ಮಲಯಾಳಂ ಭಾಷೆಯ ಜನಪ್ರಿಯ ಸಿನಿಮಾ ‘ಪ್ರೇಮಂ’ ಖ್ಯಾತಿಯ ನಟಿ ಅನುಪಮಾ ಪರಮೇಶ್ವರನ್ ತೆಲುಗಿನ ‘ಕಾರ್ತೀಕೇಯ 2’ ಚಿತ್ರದಲ್ಲಿ ನಟಿಸಲಿದ್ದಾರೆ.
ಈ ಹೊಸ ಸಿನಿಮಾ 2014ರಲ್ಲಿ ಬಾಕ್ಸ್ ಆಫೀಸಿನಲ್ಲಿ ಭಾರಿ ಹಿಟ್ ಗಳಿಸಿದ ‘ಕಾರ್ತಿಕೇಯ’ ಚಿತ್ರದ ಸೀಕ್ವೆಲ್.
ಇದರಲ್ಲಿ ನಿಖಿಲ್ ಹಾಗೂ ಸ್ವಾತಿ ರೆಡ್ಡಿ ನಾಯಕ– ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಚಂದೂ ಮೊಂಡಟಿ. ಅವರಿಗೆ ಅದು ಚೊಚ್ಚಲ ಚಿತ್ರವಾಗಿತ್ತು.
ಈ ಚಿತ್ರ ಬಿಡುಗಡೆಯಾಗಿ ಐದು ವರ್ಷಗಳ ಬಳಿಕ ಈಗ ಇದರ ಸೀಕ್ವೆಲ್ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರದಲ್ಲಿ ಮೊದಲ ಭಾಗದಲ್ಲಿ ನಟಿಸಿದ ನಿಖಿಲ್, ಸ್ವಾತಿ ರೆಡ್ಡಿಯೇ ಜೋಡಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಅನುಪಮಾ ಪರಮೇಶ್ವರನ್ ಬಣ್ಣ ಹಚ್ಚುತ್ತಿದ್ದಾರೆ.
ಈ ಹೊಸ ಚಿತ್ರಕ್ಕೆ ಬಂಡವಾಳವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಹೂಡುತ್ತಿದೆ. ಜನವರಿ ತಿಂಗಳ ಕೊನೆ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಅಲ್ಲಿಗೆ ತೆರಳಲಿದೆ.
ಈ ಚಿತ್ರದ ತಯಾರಿಯಲ್ಲಿ ನಿಖಿಲ್ ತೊಡಗಿಸಿಕೊಂಡಿದ್ದಾರೆ. ಅವರ ಸಿನಿಜೀವನದಲ್ಲಿ ಮೊದಲ ಬಾರಿಗೆ ಅವರು ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ತೆಲುಗು ಭಾಷೆಯಲ್ಲಿ ತಯಾರಾಗುತ್ತಿದ್ದು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
2014ರಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಕತೆಯಾಧಾರಿತ ಕಾರ್ತಿಕೇಯ ಸಿನಿಮಾವನ್ನು ಚಂದೂ ಮಾಂಡಟಿ ಚಿತ್ರಕತೆ ಬರೆದು, ನಿರ್ದೇಶಿಸಿದ್ದರು. ಚಂದೂ ಮಾಂಡೆಟಿ ಅವರು ಈಚೆಗೆ ನಿರ್ದೇಶನ ಮಾಡಿದ ‘ಸವ್ಯಸಾಚಿ’ ಚಿತ್ರದಲ್ಲಿ ನಾಗಚೈತನ್ಯ ಹಾಗೂ ನಿಧಿ ಅಗರ್‌ವಾಲ್ ಜೋಡಿಯಾಗಿ
ನಟಿಸಿದ್ದಾರೆ.
ಈ ಚಿತ್ರದಲ್ಲಿ ಆರ್. ಮಾಧವನ್ ಹಾಗೂ ಭೂಮಿಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.