‘ಅಂಬಾನಿ’ ಎನ್ನುವ ಹೆಸರು ಜನರಿಗೆ ಅಪರಿಚಿತವೇನೂ ಅಲ್ಲ. ಅಷ್ಟೇ ಅಲ್ಲ, ಅದು ಯಾರ ಹೆಸರು ಎಂಬುದೂ ಗೊತ್ತು. ‘ಅಂಬಾನಿ ಪುತ್ರ’ ಅಂದರೆ ಯಾರು ಎಂಬುದೂ ಜನರಿಗೆ ಸುಲಭವಾಗಿ ಗೊತ್ತಾಗುತ್ತದೆ. ಆದರೆ, ಕನ್ನಡದಲ್ಲಿ ಸಿದ್ಧವಾಗಿರುವ ಹೊಸ ಚಿತ್ರ ‘ಅಂಬಾನಿ ಪುತ್ರ’, ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ್ದಂತೂ ಅಲ್ಲ!
‘ಇದು ಅಂಬಾನಿ ಅವರ ಕತೆ ಅಲ್ಲ. ದುಡ್ಡು ಇದ್ದು, ತಲೆತಿರುಗುವಂತೆ ಆಡುತ್ತಿರುವವರನ್ನು ಕಂಡಾಗ ಹಳ್ಳಿ ಕಡೆಗಳಲ್ಲಿ ಅಂಬಾನಿ ಪುತ್ರ ಎಂದು ಕರೆಯುತ್ತಾರಂತೆ. ಒಂದು ಊರಿನ ಹುಡುಗನೊಬ್ಬ ಬಿಂದಾಸ್ ಆಗಿ, ಚಂಚಲ ಮನಸ್ಸುಳ್ಳವನಾಗಿ ಇರುತ್ತಾರೆ. ಅವನ ಕಥೆ ಇದು’ ಎಂದು ಸಿನಿಮಾ ತಂಡವು ಚಿತ್ರದ ಬಗ್ಗೆ ಹೇಳಿಕೊಂಡಿದೆ.
‘ಕಂಡ, ಕೇಳಿದ, ನೋಡಿದ ಕೆಲವು ನೈಜ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದ ಶೀರ್ಷಿಕೆಯ ಅಡಿಯಲ್ಲಿ, ಓದಿರೋದು ಕಾ... ಸೂತ್ರ... ಎಂದು ಬರೆಯಲಾಗಿದೆ. ಇದನ್ನು ಕಾದಂಬರಿ ಎಂದೋ ಕಾಮಿಡಿ ಎಂದೋ ಓದಿಕೊಳ್ಳುವ ಆಯ್ಕೆಯನ್ನು ವೀಕ್ಷಕರಿಗೆ ಬಿಡಲಾಗಿದೆ’ ಎಂದೂ ಸಿನಿತಂಡ ಹೇಳಿದೆ.
ದೊರೆರಾಜ್ ತೇಜ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಸಲ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನಾಯಕನಾಗಿ ಸುಪ್ರೀಂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಡಾನ್ಸರ್ ಆಗಿರುವ ಆಶಾ ಭಂಡಾರಿ ಮತ್ತು ಕಾವ್ಯಾ ಆ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಹಾಸನ, ಮಂಡ್ಯ, ಹೊನ್ನಾವರ, ಮಹಾರಾಷ್ಟ್ರ ಕಡೆ ಚಿತ್ರೀಕರಣ ನಡೆದಿದೆ. ಅಭಿಷೇಕ್ ರಾಯ್ ಅವರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ವಿ. ರಾಮಾಂಜನೇಯ ಛಾಯಾಗ್ರಹಣ ಚಿತ್ರಕ್ಕಿದೆ. ಹಾಸನದ ವೆಂಕಟೇಶ್ ಕೆ.ಎನ್. ಮತ್ತು ವರುಣ್ ಗೌಡ ಚಿತ್ರಕ್ಕೆ ಹಣ ಹೂಡಿದ್ದಾರೆ.
ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಬಂದಿದ್ದರು. ‘ನಿರ್ಮಾಪಕರು ಐವತ್ತೇಳು ಕಥೆಗಳನ್ನು ತಿರಸ್ಕರಿಸಿ, ಈ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದನ್ನು ನೋಡಿದರೆ, ಸಿನಿಮಾ ಬಗ್ಗೆ ಅವರಲ್ಲಿ ಇರುವ ಶ್ರದ್ಧೆ ಗೊತ್ತಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಚೆನ್ನಾಗಿ ಹೋಂವರ್ಕ್ ಮಾಡಿ ಸಿನಿಮಾ ಶುರು ಮಾಡಿದರೆ ಚಿತ್ರ ಚೆನ್ನಾಗಿ ಮೂಡಿಬರುತ್ತದೆ’ ಎಂದು ಕಿವಿಮಾತು ಹೇಳಿದರು.
‘ಚಿತ್ರದ ಟೈಟಲ್ ಕೇಳಿ ಶಾಕ್ ಆಯಿತು, ಸಂತೋಷವೂ ಆಯಿತು. ರಿಯಲ್ ಅಂಬಾನಿಯ ವ್ಯವಹಾರದ ಒಂದು ಪರ್ಸೆಂಟ್ ಮೊತ್ತವಾದರೂ ನಿರ್ಮಾಪಕರಿಗೆ ಮರಳಿ ಬರಲಿ’ ಎಂದು ಲಹರಿ ವೇಲು ಹಾರೈಸಿದರು. ಚಿತ್ರವು ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.