ನವದೆಹಲಿ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ–2 ದಿ ರೂಲ್’ ಡಿಸೆಂಬರ್ 5ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ ಇದಕ್ಕೂ ಮೊದಲು 2021ರಲ್ಲಿ ಬಿಡುಗಡೆಯಾಗಿದ್ದ ಪ್ರೀಕ್ವೆಲ್ ‘ಪುಷ್ಪ: ದಿ ರೈಸ್’ ಹಿಂದಿ ಭಾಷೆಯಲ್ಲಿ ನ.22 ರಂದು ಮರುಬಿಡುಗಡೆಯಾಗುತ್ತಿದೆ.
ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಮ್ ಕಿರು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ‘ಪುಷ್ಪ: ದಿ ರೈಸ್’ ಹಿಂದಿಯಲ್ಲಿ ಇದೇ 22ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ’ ಎಂದು ತಿಳಿಸಿದೆ.
‘ಪುಷ್ಪ: ದಿ ರೈಸ್’ ಪ್ಯಾನ್ ಇಂಡಿಯಾ ಸಿನಿಮಾವಾಗಿ 2021ರಲ್ಲಿ ತೆರೆ ಕಂಡು, ತೆಲುಗು ಭಾಷೆಯಲ್ಲಿ ₹136 ಕೋಟಿ ಹಾಗೂ ಹಿಂದಿ ಆವೃತ್ತಿಯಲ್ಲಿ ₹106 ಕೋಟಿ ಗಳಿಕೆ ಮಾಡಿ ಭರ್ಜರಿ ಯಶಸ್ಸು ಗಳಿಸಿತ್ತು.
ಇದೀಗ ‘ಪುಷ್ಪ–2: ದಿ ರೂಲ್’ ಡಿ.5 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಇತ್ತೀಚೆಗೆ ಪಟ್ನಾದಲ್ಲಿ ತೆಲುಗು, ಹಿಂದಿ ಭಾಷೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಅತಿ ಹೆಚ್ಚು ವೀಕ್ಷಣೆ ಪಡೆದ 3ನೇ ಟ್ರೇಲರ್
ಪುಷ್ಪ–2 ಚಿತ್ರದ ಟ್ರೇಲರ್ ಅತಿ ಹೆಚ್ಚು ವೀಕ್ಷಣೆ ಪಡೆದ 3ನೇ ಟ್ರೇಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 24 ಗಂಟೆಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿ 10 ಕೋಟಿ 20 ಲಕ್ಷ ವೀಕ್ಷಣೆ ಪಡೆದಿದೆ.
ಈ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಟ್ರೇಲರ್ 24 ಗಂಟೆಗಳಲ್ಲಿ 7 ಕೋಟಿ 40 ಲಕ್ಷ ವೀಕ್ಷಣೆ ಪಡೆದು ಎರಡನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಸಲಾರ್ (11 ಕೋಟಿ 32 ಲಕ್ಷ) ಮತ್ತು ಕೆಜಿಎಫ್ ಚಾಪ್ಟರ್–2 (10 ಕೋಟಿ 65 ಲಕ್ಷ) ಸಿನಿಮಾಗಳ ಟ್ರೇಲರ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.