ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಲಾಸ್ ಏಂಜಲಿಸ್ ಸನ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.
ಕಳೆದ ವಾರವಷ್ಟೇ ‘ಅಮೃತಮತಿ’ ಚಿತ್ರವು ಇದೇ ಲಾಸ್ ಏಂಜಲಿಸ್‌ನ ಇಂಡಿಪೆಂಡೆಂಟ್ ಚಿತ್ರೋತ್ಸವಕ್ಕೆ ಆಯ್ಕೆ ಆಗಿತ್ತು. ಈ ಮೂಲಕ ಇಲ್ಲಿಯವರೆಗೆ ಹತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಈ ಚಿತ್ರವು ಆಯ್ಕೆ ಆಗಿದ್ದು, ಎರಡು ಚಿತ್ರೋತ್ಸವಗಳಲ್ಲಿ ನಟಿ ಹರಿಪ್ರಿಯಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಬಂದಿದೆ. ಅಮೇರಿಕದ ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶಿ ಭಾಷಾ ಚಿತ್ರ ಪ್ರಶಸ್ತಿಯನ್ನು ಈ ಚಿತ್ರವು ಪಡೆದಿತ್ತು. ಕವಿ ಜನ್ನನಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ರಚಿಸಿದ ಈ ಚಿತ್ರವು 11ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ವಿಶೇಷ ಚಿತ್ರ’ ಎಂಬ ಮನ್ನಣೆಯನ್ನೂ ಪಡೆದಿದೆ. ‘ಈ ಎಲ್ಲ ಮನ್ನಣೆಗಳು ಕನ್ನಡ ಸಿನಿಮಾ ಮತ್ತು ಸಾಹಿತ್ಯ ಎರಡಕ್ಕೂ ಸಂದ ಗೌರವವೆಂದು ಭಾವಿಸುತ್ತೇನೆ’ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ನಟಿಸಿದ್ದಾರೆ. ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಷ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ತಾರಾಗಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.