ADVERTISEMENT

ಸಂದರ್ಶನ: ಅಡಗದ ಗೌರಿಯ ದನಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 20 ಮೇ 2023, 23:43 IST
Last Updated 20 ಮೇ 2023, 23:43 IST
ಚಿತ್ರೀಕರಣದ ಸಂದರ್ಭದಲ್ಲಿ ಕವಿತಾ
ಚಿತ್ರೀಕರಣದ ಸಂದರ್ಭದಲ್ಲಿ ಕವಿತಾ   

ಸಂದರ್ಶನ: ಪ್ರತಿಭಾ ನಂದಕುಮಾರ್

‘ಗೌರಿ’ ಸಾಕ್ಷ್ಯಚಿತ್ರಕ್ಕೆ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ 2023ರ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಸಂದಿದೆ. ಈ ಸಾಕ್ಷ್ಯಚಿತ್ರ ಮಾಡಿದ ಬಗೆಯನ್ನು ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಅವರು ಈ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅವರು ನಿರ್ದೇಶಿಸಿದ ‘ಗೌರಿ’ ಸಾಕ್ಷ್ಯಚಿತ್ರಕ್ಕೆ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಚಿತ್ರೋತ್ಸವ 2023ರ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ನೀಡಲಾಗಿದೆ. ಇದು ಈ ಸಾಕ್ಷ್ಯಚಿತ್ರಕ್ಕೆ ಸಂದ ಎರಡನೇ ಅಂತರರಾಷ್ಟ್ರೀಯ ಪ್ರಶಸ್ತಿ–2022ರಲ್ಲಿ ಟೊರಾಂಟೋ ಮಹಿಳಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಮಾನವ ಹಕ್ಕು ಚಿತ್ರ ಪ್ರಶಸ್ತಿ ನೀಡಲಾಗಿತ್ತು. ಈ ಚಿತ್ರ ಆಮ್‌ಸ್ಟರ್ಡಾಮ್‌ನ ಫ್ರೀ ಪ್ರೆಸ್ ಅನ್ ಲಿಮಿಟೆಡ್ ನಿಯೋಜಿಸಲಾದ ಸಾಕ್ಷ್ಯಚಿತ್ರ.

ADVERTISEMENT

ಈ ಪ್ರಶಸ್ತಿಯಿಂದ ಸಂತೋಷ ಪಡಬೇಕೋ ದುಃಖ ಪಡಬೇಕೋ ತಿಳಿಯದಂತಹ ಮಿಶ್ರ ಭಾವೋದ್ವೇಗ ಗೌರಿ ಮತ್ತು ಕವಿತಾ ಇಬ್ಬರನ್ನೂ ಬಲ್ಲವರನ್ನು ಆವರಿಸಿಕೊಳ್ಳುತ್ತದೆ.

ತನ್ನ ಬೌದ್ಧಿಕ ಚಿಂತನೆ, ಸಾಮಾಜಿಕ ಕಳಕಳಿ, ದಿಟ್ಟತನಕ್ಕಾಗಿಯೇ ಅನ್ಯಾಯವಾಗಿ ಹತ್ಯೆಗೀಡಾದ ಗೌರಿ ಲಂಕೇಶ್; ಮಾನಸಿಕವಾಗಿ ಜರ್ಜರಿತಳಾದರೂ, ದೈಹಿಕವಾಗಿ ಅಡಗಿಸಿದರೂ ವಿಶ್ವದಲ್ಲಿ ಗೌರಿಯ ಧ್ವನಿ ಅಡಗದಂತೆ ಕಾಪಿಡುವ ನಿರಂತರ ಪ್ರಯತ್ನದಲ್ಲಿದ್ದಾರೆ ತಂಗಿ ಕವಿತಾ ಲಂಕೇಶ್. ಈ ಸಂದರ್ಶನದುದ್ದಕ್ಕೂ ಕವಿತಾ ಲಂಕೇಶ್ ಅಕ್ಕನ ಬಗ್ಗೆ ಹೆಮ್ಮೆ, ತನ್ನ ದುಃಖ, ಸಂಕಟ, ಅಳು, ಹತಾಶೆ, ಅದರ ನಡುವೆಯೇ ಅವಳ ಧ್ವನಿಯನ್ನು ಉಳಿಸಿಕೊಂಡು ಬರುವ ಛಲ ಎಲ್ಲ ಭಾವನಾತ್ಮಕ ಪದರಗಳನ್ನು ದಾಟಿಸಿದರು. ಆ ಭಾವಸಮುದ್ರದ ಕೆಲವು ಕ್ಷಣಗಳು ಇಲ್ಲಿವೆ. ಇದು ಬೆಂಗಳೂರಿನಲ್ಲಿ ಒಂದೇ ಪ್ರದರ್ಶನ ಕಂಡಿದೆ. ಹೆಚ್ಚು ಜನರು ಬೇಗನೆ ನೋಡುವಂತಾಗಲಿ.

ಈ ಸಾಕ್ಷ್ಯಚಿತ್ರದ ಅಗತ್ಯದ ಕುರಿತು ಹೇಳಿ. ನಿಮ್ಮ ಉದ್ದೇಶ ಏನಿತ್ತು ಇದನ್ನು ಮಾಡುವಾಗ?

ಗೌರಿಯನ್ನು ಸೈಲೆಂಟ್ ಮಾಡಿದರು. ಆದರೆ ಅವಳ ಧ್ವನಿಗೆ ಸಾವಿಲ್ಲ ಎನ್ನುವುದನ್ನು ಹೇಳಬೇಕಿತ್ತು. ಅವಳನ್ನು ಸುಮ್ಮನಾಗಿಸಲು ಅವಳ ಹತ್ಯೆ ಮಾಡಿದರು. ಅದಕ್ಕೂ ಮೊದಲು ಅವಳು ಮಾತನಾಡಬಾರದು, ದನಿ ಎತ್ತಬಾರದು ಎಂದು ಅವಳ ಮೇಲೆ ಬಹಳ ಒತ್ತಡ ತಂದರು. ಅವಳು ಯಾವುದಕ್ಕಾಗಿ ಹೋರಾಡುತ್ತಿದ್ದಳೋ ಅದರ ಬಗ್ಗೆ ಸ್ಪಷ್ಟಪಡಿಸುವ ಅಗತ್ಯ ಇತ್ತು ನನಗೆ. ಅವಳಿಗೆ ನಕ್ಸಲರ ಜೊತೆ ಸಂಬಂಧ ಇದೆ ಅಂತ ಆರೋಪಿಸಿದರು. ಅವಳು ನಿಜವಾಗಿ ಹೇಳಿದ್ದು ನಕ್ಸಲರನ್ನು ಹಿಂಸೆ ಬಿಟ್ಟು ಬನ್ನಿ, ಡೆಮಾಕ್ರಟಿಕ್ ಆಗಿ ಹೋರಾಡಿ ಅಂತ. ಇದೆಲ್ಲ ಹೋರಾಟ ಅವಳು ಒಬ್ಬಳೇ ಮಾಡಲಿಲ್ಲ, ಅವಳ ಜೊತೆ ಗಿರೀಶ ಕಾರ್ನಾಡ, ಮರುಳಸಿದ್ದಪ್ಪ, ದೊರೆಸ್ವಾಮಿ, ಪ್ರೊ. ಶ್ರೀಧರ್ ಮುಂತಾದವರೆಲ್ಲ ಇದ್ದರು. ನನಗೆ ಗೌರಿಯ ನಿಲುವಿನ ಬಗ್ಗೆ ಸ್ಪಷ್ಟತೆ ಕೊಡಬೇಕಿತ್ತು.

ಅದು ಕಷ್ಟಸಾಧ್ಯದ ಪ್ರಯತ್ನ. ಇಲ್ಲಿ ನಿಮಗೆ ಎದುರಾದ ಮೊದಲ ಅಡಚಣೆ ಯಾವುದು, ನಿಮ್ಮ ಅನುಭವ ಏನಿತ್ತು?

ನನ್ನ ಮೇಲೇ ನನಗಿದ್ದ ಸಂದೇಹ! ಇದನ್ನು ಮಾಡಲು ನನಗೆ ಸಾಧ್ಯವಾ, ಗೌರಿಯ ಜೊತೆ ನಡೆದ ಆ ಘೋರ ಪಾತಕವನ್ನು ಮತ್ತೆ ಅನುಭವಿಸುವ ಕ್ಷೋಭೆಯನ್ನು ನಾನು ತಡೆದುಕೊಳ್ಳಬಲ್ಲೆನಾ ಅನ್ನುವ ಸಂಶಯ ಇತ್ತು. ಆದರೆ ಪ್ರತಿದಿನ, ವಾರ ತಿಂಗಳಿಗೊಂದೆರಡು ಸಲ ಜಗತ್ತಿನ ಯಾವಯಾವುದೋ ಮೂಲೆಗಳಿಂದ ಜನ ಫೋನ್ ಮಾಡುತ್ತಲೇ ಇರುತ್ತಾರೆ. ಒಂದು ಫೋಟೋ ಕೊಡಿ, ಇಲ್ಲಿ ಗೌರಿಗೆ ಒಂದು ಆನರ್ ಇಟ್ಟುಕೊಂಡಿದ್ದೇವೆ, ಅವಳ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿದ್ದೇವೆ, ಇನ್ನೆಲ್ಲೋ ಸೆಮಿನಾರ್ ಇಟ್ಟುಕೊಂಡಿದ್ದೇವೆ, ಒಂದು ಸಂದರ್ಶನ ಕೊಡಿ ಅಂತ ಜನ ಗೌರಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ಗೌರಿ ಕೆಲಸ ಮಾಡಿದ ಜಾಗಗಳು, ಜನರನ್ನು ಭೇಟಿ ಮಾಡಿ ಅವರ ಮಾತುಗಳನ್ನು ದಾಖಲಿಸೋಣಾ ಅನ್ನಿಸಿತು. ಅಲ್ಲಿಂದ ಶುರುವಾಯಿತು.

ಆಮ್‌ಸ್ಟರ್ಡಾಮ್‌ನ ‘ಫ್ರೀ ಪ್ರೆಸ್ ಅನ್‌ಲಿಮಿಟೆಡ್’ ನಿಧಿ ನೆರವು ದೊರೆತಿದ್ದು ಹೇಗೆ?

ಆಮ್‌ಸ್ಟರ್‌ಡ್ಯಾಮ್‌ನ ‘ಫ್ರೀ ಪ್ರೆಸ್ ಅನ್‌ಲಿಮಿಟೆಡ್’ ಅವರು ಪತ್ರಿಕಾ ಸ್ವಾತಂತ್ರ್ಯ ಕುರಿತ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಿದ್ದರು. ಎಲ್ಲಾ ಕಡೆಗಳಿಂದಲೂ ಬೇಕಾದಷ್ಟು ಅರ್ಜಿಗಳು ಬಂದಿರುತ್ತವೆ ಅಂತ ಸುಮ್ಮನಾಗಿದ್ದೆ. ನಂತರ ನೋಡೋಣ ಆಂತ ಅರ್ಜಿ ಹಾಕಿದೆ. ಜಗತ್ತಿನ ಹಲವಾರು ಕಡೆಗಳಿಂದ ಸಾವಿರಾರು ಅರ್ಜಿಗಳು ಬಂದಿದ್ದರಲ್ಲಿ ನಾಲ್ಕು ಅರ್ಜಿಯನ್ನು ಮಾತ್ರ ಆರಿಸಿದ್ದರು- ಅದರಲ್ಲಿ ಗೌರಿ ಕೂಡ ಒಂದು. ಪ್ರಪೋಸಲ್ ಸಿದ್ಧಪಡಿಸಲು ನಾನು ಗೌರಿಯ ಜೊತೆ ಸಾಕಷ್ಟು ಕೆಲಸ ಮಾಡಿದ್ದ ಕ್ಯಾಮರಾಮನ್ ದೀಪು, ಗೌರಿಯನ್ನು ನಿಕಟವಾಗಿ ತಿಳಿದಿದ್ದ ತೀಸ್ತಾ ಸಟಲ್ವಾಡ್, ಪತ್ರಕರ್ತ ಆದಿತ್ಯ ಭಾರದ್ವಾಜ್ ಇವರ ಸಹಾಯ ಪಡೆದೆ. ಸ್ಕ್ರಿಪ್ಟ್ ಸಿದ್ಧಪಡಿಸಲು ಐದು ತಿಂಗಳು ಬೇಕಾಯಿತು. ನಮಗೆ ಅವರು ಪ್ರಾಜೆಕ್ಟ್ ಮಂಜೂರು ಮಾಡಿದಾಗ ಕೋವಿಡ್‌ ಲಾಕ್‌ಡೌನ್ ಇತ್ತು. ನಾವು ಹಲವಾರು ಕಡೆ ಶೂಟಿಂಗ್ ಮಾಡಬೇಕಿತ್ತು, ಬೇರೆ ಬೇರೆ ಜನರನ್ನ ಸಂದರ್ಶನ ಮಾಡಬೇಕಿತ್ತು. ದೆಹಲಿ, ಬೆಂಗಳೂರು, ಚಿಕ್ಕಮಗಳೂರು, ದಿಡ್ಡಳ್ಳಿ ಹೀಗೆ ಹಲವಾರು ಕಡೆ ಪ್ರಯಾಣ ಮಾಡಬೇಕಿತ್ತು.

ಇಡೀ ಪ್ರಕ್ರಿಯೆಯಲ್ಲಿ ನಿಮಗೆ ಗೊತ್ತಿಲ್ಲದ ಗೌರಿ ಸಿಕ್ಕಿದ್ಲಾ?

ಅವಳು ಯಾವ ಥರ ಬದುಕಿದ್ದಳು, ಯಾವ ರೀತಿಯಲ್ಲಿ ಜನಗಳ ಮನಸ್ಸನ್ನು ತಲುಪಿದ್ದಳು ಅನ್ನೋದು ಗೊತ್ತಾಯ್ತು. ನಾನು ಯಾವಾಗಲೂ ಅವಳಿಗೆ ಕಂಪ್ಲೇಂಟ್ ಮಾಡ್ತಿದ್ದೆ, ಮನೆಯವರಿಗೆ ಟೈಮ್ ಕೊಡಲ್ಲ ಅಂತ. ಈಶಾನ ಕರಕೊಂಡು ಹೋಗು, ನನ್ನ ಜೊತೆ ಟೈಮ್ ಕಳಿ ಅಂತೆಲ್ಲಾ. ಈಗ ಅನ್ನಿಸಿದೆ, ನಾನು ಎಷ್ಟು ಸಿಲ್ಲಿಯಾಗಿದ್ದೆ ಅಂತ. ಸಮಾಜದಲ್ಲಿ ನಾನು, ನನ್ನ ಕುಟುಂಬ ಅಂತ ಬದುಕುವವರ ನಡುವೆ ಬೇರೆಯವರಿಗಾಗಿ ಬದುಕುವ ಜನರ ಅಗತ್ಯ ಇದೆ. ಅವಳು ಈ ಮಿತಿಗಳನ್ನೆಲ್ಲ ಮೀರಿದ್ದಳು. ವೈಯಕ್ತಿಕ ಅಗತ್ಯಗಳನ್ನು ಮೀರಿದ್ದಳು. ಸ್ವಾರ್ಥದ ಬದುಕು ಅಲ್ಲದ ವಿಸ್ತಾರ ಬದುಕನ್ನು ಅವಳು ಅಪ್ಪಿಕೊಂಡಿದ್ದಳು.

ಹಾಗಂತ ನನಗೆ ಅವಳನ್ನು ಪೆಡಸ್ಟಲ್‌ನಲ್ಲಿ ಇಟ್ಟು ಹೊಗಳುವ, ಈಗೋ ಸೆಂಟ್ರಿಕ್ ದೃಷ್ಟಿಕೋನ ಮಾತ್ರ ಬೇಕಿರಲಿಲ್ಲ. ಅವಳನ್ನು ಒಬ್ಬ ಮನುಷ್ಯಳಾಗಿ ತೋರಿಸಬೇಕಿತ್ತು. ಮೇಕಿಂಗ್ ಹರ್ ಹ್ಯುಮನ್.  ಅವಳನ್ನು ಟೀಕಿಸಿ, ಅವಳ ಚಿಂತನೆ, ನಡೆಗಳನ್ನು ಟೀಕಿಸಿ ಅಂತಲೂ ಹೇಳಿದೆ. ಫಣಿರಾಜ್ ಅವರು ಒಂದು ಮಾತು ಹೇಳಿದ್ದಾರೆ- ಗೌರಿ ಹೇಳಿದ್ದರಲ್ಲಿ ತಪ್ಪಿರಲಿಲ್ಲ, ಹೇಳಿದ ರೀತಿಯಲ್ಲಿ ತಪ್ಪಿತ್ತು ಅಂತ. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕೆಲಸ ಮಾಡಿ ಬಂದು ಕನ್ನಡ ಭಾಷೆಯ ಸೂಕ್ಷ್ಮಗಳನ್ನು ತಿಳಿಯದೇ ಬ್ರಾಷ್ ಆಗಿ ಮಾತಾಡಿಬಿಡುತ್ತಿದ್ದಳು. ಅರ್ಧ ಗಂಟೆ ಆದಮೇಲೆ ಫೋನ್ ಮಾಡಿ ಸಾರಿ ಹಾಗೆ ಮಾತಾಡಬಾರದಿತ್ತು ಅಂತ ಕ್ಷಮೆ ಕೇಳುತ್ತಿದ್ದಳು.

ಈ ಪ್ರಶಸ್ತಿಯ ಸೈಟೇಷನ್‌ನಲ್ಲಿ ಒಂದು ಮಾತು ಹೇಳಿದ್ದಾರೆ ‘A “J’accuse” docu-thriller’ ಅಂತ. ಡಾಕ್ಯೂ ಥ್ರಿಲ್ಲರ್ ಅಂತ ಯಾಕೆ ಅದನ್ನು ಕರೆದಿದ್ದಾರೆ?

ಯಾಕೆಂದರೆ ತನಿಖಾ ದಳದವರ ಸಂದರ್ಶನದಲ್ಲಿ ಇಡೀ ಹತ್ಯೆಯ ಬಗ್ಗೆ ಮತ್ತು ತನಿಖೆಯ ಬಗ್ಗೆ ವಿವರಣೆ ಇದೆ. ತನಿಖಾ ಅಧಿಕಾರಿ ಬಿ.ಕೆ. ಸಿಂಗ್ ಅವರ ಸಂದರ್ಶನ ಇದೆ. ಅವರು ಹೇಗೆ ಹತ್ಯೆ ಮಾಡಿದ ಗುಂಪಿನಲ್ಲಿ ಪರಸ್ಪರ ಒಬ್ಬರಿಗೊಬ್ಬರು ಗೊತ್ತೇ ಇರಲಿಲ್ಲ, ಹೇಗೆ ಪ್ಲಾಟ್ ಮಾಡಿದರು, ಹೇಗೆ ಅದನ್ನು ಎಕ್ಸಿಕ್ಯೂಟ್ ಮಾಡಿದರು ಅಂತ ವಿವರಿಸಿದ್ದು ಒಂದು ಚಕ್ರವ್ಯೂಹದ ತರಹ ಇದೆ. ಆದಿತ್ಯ ಇಡೀ ತನಿಖೆಯ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವರ ಮಾತುಗಳು, ನಾನು ಅದನ್ನು ನನ್ನ ದೃಷ್ಟಿಕೋನದಿಂದ ಹೆಣೆದ ರೀತಿ ಬಹಳ ಫೋರ್ಸ್‌ಫುಲ್ ಆಗಿದೆ. ಚಿತ್ರ ಪ್ರಾರಂಭವಾಗುವುದೇ ಪ್ರಮೋದ್ ಮುತಾಲಿಕ್ ‘ಗೌರಿಯನ್ನು ಬೆತ್ತಲೆ ಮಾಡಿ ಮೇಲೆ ನಿಲ್ಲಿಸಬೇಕು’ ಅಂತ ಕರೆ ಕೊಡುವ ವಿಡಿಯೊದಿಂದ.

ಆಮ್‌ಸ್ಟರ್ಡಾಮ್‌ನಲ್ಲಿ ಇದರ ಮೊದಲ ಪ್ರದರ್ಶನವಾದಾಗ ನೀವು ಹೋಗಿದ್ರಿ. ‘ಫ್ರೀ ಪ್ರೆಸ್ ಅನ್‌ಲಿಮಿಟೆಡ್’ ಅವರ ಮತ್ತು ಅಲ್ಲಿಯ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು?

ಎಲ್ಲರೂ ಬಹಳ ಎಮೋಷನಲ್ ಆಗಿದ್ದರು. ಜೊತೆಗೆ ಶಾಕ್‌ನಿಂದ ಸ್ಥಂಭೀಭೂತರಾದರು. ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು. ಕೆಲವರು ಅತ್ತುಬಿಟ್ಟರು. ‘ಫ್ರೀ ಪ್ರೆಸ್ ಅನ್‌ಲಿಮಿಟೆಡ್’ ಅವರು ಬಹಳ ಇಷ್ಟಪಟ್ಟರು.

ಕವಿತಾ ಹಾಗೂ ಗೌರಿ ಲಂಕೇಶ್–ಪ್ರಾಯಕಾಲದ ಫೋಟೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.