ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಿದ್ದ ಬಳಿಕ ನಟ ಅನಿರುದ್ಧ ಜತ್ಕರ್ ಅವರು ಇತ್ತೀಚೆಗಷ್ಟೇ ಎಸ್. ನಾರಾಯಣ್ ಅವರ ಜೊತೆಗಿನ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ ತಾಕಿದೆ.
ಅನಿರುದ್ಧ ಅವರನ್ನು ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘವು ಎಸ್.ನಾರಾಯಣ್ ಅವರನ್ನು ಆಗ್ರಹಿಸಿದೆ. ಈ ನಡೆಯನ್ನು ಪ್ರಶ್ನಿಸಿ ಅನಿರುದ್ಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಇವೆಲ್ಲ ಘಟನೆಗಳ ಬೆನ್ನಲ್ಲೇ ಪ್ರಸ್ತುತ ಉದ್ಭವಿಸಿರುವ ಸಮಸ್ಯೆ ಬಗೆಹರಿಸಲು ಭಾ.ಮ.ಹರೀಶ್ ಅವರು ಶುಕ್ರವಾರ ಸಂಜೆ ನಿರ್ಮಾಪಕರ ಸಂಘದ ಸಭೆಯನ್ನು ಕರೆದಿದ್ದಾರೆ. ಎಸ್.ನಾರಾಯಣ್ ಹಾಗೂ ಅನಿರುದ್ಧ ಅವರೂ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಅನಿರುದ್ಧ ಅವರು ಬರೆದ ಪತ್ರದಲ್ಲೇನಿದೆ?
‘ತಾವೆಲ್ಲರೂ ಬಲ್ಲಂತೆ, ನಾನು ಅಭಿನಯಿಸುತ್ತಿದ್ದ ‘ಜೊತೆ ಜೊತೆಯಲಿ’ ಎಂಬ ಜನಪ್ರಿಯ ಧಾರಾವಾಹಿಯಿಂದ, ಇದ್ದಕ್ಕಿದ್ದಂತೆ ವಿನಾಕಾರಣ ನನ್ನನ್ನು ನಿರ್ಗಮಿಸುವಂತೆ ಮಾಡಿದ್ದರು. ಎರಡು ವರ್ಷಗಳ ಕಾಲ ನನ್ನನ್ನು ಕಿರುತೆರೆಯಿಂದ ಬ್ಯಾನ್ ಮಾಡುವುದಾಗಿ ಹೇಳಿದರು. ನಾನೀಗ ಪುನಃ ಹೊಸದೊಂದು ಧಾರಾವಾಹಿಯಲ್ಲಿ ನಟಿಸಲಿರುವ ವಿಷಯ ತಿಳಿದ ಕೂಡಲೇ, ಕಿರುತೆರೆಯ ನಿರ್ಮಾಪಕರ ಸಂಘವು ನನಗೆ ಬಹಿಷ್ಕರಿಸುತ್ತಿರುವುದಾಗಿ ಹೇಳಿ ನನ್ನ ವೃತ್ತಿ ಜೀವನಕ್ಕೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ. ದಯಮಾಡಿ ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಿ ನನಗೆ ನ್ಯಾಯ ದೊರಕಿಸಬೇಕಾಗಿ ಮನವಿ’ ಎಂದು ಅನಿರುದ್ಧ ಉಲ್ಲೇಖಿಸಿದ್ದಾರೆ.
ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಅನಿರುದ್ಧ ಅವರು, ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಪೋಸ್ಟ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.