ADVERTISEMENT

ಧ್ವನಿಯೆತ್ತುವ ಮಹಿಳೆಯನ್ನೇ ಅವಮಾನಿಸುತ್ತಿದ್ದ ಕಾಲಕ್ಕೆ ಸರಿದಂತಾಗಿದೆ: ಆ್ಯಂಬರ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 7:54 IST
Last Updated 2 ಜೂನ್ 2022, 7:54 IST
ನಟಿ ಆ್ಯಂಬರ್‌ ಹರ್ಡ್‌
ನಟಿ ಆ್ಯಂಬರ್‌ ಹರ್ಡ್‌   

ಲಾಸ್‌ ಏಂಜಲೀಸ್‌: ಮಾಜಿ ಪತಿ, ಹಾಲಿವುಡ್‌ ಸ್ಟಾರ್‌ ಜಾನಿ ಡೆಪ್‌ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಆ್ಯಂಬರ್‌ ಹರ್ಡ್‌, ಅಮೆರಿಕದ ಪ್ರಜೆಯಾಗಿ ಮುಕ್ತವಾಗಿ ಮತ್ತು ಸ್ವಾತಂತ್ರ್ಯವಾಗಿ ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದು ಹೆಚ್ಚು ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.

ಪ್ರಕರಣದಲ್ಲಿ ಡೆಪ್‌ಗೆ ಪರಿಹಾರವಾಗಿ 10 ಮಿಲಿಯನ್‌ ಡಾಲರ್‌ (77 ಕೋಟಿ) ಮತ್ತು ದಂಡನೆಗೆ ಪರಿಹಾರವಾಗಿ 5 ಮಿಲಿಯನ್‌ ಡಾಲರ್‌ (38 ಕೋಟಿ) ನೀಡುವಂತೆ ವರ್ಜಿನಿಯಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆ್ಯಂಬರ್‌ ಹರ್ಡ್‌ ಟ್ವಿಟರ್‌ನಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದಾರೆ.

ನನ್ನ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಬೆಟ್ಟದಷ್ಟು ಸಾಕ್ಷಿಗಳಿದ್ದರೂ ತಾರತಮ್ಯದ ಅಧಿಕಾರ, ಪ್ರಭಾವಗಳನ್ನು ಎದುರಿಸಿ ನಿಲ್ಲಲು ಸಾಕಾಗಲಿಲ್ಲ ಎಂಬುದನ್ನು ತಿಳಿದು ಹೃದಯ ಒಡೆದುಹೋಗಿದೆ ಎಂದು ಆ್ಯಂಬರ್‌ ಹರ್ಡ್‌ ಹೇಳಿದ್ದಾರೆ.

ADVERTISEMENT

ಎಲ್ಲದಕ್ಕಿಂತ ಹೆಚ್ಚಾಗಿ ಬೇರೆ ಮಹಿಳೆಯರಿಗೂ ಈ ತೀರ್ಪು ಪ್ರಮುಖವಾಗಿತ್ತು ಎಂಬುದು ನೋವು ನೀಡುತ್ತಿದೆ. ಇದೊಂದು ಹಿನ್ನಡೆ. ಈ ತೀರ್ಪು ಧ್ವನಿಯೆತ್ತಿದ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದ ಕಾಲಕ್ಕೆ ಕೊಂಡೊಯ್ದಂತೆ ಆಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುವ ಕಾಲದಿಂದ ಹಿಂದೆ ಸರಿದಂತಾಗಿದೆ ಎಂದು ಹರ್ಡ್‌ ನಿರಾಶೆ ವ್ಯಕ್ತಪಡಿಸಿದ್ದಾರೆ.

ಮಾಜಿ ಪತಿ ಜಾನಿ ಡೆಪ್‌ ಪರ ವಕೀಲರು ಪ್ರಕರಣವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಇಂಗ್ಲೆಂಡ್‌ನಲ್ಲಿ ಗೆದ್ದಿದ್ದ ಇದೇ ಪ್ರಕರಣದಲ್ಲಿ ನಿರ್ಣಾಯಕವಾಗಿದ್ದ ಸಾಕ್ಷಿಗಳನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಕ್ಷಿಗಳ ನಿರ್ಲಕ್ಷ್ಯಗಳಂತಹ ಪ್ರಮುಖ ಸಂಗತಿಗಳಿಂದ ನ್ಯಾಯಮೂರ್ತಿಗಳನ್ನು ವಿಮುಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಸೋತಿದ್ದಕ್ಕೆ ನನಗೆ ಬೇಸರವಿದೆ. ಅಮೆರಿಕದ ಪ್ರಜೆಯಾಗಿ ಮುಕ್ತವಾಗಿ ಮತ್ತು ಸ್ವಾತಂತ್ರ್ಯವಾಗಿ ಮಾತನಾಡುವ ಹಕ್ಕು ನನಗಿತ್ತು ಎಂದು ಭಾವಿಸಿದ್ದೆ. ಆದರೆ ಆ ಹಕ್ಕು ಇಲ್ಲ ಎಂಬುದು ನನ್ನ ಅತೀವ ಬೇಸರಕ್ಕೆ ಕಾರಣವಾಗಿದೆ ಎಂದು 36 ವರ್ಷದ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.