ADVERTISEMENT

ಅಮಿತಾಬ್‌ ಬಾಡಿಗಾರ್ಡ್‌ ವಾರ್ಷಿಕ ಗಳಿಕೆ ₹ 1.5 ಕೋಟಿ; ಮುಂಬೈ ಪೊಲೀಸ್‌ ತನಿಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 6:50 IST
Last Updated 27 ಆಗಸ್ಟ್ 2021, 6:50 IST
ಚಿತ್ರೀಕರಣಕ್ಕೆ ತೆರಳುತ್ತಿರುವ ಸಂದರ್ಭವೊಂದರಲ್ಲಿ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ನೀಡಲಾಗಿರುವ ಭದ್ರತೆ–ಸಂಗ್ರಹ ಚಿತ್ರ
ಚಿತ್ರೀಕರಣಕ್ಕೆ ತೆರಳುತ್ತಿರುವ ಸಂದರ್ಭವೊಂದರಲ್ಲಿ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ನೀಡಲಾಗಿರುವ ಭದ್ರತೆ–ಸಂಗ್ರಹ ಚಿತ್ರ   

ಮುಂಬೈ: ಬಾಲಿವುಡ್‌ 'ಬಿಗ್‌ ಬಿ' ಅಮಿತಾಬ್‌ ಬಚ್ಚನ್‌ ಅವರ ಅಂಗರಕ್ಷಕನ ವಾರ್ಷಿಕ ಗಳಿಕೆ 1.5 ಕೋಟಿ ರೂಪಾಯಿ ಎಂದು ಸುದ್ದಿ ಹರಿದಾಡಿದ್ದು, ಅದರ ಬೆನ್ನಲ್ಲೇ ಆ ಅಂಗರಕ್ಷಕನ ವರ್ಗಾವಣೆಯಾಗಿದೆ. ಆತನ ವಿರುದ್ಧ ಪೊಲೀಸ್‌ ಇಲಾಖೆ ವಿಚಾರಣೆ ಆರಂಭಿಸಿದೆ.

ಮುಂಬೈ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಜಿತೇಂದ್ರ ಶಿಂದೆ ಹಲವು ವರ್ಷಗಳಿಂದ ಅಮಿತಾಬ್‌ ಅವರಿಗೆ ಅಂಗರಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಂದೆ ವಾರ್ಷಿಕ ಗಳಿಕೆ 1.5 ಕೋಟಿ ರೂಪಾಯಿ ಇರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅಮಿತಾಬ್‌ ಅವರಿಂದಲೇ ಶಿಂದೆ ಹಣ ಪಡೆದಿದ್ದಾರೆಯೇ ಅಥವಾ ಬೇರೆ ಮೂಲಗಳಿಂದ ಹಣ ಸಂದಾಯವಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವುದಾಗಿ ಶಿಂದೆ ಪೊಲೀಸರಿಗೆ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಅವರ ಸೆಕ್ಯುರಿಟಿ ಏಜೆನ್ಸಿ ಕಡೆಯಿಂದ ಹಲವು ಸೆಲೆಬ್ರಿಟಿಗಳು ಹಾಗೂ ಇತರೆ ಗಣ್ಯ ವ್ಯಕ್ತಿಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಿರುವುದಾಗಿ ವರದಿಯಾಗಿದೆ. ತನ್ನ ಪತ್ನಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವುದಾಗಿ ಶಿಂದೆ ಪೊಲೀಸರಿಗೆ ತಿಳಿಸಿದ್ದಾರೆ. ಹಾಗೇ ಅಮಿತಾಬ್‌ ಬಚ್ಚನ್‌ ಅವರಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಮುಂಬೈ ಪೊಲೀಸರ ಪ್ರಕಾರ, ಒಂದೇ ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಗೆ ಐದು ವರ್ಷಗಳಿಗೂ ಹೆಚ್ಚು ಸಮಯ ಕರ್ತವ್ಯ ನಿರ್ವಹಿಸಲು ಅವಕಾಶವಿರುವುದಿಲ್ಲ. ಅಮಿತಾಬ್‌ ಅವರ ಅಂಗರಕ್ಷಕನಾಗಿ ಜಿತೇಂದ್ರ ಶಿಂದೆ 2015ರಿಂದ ಕರ್ತವ್ಯದಲ್ಲಿದ್ದರು. ಅಮಿತಾಬ್‌ ಅವರಿಗೆ ಎಕ್ಸ್‌ ಶ್ರೇಣಿಯ ಭದ್ರತೆ ನೀಡಲಾಗಿದ್ದು, ಸದಾ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅವರ ರಕ್ಷಣೆಗೆ ನಿಯೋಜಿಸಲಾಗುತ್ತಿದೆ.

ಅಮಿತಾಬ್‌ ಅವರೊಂದಿಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಜಿತೇಂದ್ರ ಶಿಂದೆ ಇರುತ್ತಿದ್ದರು ಹಾಗೂ ಅಮಿತಾಬ್‌ ಅವರಿಗೂ ಶಿಂದೆ ಮೆಚ್ಚಿನ ಅಂಗರಕ್ಷಕರಲ್ಲಿ ಒಬ್ಬರಾಗಿದ್ದರು. ಪ್ರಸ್ತುತ ಅವರನ್ನು ದಕ್ಷಿಣ ಮುಂಬೈನ ಪೊಲೀಸ್‌ ಠಾಣೆಯೊಂದಕ್ಕೆ ವರ್ಗಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.