ಮುಂಬೈ: ಯಾವ ಮಹಿಳೆಯನ್ನೂ ದುಷ್ಕೃತ್ಯಕ್ಕೆ ಒಳಪಡಿಸಬಾರದು ಎಂದು ಹಿರಿಯ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಲು ಬಚ್ಚನ್ ನಿರಾಕರಿಸಿದ್ದರು. ಕೊನೆಗೂ #MeToo ಅಭಿಯಾನದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ದೂರು
ಜನ್ಮದಿನದ ಸಂದರ್ಭ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ಮಹಿಳೆಯನ್ನೂ ಅದರಲ್ಲೂ ಕೆಲಸದ ಸ್ಥಳದಲ್ಲಿ ದುರುಪಯೋಗಕ್ಕೆ ಅಥವಾ ಅಕ್ರಮ ವರ್ತನೆಗೆ ಒಳಪಡಿಸಬಾರದು. ಅಂತಹ ಘಟನೆ ನಡೆದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅದು ದೂರು ನೀಡುವ ಮೂಲಕ ಅಥವಾ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಆಗಿರಬಹುದು’ ಎಂದು ಹೇಳಿದ್ದಾರೆ.
‘ಶಿಸ್ತು, ನಾಗರಿಕತೆ, ಸಾಮಾಜಿಕತೆ ಮತ್ತು ನೈತಿಕತೆ ಬಗ್ಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಗಮನಹರಿಸಬೇಕು. ನಮ್ಮ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲರಾಗಿದ್ದಾರೆ. ಅವರಿಗೆ ವಿಶೇಷ ರಕ್ಷಣೆ ನೀಡಬೇಕಾದ ಅಗತ್ಯವಿದೆ. ನಮ್ಮ ದೇಶದಲ್ಲಿ ಹೆಚ್ಚಿನ ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವುದು ಸಂತಸದ ವಿಚಾರ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ, ಅವರಿಗೆ ಸೂಕ್ತ ರಕ್ಷಣೆ ಒದಗಿಸದಿದ್ದರೆ ಅದು ಸರಿಪಡಿಸಲಾರದ ಕಳಂಕವಾದೀತು’ ಎಂದು ಬಚ್ಚನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.