ADVERTISEMENT

ಪರ್ಯಾಯ ಚಿತ್ರಗಳ ಜೀವಾಮೃತ

ರಾಹುಲ ಬೆಳಗಲಿ
Published 28 ಏಪ್ರಿಲ್ 2019, 19:30 IST
Last Updated 28 ಏಪ್ರಿಲ್ 2019, 19:30 IST
ನಿಮ್ರತ್ ಕೌರ್
ನಿಮ್ರತ್ ಕೌರ್   

ಸಿನಿಮಾವೆಂದರೆ ಒಂದು ಸಿದ್ಧಸೂತ್ರ ಮತ್ತು ಸಿದ್ಧಮಾದರಿ ಇರುತ್ತದೆ. ಆ ಶಿಸ್ತಿನ ಚೌಕಟ್ಟಿನಾಚೆ ನಿಲ್ಲುವ ಚಿತ್ರಗಳು ಪರ್ಯಾಯ ಮತ್ತು ಕಲಾತ್ಮಕ ಚಿತ್ರಗಳು.

ಒಂದಾನೊಂದು ಕಾಲದಲ್ಲಿ ಪರ್ಯಾಯ ಚಿತ್ರಗಳಲ್ಲಿನ ಪಾತ್ರಗಳಿಗೆ ಜೀವ ತುಂಬಿದವರಲ್ಲಿ ಶಬಾನಾ ಆಜ್ಮಿ, ರೇಖಾ, ಸ್ಮಿತಾ ಪಾಟೀಲ, ದೀಪ್ತಿ ನಾವಲ್ ಮತ್ತಿತರರು ಪ್ರಮುಖರು. ದಶಕಗಳ ಹಿಂದೆಯೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ವಿದ್ಯಾ ಬಾಲನ್, ನಂದಿತಾ ದಾಸ್, ಕೊಂಕನಾ ಸೇನ್ ಶರ್ಮಾ, ಟಬು ಮುಂತಾದವರು ಹೆಜ್ಜೆ ಹಾಕಿದರು. ಪ್ರಸ್ತುತ, ಈ ಕಾಲಘಟ್ಟದ ಒಂದಷ್ಟು ನಟಿಯರೂ ಅದೇ ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಾರೆ. ಮುಖ್ಯವಾಹಿನಿಯವಲ್ಲದ ಚಿತ್ರಗಳ ಪರಂಪರೆಯ ವಾರಸುದಾರರಾಗಿ ಅವರು ಕಾಣಿಸುತ್ತಾರೆ.

ರಿಚಾ ಚಡ್ಡಾ

ಕಮರ್ಷಿಯಲ್ ಚಲನಚಿತ್ರಗಳ ಭಾರಿ ಅಬ್ಬರ ಮತ್ತು ಸ್ಪರ್ಧೆಯ ಮಧ್ಯೆಯೂ ತನ್ನ ಅಸ್ತಿತ್ವ ಕಾಯ್ದುಕೊಂಡಿರುವ ಪರ್ಯಾಯ ಮತ್ತು ಕಲಾತ್ಮಕ ಚಿತ್ರಗಳಿಗೆ ಆ ನಟಿಯರೇ ಜೀವಾಳ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲು ಆಗದಿದ್ದರೂ ಚಿಂತೆಯಿಲ್ಲ, ಕೆಲವೇ ಮತ್ತು ಸೀಮಿತ, ಗಂಭೀರ ವರ್ಗದ ಪ್ರೇಕ್ಷಕರ ಪ್ರತಿಕ್ರಿಯೆ ಸಿಕ್ಕರೂ ಸಾರ್ಥಕ ಭಾವ ವ್ಯಕ್ತಪಡಿಸುವ ನಟಿಯರು ಇದ್ದಾರೆ. ಅಂತಹ ಕೆಲವರ ಪೈಕಿ ನಿಮ್ರತ್ ಕೌರ್, ಸ್ವರ ಭಾಸ್ಕರ್, ರಿಚಾ ಚಡ್ಡಾ ಮುಂತಾದವರು ಪ್ರಮುಖರು. ಪರ್ಯಾಯ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳನ್ನು ನಿಭಾಯಿಸುವ ಅವರು ಕಮರ್ಷಿಯಲ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಚಿತ್ರಗಳು ಸಹ ಯಶಸ್ಸು ಕಾಣುತ್ತವೆ.

ADVERTISEMENT

ವಿಶೇಷವೆಂದರೆ, ಪರ್ಯಾಯ ಚಿತ್ರಗಳ ನಾಯಕಿಯರ ಪೈಕಿ ಹಲವರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರೆ, ಇನ್ನು ಕೆಲವರು ಈಗಾಗಲೇ ಹಾಲಿವುಡ್ ಚಿತ್ರಗಳಲ್ಲಿ ಮತ್ತು ಅಮೆರಿಕನ್ ಕಿರುತೆರೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತಮ ಅಭಿನಯಕ್ಕಾಗಿ ಹಲವರು ಪ್ರಶಸ್ತಿ, ಪುರಸ್ಕಾರಗಳನ್ನು ಸಹ ಗಳಿಸಿದ್ದಾರೆ.

ನಿಮ್ರತ್ ಕೌರ್‌

ಇರ್ಫಾನ್‌ ಖಾನ್ ಅಭಿನಯದ ‘ದಿ ಲಂಚ್‌ ಬಾಕ್ಸ್‌’ (2013) ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಭಾರತೀಯ ಪ್ರೇಕ್ಷಕರ ಮನಗೆದ್ದ ನಿಮ್ರತ್ ಕೌರ್ ಇದಕ್ಕೂ ಮುನ್ನ ಅನುರಾಗ ಕಶ್ಯಪ್ ನಿರ್ದೇಶನದ ‘ಪೆಡ್ಲರ್ಸ್’ ಚಿತ್ರದಲ್ಲಿ ಕಾಣಿಸಿಕೊಂಡರು. ಕೇನ್ಸ್ ಚಲನಚಿತ್ರೋತ್ಸವದಲ್ಲಿ (2012) ‘ಪೆಡ್ಲರ್ಸ್’ ಚಿತ್ರವು ವಿಶೇಷವಾಗಿ ಗಮನ ಸೆಳೆಯಿತು ಅಲ್ಲದೇ ನಿಮ್ರತ್ ಕೌರ್‌ಗೆ ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಲು ಅವಕಾಶ ಲಭಿಸಿತು. ಅಮೆರಿಕದ ಕಿರುತೆರೆಯಲ್ಲಿ ಪ್ರಸಾರವಾದ ‘ಹೋಮ್‌ಲ್ಯಾಂಡ್‌’ನಲ್ಲಿ ಅವರು ‘ಐಎಸ್ಐ’ ಏಜೆಂಟ್ ಪಾತ್ರ ನಿರ್ವಹಿಸಿದರು.

ಆಸಕ್ತಿಕರ ವಿಷಯವೆಂದರೆ, ನಿಮ್ರತ್ ಕೌರ್ ಚಿತ್ರರಂಗವನ್ನು 2006ರಲ್ಲಿ ಪ್ರವೇಶಿಸಿದ್ದು ‘ಒನ್ ನೈಟ್ ವಿತ್ ದಿ ಕಿಂಗ್’ ಎಂಬ ಇಂಗ್ಲಿಷ್ ಚಿತ್ರದ ಮುಖಾಂತರ.

ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್

ನವದೆಹಲಿಯಲ್ಲಿ ಜನಿಸಿರುವ ಸ್ವರಾ ಭಾಸ್ಕರ್ ಅವಕಾಶ ಸಿಕ್ಕದೊಡನೇ ನೇರವಾಗಿ ಚಿತ್ರರಂಗ ಪ್ರವೇಶಿಸಿದವರಲ್ಲ. ನೌಕಾ ಸೇನಾಧಿಕಾರಿಯಾದ ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಹುಡುಗಿ ಈಕೆ. ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಚಿತ್ರರಂಗದತ್ತ ಗಮನ ಹರಿಸಿದರು. ಆರಂಭಿಕ ಹಂತದಲ್ಲಿ ಒಂದೆರಡು ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣಲಿಲ್ಲ. ಆದರೆ ಅವರು ತಮ್ಮ ಪಟ್ಟು ಬಿಡಲಿಲ್ಲ.

ತನು ವೆಡ್ಸ್ ಮನು (2011), ರಾಂಝನಾ (2013) ಚಿತ್ರಗಳಲ್ಲಿನ ಅವರ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ಅಲ್ಲಿಂದ ಅವರಿಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ‘ಪ್ರೇಮರಥನ ಧನ ಪಾಯೋ’, ‘ನೀಲ್ ಬಟೇ ಸನ್ನಾಟ’, ‘ಅನಾರಕಲಿ ಆಫ್ ಆರ್ಹ’ ಚಿತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟವು. ರಾಜಕೀಯದ ಬಗ್ಗೆಯೂ ಆಸಕ್ತಿ ಹೊಂದಿರುವ ಅವರು ಇತ್ತೀಚೆಗೆ ಕೆಲ ದಿನ ಕನ್ನಯ್ಯಕುಮಾರ್ ಅವರ ಪರವಾಗಿ ಪ್ರಚಾರ ನಡೆಸಿದರು.

ರಿಚಾ ಚಡ್ಡಾ

ಕಮರ್ಷಿಯಲ್ ಚಿತ್ರಗಳ ಪ್ರಮುಖ ಪಾತ್ರಗಳಿಗಿಂತ ಪರ್ಯಾಯ ಚಿತ್ರಗಳ ಪ್ರಧಾನ ಪಾತ್ರಗಳಲ್ಲಿ ಛಾಪು ಬೀರುವೆ ಎಂದು ಪಣ ತೊಟ್ಟು ಪ್ರವೇಶಿಸಿದ ರಿಚಾ ಚಡ್ಡಾ ತಮ್ಮ ಮಾತಿನಂತೆಯೇ ಈಗಲೂ ನಡೆದುಕೊಳ್ಳುತ್ತಿದ್ದಾರೆ.

ಮಸಾನ್ (2015) ಚಿತ್ರದಲ್ಲಿ ಅವರು ನಿಭಾಯಿಸಿದ ಪಾತ್ರವು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಂಸೆಗೆ ಒಳಗಾಯಿತು. ‘ಗ್ಯಾಂಗ್ಸ್ ಆಫ್ ವಾಸೀಪುರ’, ‘ಗಲಿಯೊ ಕಿ ರಾಸಲೀಲಾ ರಾಮಲೀಲಾ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.