ಪಣಜಿ: ‘ಅಮಿತಾಭ್ ಬಚ್ಚನ್ ನನಗೆ ಸ್ಫೂರ್ತಿ. ಇಂಥದೊಂದು ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನನಗೆ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಪ್ರತಿಕ್ರಿಯಿಸಿದರು.
ಗೋವಾದ ಶ್ಯಾಮ್‌ಪ್ರಕಾಶ್ ಮುಖರ್ಜಿ ಕ್ರೀಡಾಂಗಣದಲ್ಲಿ ಬುಧವಾರ ‘ಐಕಾನ್ ಆಫ್ ಗೋಲ್ಡನ್ ಜುಬಿಲಿ’ ಪ್ರಶಸ್ತಿ ಸ್ವೀಕರಿಸಿ ಅವರು ಚುಟುಕಾಗಿ ಮಾತನಾಡಿದರು.
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೊತ್ಸವದ ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರಿಗೆ ಅಮಿತಾಭ್ ಬಚ್ಚನ್ ಪ್ರಶಸ್ತಿ ಪ್ರದಾನ ಮಾಡಿದರು.
ತಮಗೆ ಅವಕಾಶ ಕೊಟ್ಟ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಮೆಚ್ಚುತ್ತಾ ಬಂದ ಅಭಿಮಾನಿಗಳಿಗೆ ಪ್ರಶಸ್ತಿಯನ್ನು ರಜನಿ ಅರ್ಪಿಸಿದರು. ತಮಿಳಿನಲ್ಲಿಯೂ ಒಂದೆರಡು ಸಾಲು ಆಡಿದ ಅವರ ಮಾತಿಗೆ ಚಪ್ಪಾಳೆ ಸಂದಿತು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಸಿನಿಮಾ ಚಿತ್ರೀಕರಣಕ್ಕೆ ಹದಿನೈದು ಇಪ್ಪತ್ತು ಪ್ರತ್ಯೇಕ ಅನುಮತಿ ಪಡೆಯುವ ಉಸಾಬರಿ ತಪ್ಪಿಸಲು ಏಕ ಗವಾಕ್ಷಿ ಪದ್ಧತಿ ಜಾರಿಗೆ ತಂದಿರುವುದನ್ನು ಪುನರುಚ್ಚರಿಸಿದರು. ಇಂತಹ ಸೌಕರ್ಯದ ಲಾಭ ಪಡೆದು ಗೋವಾ ಚಿತ್ರೀಕರಣದ ವಿಷಯದಲ್ಲಿ ಇನ್ನಷ್ಟು ಬೆಳೆಯಲಿ ಎಂಬ ಅವರ ಆಶಯವನ್ನು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಸಮರ್ಥಿಸಿದರು.
ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ 1970ರ ದಶಕದಿಂದ ಅಭಿನಯಿಸಿರುವ ಇಸಾಬೆಲ್ ಹ್ಯೂಪರ್ಟ್ ಅವರಿಗೆ ಜೀವಮಾನದ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಂಕರ್ ಮಹದೇವನ್ ನೇತೃತ್ವದ ತಂಡ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ಕಾರ್ಯಕ್ರಮದ ನೆನಪಿಗಾಗಿ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಯಿತು. ರಮೇಶ್ ಸಿಪ್ಪಿ, ಎನ್. ಚಂದ್ರ, ಪಿ.ಸಿ. ಶ್ರೀರಾಮ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಕಾಣಿಕೆ ಸ್ಮರಿಸಿ, ಅವರನ್ನು ಗೌರವಿಸಲಾಯಿತು. ಹಿಂದಿ ಚಿತ್ರ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಕಾರ್ಯಕ್ರಮ ನಿರೂಪಿಸಿದರು.
‘ಡಿಸ್ಪೈಟ್ ದಿ ಫಾಗ್’ ಇಟಲಿಯನ್ ಚಿತ್ರ ಪ್ರದರ್ಶನದ ಮೂಲಕ ಚಿತ್ರೋತ್ಸವ ಅಧಿಕೃತವಾಗಿ ರಸಿಕರ ಸೆಳೆಯಿತು.
‘ರಜನಿ ನನ್ನ ಕುಟುಂಬದ ಸದಸ್ಯ’
‘ರಜನಿ ಕೆಳಗಿನಿಂದ ಮೇಲಕ್ಕೇರಿದ ಅಪರೂಪದ ನಟ. ನನ್ನ ಕುಟುಂಬದ ಸದಸ್ಯನಿದ್ದಂತೆ. ನಾವು ಪರಸ್ಪರ ಸಲಹೆಗಳನ್ನು ನೀಡುತ್ತಿರುತ್ತೇವೆ. ಆದರೆ, ಅವನ್ನು ಪಾಲಿಸುತ್ತೇವೋ ಇಲ್ಲವೋ ಎನ್ನುವುದು ಬೇರೆ ಮಾತು. ಎಷ್ಟೋ ಸಲ ಅವರು ಬೇಡ ಅಂದಿದ್ದನ್ನು ನಾನು, ನಾನು ಬೇಡ ಅಂದಿದ್ದನ್ನು ಅವರು ಮಾಡಿರುವುದು ಇದೆ’ ಎಂದು ಅಮಿತಾಭ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಅಮಿತಾಭ್ ರೆಟ್ರೊಸ್ಪೆಕ್ಟಿವ್’ ವಿಭಾಗದಲ್ಲೂ ಕೆಲವು ಸಿನಿಮಾಗಳು ಪ್ರದರ್ಶನ ಕಾಣಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.