜಿಸಲಾಗಿದೆ ಎಂದು ನಿರ್ದೇಶಕರು ಬಹಿರಂಗಪಡಿಸಿದ್ದಾರೆ. ಫೆಬ್ರುವರಿಯಿಂದ ಮುಂದಿನ ಭಾಗದ ಚಿತ್ರೀಕರಣ ನಡೆಸಲು ಪುಷ್ಪ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅವರು ಚಿತ್ರವನ್ನು ಸಂಪೂರ್ಣವಾಗಿ ರೀಶೂಟ್ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ಪುಷ್ಪ: ದಿ ರೂಲ್ ಬಿಡುಗಡೆ ಯಾವಾಗ?
ಪುಷ್ಪ: ದಿ ರೈಸ್ ಸಿನಿಮಾ ಕ್ರಿಸ್‌ಮಸ್‌ಗೆ ಒಂದು ವಾರ ಮುಂಚಿತವಾಗಿ ಅಂದರೆ ಡಿ. 17 ರಂದು ಬಿಡುಗಡೆಯಾಯಿತು. ಅದೇ ರೀತಿ, ನಿರ್ದೇಶಕ ಸುಕುಮಾರ್ ಅವರು ಮುಂದಿನ ಭಾಗವನ್ನು ಡಿ. 16, 2022 ರಂದು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2022ರಲ್ಲಿ ಪ್ರೇಕ್ಷಕರು ಮತ್ತೊಮ್ಮೆ ತಗ್ಗೆದೆಲೇ ಎನ್ನಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.