‘ಹುಟ್ಟಿದಾಗಿನಿಂದಲೂ ಅವಕಾಶಗಳು ಅಚಾನಕ್ಕಾಗಿ ನನ್ನನ್ನು ಹುಡುಕಿಕೊಂಡು ಬಂದಿವೆಯೇ ವಿನಾ ನಾನು ಅವಕಾಶಗಳನ್ನು ಹುಡುಕಿಕೊಂಡು ಹೋಗಿದ್ದಿಲ್ಲ. ವೃತ್ತಿ ಬದುಕಿನಲ್ಲಿಯಷ್ಟೇ ಅಲ್ಲ, ವೈಯಕ್ತಿಕ ಬದುಕಿನಲ್ಲಿಯೂ ಹೀಗೆಯೇ ಆಗಿದೆ‘ ಎಂದು ಮನಃಪೂರ್ತಿ ನಕ್ಕರು ಅಪೇಕ್ಷಾ. ‘ನಟನೆಯ ಅವಕಾಶ ಹುಡುಕಿಕೊಂಡು ಬಂದಷ್ಟೇ ಅಚಾನಕ್ಕಾಗಿ ಕಂಕಣ ಭಾಗ್ಯವೂ ಕೂಡಿ ಬಂತು’ ಎನ್ನುವುದು ಅವರ ಅಂಬೋಣ.
ಕಿರುತೆರೆ ನಟಿಯಾಗಿದ್ದ ಅಪೇಕ್ಷಾ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಕಾಫಿ ತೋಟ’ ಚಿತ್ರದ ಮೂಲಕ ಹಿರಿತೆರೆಗೆ ಜಿಗಿದರು. ಆ ಸಿನಿಮಾದಲ್ಲಿ ಅವರ ನಟನೆಯನ್ನು ನೋಡಿ ಮೆಚ್ಚಿಕೊಂಡವರೆಲ್ಲ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿದ್ದರೆ, ಅಪೇಕ್ಷಾನಿರ್ದೇಶಕ ಪವನ್ ಒಡೆಯರ್ ಜತೆ ಮದುವೆಯ ಮಮತೆಯ ಕರೆಯೋಲೆ ನೀಡಿ ಅಚ್ಚರಿಗೆ ಕೆಡವಿದ್ದರು.
ಈ ನಡುವೆ ತಮಿಳು ಧಾರಾವಾಹಿಯೊಂದರಲ್ಲಿ ನಟಿಸಿದ್ದ ಅವರು 2018ರಲ್ಲಿ ಬಿಡುಗಡೆಯಾದ ‘ಕಿನಾರೆ’ ಸಿನಿಮಾದಲ್ಲಿಯೂ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಪೇಕ್ಷಾ ನಾಯಕಿಯಾಗಿ ನಟಿಸಿರುವ ‘ಸಾಗುತ ದೂರ ದೂರ’ ಸಿನಿಮಾ ಈ ವರ್ಷ ತೆರೆಕಾಣಲು ಸಜ್ಜಾಗಿದೆ.
‘ವೃತ್ತಿಜೀವನದಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತಿರುವಾಗಲೇ ದಾಂಪತ್ಯ ಜೀವನಕ್ಕೆ ಅಡಿಯಿಡುವುದು ರಿಸ್ಕ್ ಅನಿಸಲಿಲ್ಲವೇ?’ ಎಂದು ಕೇಳಿದರೆ ‘ಎಲ್ಲವೂ ಸರಿಯಾದ ಸಮಯಕ್ಕೆ ಜರುಗಬೇಕು ಎನ್ನುವುದು ನನ್ನ ಅನಿಸಿಕೆ’ ಎಂದು ಮುಗುಳು ನಗುತ್ತಾರೆ. ಆದರೆ ಮದುವೆಯಾದ ಮೇಲೆ ನಟನೆಯ ಅವಕಾಶಗಳು ಕಮ್ಮಿಯಾಗಿವೆ ಎನ್ನುವುದನ್ನೂ ಅವರು ಒಪ್ಪಿಕೊಳ್ಳುತ್ತಾರೆ. ‘ಮದುವೆಯ ಬಳಿಕ ಅವಕಾಶಗಳ ಸಂಖ್ಯೆ ಕಡಿಮೆಯಾಗಿದ್ದು ನಿಜ. ಬಹುಶಃ ನಾನು ಮದುವೆಯ ನಂತರ ನಟಿಸುತ್ತೇನೋ ಇಲ್ಲವೋ ಎಂಬ ಕುರಿತು ಹಲವರಿಗೆ ಗೊಂದಲ ಇರಬೇಕು. ನಾನೂ ಈ ಕುರಿತು ಮಾತನಾಡಿಲ್ಲ. ‘ಸಾಗುತ ದೂರ ದೂರ’ ಸಿನಿಮಾ ಬಿಡುಗಡೆಯನ್ನೇ ಕಾಯುತ್ತಿದ್ದೇನೆ. ಬಹುಶಃ ಆ ಸಿನಿಮಾದಲ್ಲಿನ ನನ್ನ ನಟನೆ ನೋಡಿ ಇನ್ನಷ್ಟು ಅವಕಾಶಗಳು ಬರಬಹುದು’ ಎನ್ನುವುದು ಅಪೇಕ್ಷಾ ನಿರೀಕ್ಷೆ.
ಮದುವೆಯಾದ ಮೇಲೆ ನಾಯಕಿಯಾಗಿ ನಟಿಸುವ ಅವಕಾಶಗಳು ಕಡಿಮೆಯಾಗುವ ಕುರಿತೂ ಅಪೇಕ್ಷಾಗೆ ಅಸಮಧಾನ ಇದೆ. ‘ಒಂದು ಸಿನಿಮಾ ಪಾತ್ರಕ್ಕೆ ಹೊಂದುತ್ತಾರಾ ಇಲ್ಲವಾ ಎನ್ನುವುದೇ ನಟಿಯ ಆಯ್ಕೆಗೆ ಮುಖ್ಯ ಮಾನದಂಡ ಆಗಬೇಕು. ಅದನ್ನು ಬಿಟ್ಟು ಅವಳು ವಿವಾಹಿತೆಯಾ ಅವಿವಾಹಿತೆಯಾ ಎನ್ನುವುದು ಯಾಕೆ ಮುಖ್ಯವಾಗಬೇಕೋ ಗೊತ್ತಿಲ್ಲ. ಹೇಗೋ ಇಂಥದ್ದೊಂದು ಕೆಟ್ಟ ಪರಿಪಾಠ ಬೆಳೆದುಕೊಂಡು ಬಂದುಬಿಟ್ಟಿದೆ. ಖಂಡಿತ ಈ ಮನಸ್ಥಿತಿ ಬದಲಾಗಬೇಕು‘ ಎಂದು ತುಸು ಕೋಪದಿಂದಲೇ ಅವರು ಹೇಳುತ್ತಾರೆ.
‘ನಿಮ್ಮ ಮನೆಯಲ್ಲಿಯೇ ನಿರ್ದೇಶಕ (ಪವನ್‌ಒಡೆಯರ್) ಇದ್ದಾರೆ. ಅವರ ಸಿನಿಮಾಗಳಲ್ಲಿಯೇ ನಟಿಸಬಹುದಲ್ಲ’ ಎಂದು ಕಾಲೆಳೆದರೆ ‘ಓರ್ವ ನಟಿಯಾಗಿ ಎಲ್ಲ ಟಾಪ್ ನಿರ್ದೇಶಕರ ಬಳಿಯೂ ಕೆಲಸ ಮಾಡಬೇಕು ಎಂಬ ಆಸೆ ನನಗೆ ಇದ್ದೇ ಇದೆ. ಪವನ್ ಈಗಷ್ಟೇ ನಟಸೌರ್ವಭೌಮ ಚಿತ್ರ ಮುಗಿಸಿದ್ದಾರೆ. ಮುಂದೆಂದಾದರೂ ಅವರ ಸಿನಿಮಾಗಳಲ್ಲಿ ಯಾವುದೋ ಪಾತ್ರ ನನಗೆ ಸೂಕ್ತವಾಗಿದೆ ಎಂದು ಅನಿಸಿ ಆಫರ್ ಮಾಡಿದರೆ ಖಂಡಿತ ನಟಿಸುತ್ತೇನೆ’ ಎಂದು ನಗುತ್ತಾರೆ.
ಪವನ್‌ಗೆ ಹೋಲಿಸಿದರೆ ಅಪೇಕ್ಷಾ ಅವರೇ ಹೆಚ್ಚು ವಾಸ್ತವವಾದಿಯಂತೆ. ‘ನಾನು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಯೋಚಿಸುತ್ತೇನೆ. ಆದರೆ ಪವನ್ ಬದುಕಿನ ಸನ್ನಿವೇಶಗಳನ್ನೆಲ್ಲ ಒಂದು ‘ಸೀನ್’ ಆಗಿಯೇ ಗ್ರಹಿಸುತ್ತಿರುತ್ತಾರೆ‘ ಎಂದು ಟೀಕೆಯೋ ಮೆಚ್ಚುಗೆಯೋ ಗೊತ್ತಾಗದ ರೀತಿಯಲ್ಲಿ ಹೇಳುತ್ತಾರೆ. ‘ನಾವು ಮದುವೆ ಆಗುವ ವೇಳೆಗೆ ನಟಸಾರ್ವಭೌಮ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಉಳಿದ ಚಿತ್ರೀಕರಣವೂ ಬೆಂಗಳೂರಿನಲ್ಲಿಯೇ ಇರುತ್ತಿತ್ತು. ಹಾಗಾಗಿ ಅವರ ಕೆಲಸ ನನಗೆಹೆಚ್ಚಿನ ತೊಂದರೆ ಆಗಿಲ್ಲ. ಆದರೆ ಕೆಲವು ಸಲ ಅವರು ಬ್ಯುಸಿಯಾಗಿರುತ್ತಾರೆ. ಆದರೆ ನಾವಿಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಇರುವವರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕಲ್ಲವೇ?‘ ಎಂದು ಕೇಳುವ ಅವರು ಪವನ್ ಅವರ ಗೆಲುವನ್ನು ತನ್ನದೇ ಎಂದು ಸಂಭ್ರಮಿಸುತ್ತಾರಂತೆ.
ಕೆಲಸದ ವಿಷಯದಲ್ಲಿಯೂ ಬದುಕಿನಲ್ಲಿಯೂ ಹಲವು ವಿಷಯಗಳಿಗೆ ಪತಿ ಪವನ್ ಅವರಿಂದ ಅಪೇಕ್ಷಾ ಹಲವು ಸಂಗತಿಗಳನ್ನು ಕಲಿತುಕೊಂಡಿದ್ದಾರಂತೆ. ಈ ಅನುಭವ ನಟಿಯಾಗಿಯೂ ತನ್ನನ್ನು ಸಾಕಷ್ಟು ಬೆಳೆಸುತ್ತದೆ ಎನ್ನುವ ನಂಬಿಕೆಯೂ ಅವರಿಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.