ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಬಾದ್ ಷಾ ಅಮಿತಾಬ್ ಬಚ್ಚನ್, ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಅಕ್ಷಯ್ ಕುಮಾರ್. ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಸಿನಿಮಾ ರಂಗದ ಅನೇಕರಿಗೆ ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ.
ಸಿನಿಮಾ ರಂಗದ ನಟ, ನಟಿಯರು, ನಿರ್ದೇಶಕರು, ಗಾಯಕರು ಸೇರಿದಂತೆ ಅನೇಕರಿಗೆ ಆಹ್ವಾನ ನೀಡಲಾಗಿದ್ದು ಈ ಸಂಬಂಧ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಮಿತಾಬ್ ಬಚ್ಚನ್ ಅವರು ಖಾಸಗಿ ಜೆಟ್‌ನಲ್ಲಿ ಸೋಮವಾರ (ಜನವರಿ 22) ಅಯೋಧ್ಯೆಗೆ ಆಗಮಿಸಲಿದ್ದಾರೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಹಾಗೂ ಮೋಹನ್ ಲಾಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್, ನಟಿ ಕಂಗನಾ ರನೌತ್, ಬಿಜೆಪಿ ಸಂಸದರಾದ ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್ ಅವರನ್ನು ಆಹ್ವಾನಿಸಿದೆ.
ನಟಿ ಮಾಧುರಿ ದೀಕ್ಷಿತ್ ಹಾಗೂ ಅವರ ಪತಿ ಶ್ರೀರಾಮ್ ನೆನೆ ಅವರನ್ನೂ ಆಹ್ವಾನಿಸಲಾಗಿದೆ. ನಟ ಅನುಪಮ್ ಖೇರ್, ನಿರ್ದೇಶಕರಾದ ಮಧುರ್ ಭಂಡಾರ್ಕರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಹಾಗೂ ಅವರ ಪತ್ನಿ, ಗಾಯಕರಾದ ಶ್ರೇಯಾ ಘೋಷಾಲ್, ಕೈಲಾಶ್ ಖೇರ್, ಶಂಕರ್ ಮಹಾದೇವನ್, ಅನುಪ್ ಜಲೋಟಾ, ಸೋನು ನಿಗಮ್ ಸೇರಿದಂತೆ ಅನುರಾಧಾ ಪೊಡವಾಲ್ ಅವರನ್ನು ಆಹ್ವಾನಿಸಲಾಗಿದೆ.
ಪ್ರಸಿದ್ಧ ಟಿ.ವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ.
ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಗಾಯಕಿ ಮಾಲಿನಿ ಅವಸ್ತಿ, ಪ್ರಸಿದ್ಧ ಸರೋದ್ ವಾದಕ ಅಮ್ಜದ್ ಅಲಿ, ಸಂಗೀತಗಾರ ಇಳಯರಾಜ ಮತ್ತು ದಿವಂಗತ ಲತಾ ಮಂಗೇಶ್ಕರ್ ಅವರ ಕುಟುಂಬದ ಸದಸ್ಯರನ್ನೂ ಆಹ್ವಾನಿಸಿದೆ.
ಆಹ್ವಾನದ ಪಟ್ಟಿಯಲ್ಲಿರುವ ಕೆಲವರು ಜನವರಿ 22 ರಂದು ಖಾಸಗಿ ಜೆಟ್‌ಗಳಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರೆ, ಇತರರು ಒಂದು ದಿನ ಮುಂಚಿತವಾಗಿ ಅಯೋಧ್ಯೆ ಅಥವಾ ಹತ್ತಿರದ ನಗರಗಳಲ್ಲಿ ತಂಗಲಿದ್ದಾರೆ.
ಈ ಪೈಕಿ ಎಷ್ಟು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.