ADVERTISEMENT

ಕನ್ನಡ ಚಿತ್ರರಂಗ: ಸಿನಿಮಾ ಹಿಟ್‌ ಆದರಷ್ಟೇ ಬೆಲೆ

ವಿನಾಯಕ ಕೆ.ಎಸ್.
Published 21 ಜೂನ್ 2024, 0:04 IST
Last Updated 21 ಜೂನ್ 2024, 0:04 IST
   
ಕೋವಿಡ್‌ಗೆ ಮೊದಲು ಕೆಲವು ಸ್ಟಾರ್‌ಗಳ ಸಿನಿಮಾಗಳು ತೆರೆಗೆ ಬರುವ ಮುಂಚೆಯೇ ಒಂದಷ್ಟು ಬಿಸಿನೆಸ್‌ ಮಾಡುತ್ತಿದ್ದವು. ಹಿಂದಿನ ಸಿನಿಮಾ ಹಿಟ್‌ ಆಗಿದ್ದರೆ, ಆ ತಂಡದ ಮತ್ತೊಂದು ಸಿನಿಮಾಕ್ಕೆ ಬೇಡಿಕೆ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ನಿರ್ಮಾಪಕನಿಗೆ ಹಾಕಿದ ಹಣ ಮರಳಿ ಪಡೆಯಲು ಚಿತ್ರ ಮಂದಿರದಲ್ಲಿನ ಗೆಲುವು ಮಹತ್ವದ್ದಾಗಿದೆ.

ಈ ವರ್ಷದ ಮೊದಲ ಆರು ತಿಂಗಳು ಕಳೆಯುತ್ತಿದ್ದರೂ ಕನ್ನಡದಲ್ಲಿ ಈ ತನಕ ‘ಕಾಟೇರ’ವನ್ನು ಹೊರತುಪಡಿಸಿ ಉಳಿದ ಯಾವ ಸಿನಿಮಾಗಳೂ ಚಿತ್ರಮಂದಿರಗಳಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡಿಲ್ಲ. ಜೊತೆಗೆ, ದೊಡ್ಡ ಸ್ಟಾರ್‌ಗಳ ಸಿನಿಮಾಗಳು ತೆರೆ ಕಂಡಿಲ್ಲ. ಸ್ಟಾರ್‌ಗಳ ಸಿನಿಮಾಗಳ ಬಿಡುಗಡೆಯ ದಿನಾಂಕ ಹಲವು ಬಾರಿ ಮುಂದಕ್ಕೆ ಹೋಗುತ್ತಿವೆ. ಇದಕ್ಕೆ ಕಾರಣ ಹುಡುಕಿದರೆ ‘ಬಿಸಿನೆಸ್‌ ಆಗಿಲ್ಲ!’ ಎನ್ನುವ ಉತ್ತರ ಸಿಗುತ್ತದೆ.

ಒಂದು ಕಾಲಕ್ಕೆ ಸ್ಟಾರ್‌ಗಳ ಸಿನಿಮಾ ಹಕ್ಕು ಮುಹೂರ್ತದ ವೇಳೆಯೇ ಮಾರಾಟವಾಗುತ್ತಿತ್ತು. ಹಕ್ಕು ಖರೀದಿಸಿದ ಮಧ್ಯವರ್ತಿ ಚಿತ್ರೀಕರಣಕ್ಕೆ ಹಂತ ಹಂತವಾಗಿ ಹಣವನ್ನು ಒದಗಿಸುತ್ತಿದ್ದರು. ಆದರೆ ಕೋವಿಡ್‌ ನಂತರ ಕನ್ನಡ ಸಿನಿಮಾಗಳು ಬಿಡುಗಡೆಗೆ ಮುಂಚೆಯೇ ಬಿಸಿನೆಸ್‌ ಮಾಡುವುದು ಹಗಲುಗನಸಿನಂತಾಗಿದೆ. ಐದು ವರ್ಷಗಳಲ್ಲಿ ಬಿಡುಗಡೆಯಾಗಿರುವ ಕನಿಷ್ಠ ಸಾವಿರಕ್ಕೂ ಹೆಚ್ಚು ಸಿನಿಮಾಗಳು ಎಲ್ಲಿಯೂ ಬಿಸಿನೆಸ್‌ ಆಗದೇ ಉಳಿದಿವೆ. ಮಾರಾಟವಾಗಿದ್ದರೂ ಮಧ್ಯವರ್ತಿಗಳ ಮೂಲಕ ಸಣ್ಣ ಮೊತ್ತವಷ್ಟೇ ಸಿಕ್ಕಿದೆ. ಯಾವ ವೇದಿಕೆಯಲ್ಲಿಗಳೂ ಕನ್ನಡ ಸಿನಿಮಾಗಳನ್ನು ಖರೀದಿಸುತ್ತಿಲ್ಲ. ಸಿನಿಮಾ ಹಿಟ್‌ ಆದರೆ ಮಾತ್ರ ಬೆಲೆ ಎಂಬಂತಾಗಿದೆ.

‘‘ಎ’ ಕೆಟಗೆರಿಯ ಸ್ಟಾರ್‌ಗಳ ಸಿನಿಮಾ ವ್ಯವಹಾರ ಕುದುರುತ್ತದೆ. ಆದರೆ, ನಿರ್ಮಾಪಕರು ನಿರೀಕ್ಷಿಸಿದ್ದ ಕ್ಕಿಂತ ಅರ್ಧ ಬೆಲೆಗೆ ಕೇಳುತ್ತಾರೆ. ಹೀಗಾಗಿ ವ್ಯವಹಾರ ನಡೆಯುವುದೇ ಇಲ್ಲ. ‘ಬಿ’ ಮತ್ತು ‘ಸಿ’ ಕೆಟಗೆರಿಯ ಸ್ಟಾರ್‌ಗಳ ಸಿನಿಮಾಗಳಿಗೂ ಹೊಸಬರ ಸಿನಿಮಾಗ ಳಿಗೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬಂತಾಗಿದೆ’ ಎನ್ನುತ್ತಾರೆ ನಿರ್ಮಾಪಕ ನಾಗೇಶ್‌ ಕುಮಾರ್ ಯು.ಎಸ್‌.

ADVERTISEMENT

ಆದಾಯವಿಲ್ಲ: ಟಿ.ವಿ.ಯಲ್ಲಿ ಹೊಸ ಸಿನಿಮಾ ಪ್ರಸಾರ ಮಾಡಿದರೆ, ಮೊದಲ ಪ್ರಸಾರದಲ್ಲಿ ಜಾಹೀರಾತುಗಳು ಬರಬೇಕು. ಸಿನಿಮಾ ಖರೀದಿಸಿದ ಶೇಕಡ 70ರಷ್ಟು ಹಣ ಆ ಜಾಹೀರಾತುಗಳಿಂದ ಮರುಗಳಿಕೆ ಆಗಬೇಕು. ಆದರೆ ಈಗ ಶೇಕಡ 40ರಷ್ಟೂ ಮರುಗಳಿಕೆ ಆಗುತ್ತಿಲ್ಲ. ಜೊತೆಗೆ ಐದಕ್ಕಿಂತ ಹೆಚ್ಚು ಟಿಆರ್‌ಪಿ ಕೂಡ ಅರ್ಧದಷ್ಟು ಕುಸಿದಿದೆ.

‘ಈ ವರ್ಷವೇ ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿಸಿ ಪ್ರಸಾರ ಮಾಡಿದೆವು. ಟಿಆರ್‌ಪಿ ಬರಲಿಲ್ಲ. ಇದಕ್ಕಿಂತ ಸೀರಿಯಲ್‌ ಡಬ್‌ ಮಾಡಿ ಹಾಕಿದರೆ ಅತಿ ಕಡಿಮೆ ಖರ್ಚಿನಲ್ಲಿ ಹೊಸ ಸಿನಿಮಾದಷ್ಟೇ ಟಿಆರ್‌ಪಿ ಬರುತ್ತದೆ. ಹೀಗಾಗಿ ವಾಹಿನಿಗಳು ಮೊದಲಿನಂತೆ ಉತ್ತಮ ಮೊತ್ತ ಕೊಟ್ಟು ಸಿನಿಮಾ ಖರೀದಿಸಲು ಹಿಂದೇಟು ಹಾಕುತ್ತಿವೆ’ ಎನ್ನುತ್ತಾರೆ ಮನರಂಜನಾ ವಾಹಿನಿಯೊಂದರ ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

ಮನರಂಜನಾ ವಾಹಿನಿಗಳ ಒಟಿಟಿ ವೇದಿಕೆಯಿಂದಲೂ ಮರುಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಇವತ್ತು ಮನರಂಜನಾ ವಾಹಿನಿಗಳ ಒಟಿಟಿ ವೇದಿಕೆಗಳು ಕನ್ನಡದಲ್ಲಿ ಅಷ್ಟು ಸಕ್ರಿಯವಾಗಿಲ್ಲ. ಯಾವುದೇ ಭಾಷೆಯ ಸೂಪರ್‌ ಹಿಟ್‌ ಆದ ಸಿನಿಮಾಗಳನ್ನು ಎಲ್ಲ ಭಾಷೆಗೂ ಡಬ್‌ ಮಾಡಿ ಹಾಕುತ್ತಿವೆ. ಪ್ರಮುಖ ಒಟಿಟಿ ಎನಿಸಿರುವ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡಕ್ಕೆಂದು ಪ್ರತ್ಯೇಕ ವಿಭಾಗವೇ ಇಲ್ಲ. ಅಮೆಜಾನ್‌ ಹಕ್ಕು ಖರೀದಿ ಮಾಡಿ ಸಿನಿಮಾ ಪ್ರಸಾರ ಮಾಡುತ್ತಿಲ್ಲ.

‘ಇವತ್ತು ಸಿನಿಮಾವನ್ನು ಬಿಡುಗಡೆಗೆ ಮೊದಲು ಬಿಸಿನೆಸ್‌ ಮಾಡಲು ಮನರಂಜನಾ ವಾಹಿನಿ ಅಥವಾ ಒಟಿಟಿಗೆ ತೆಗೆದುಕೊಂಡು ಹೋದರೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿಕೊಂಡು ಬನ್ನಿ ಎನ್ನುತ್ತಾರೆ. ಚಿತ್ರಮಂದಿರಗಳಿಗೆ ಜನ ಬರುವುದಿಲ್ಲ. ಒಳ್ಳೆಯ ಸಿನಿಮಾದಿಂದ ಹೆಸರು ಬರುತ್ತದೆ. ಆದರೆ ಹಾಕಿದ ಹಣ ಮರಳಿ ಪಡೆಯುವುದು ಕಷ್ಟ. ಚಿತ್ರಮಂದಿರದಲ್ಲಿ ಯಶ್ವಸಿಯಾಗಿಲ್ಲ ಎಂದಕೂಡಲೇ ಇತರೆ ವಹಿವಾಟು ವೇದಿಕೆಗಳ ಬಾಗಿಲು ಮುಚ್ಚುತ್ತವೆ. ಚಿತ್ರಮಂದಿರದಲ್ಲಿ ಎಷ್ಟು ಕಲೆಕ್ಷನ್‌ ಆಗಿದೆ ಎಂದು ಕೇಳುತ್ತಾರೆ. ಹಿಟ್‌ ಆದರೆ ಇಲ್ಲಿ ಉಸಿರಾಟ. ಇಲ್ಲವಾದರೆ ಐದು ಪೈಸೆಯೂ ಮರುಗಳಿಕೆ ಆಗುವುದಿಲ್ಲ. ನಿರ್ಮಾಪಕರು ಅತಂತ್ರ ಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ, ನಿರ್ದೇಶಕ ರಘುನಂದನ್‌.

ಕುಸಿದ ಡಬ್ಬಿಂಗ್‌ ಮಾರುಕಟ್ಟೆ

ನಾಲ್ಕೈದು ವರ್ಷಗಳ ಹಿಂದೆ ಕನ್ನಡದ ಆ್ಯಕ್ಷನ್‌ ಸಿನಿಮಾಗಳ ಡಬ್ಬಿಂಗ್‌ ಹಕ್ಕು ₹1-2 ಕೋಟಿಗಳಿಗೆ ಮಾರಾಟವಾಗುತ್ತಿತ್ತು. ಡಬ್ಬಿಂಗ್‌ ಹಕ್ಕಿನ ಹಣದಿಂದಲೇ ಕೆಲವು ಸ್ಟಾರ್‌ಗಳ ಮಾರುಕಟ್ಟೆ ನಿರ್ಮಾಣವಾಗುತ್ತಿತ್ತು. ಆದರೆ ಇವತ್ತು ₹25-30 ಲಕ್ಷಕ್ಕಿಂತ ಹೆಚ್ಚು ಬೆಲೆಗೆ ಡಬ್ಬಿಂಗ್‌ ಹಕ್ಕು ಮಾರಾಟವಾಗುತ್ತಿಲ್ಲ. ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್‌ ಆದರೆ ಮಾತ್ರ ಡಬ್ಬಿಂಗ್‌ನಲ್ಲಿಯೂ ಉತ್ತಮ ಬೆಲೆ ಎಂಬಂತಾಗಿದೆ.

‘ನಾವು ಸಿನಿಮಾಗಳನ್ನು ಡಿಜಿಟಲ್‌ ವೇದಿಕೆಗಳು, ವಿಶ್ವದ ಜಿಇಸಿ ವಾಹಿನಿಗಳಿಗೆ ಮಾರಾಟ ಮಾಡುತ್ತೇವೆ. ಸದ್ಯ ತಮಿಳು ಮತ್ತು ಮಲಯಾಳ ಸಿನಿಮಾಗಳ ಡಬ್ಬಿಂಗ್‌ ಹಕ್ಕು ಖರೀದಿ ಮಾಡುತ್ತಿದ್ದೇವೆ. ಕನ್ನಡ ಸಿನಿಮಾಗಳ ಡಬ್ಬಿಂಗ್‌ ಹಕ್ಕನ್ನು ₹3 ಲಕ್ಷದಿಂದ ₹ 25 ಲಕ್ಷದ ವರೆಗೆ ಖರೀದಿಸಿದ್ದೇವೆ. ಸಿನಿಮಾ ಗುಣಮಟ್ಟ, ಕಂಟೆಂಟ್‌ ಎಲ್ಲವೂ ಮುಖ್ಯವಾಗುತ್ತದೆ’ ಎನ್ನುತ್ತಾರೆ ಸಿನಿಮಾ ಖರೀದಿ ಮಧ್ಯವರ್ತಿಯಾಗಿರುವ ಮುಂಬೈನ ಪರ‍್ಲ್‌ ಫಿಲಂಸ್‌ನ ಮೆಹಬೂಬ್‌.

ಹಿಟ್‌ ಆದರೂ ಕನ್ನಡ ಸಿನಿಮಾಗಳಿಗೆ ಬೆಲೆಯಿಲ್ಲ. ‘ಕಾಟೇರ’ದಂತಹ ಹಿಟ್‌ ಸಿನಿಮಾವನ್ನೇ ಒಟಿಟಿ ತೆಗೆದುಕೊಳ್ಳಲಿಲ್ಲ. ಬೇರೆ ಹಕ್ಕುಗಳನ್ನು ಮಾರಾಟ ಮಾಡಲು ಸಾಕಷ್ಟು ಅಲೆದಾಡಿದೆವು. ಡಬ್ಬಿಂಗ್‌ ಹಕ್ಕು ಇನ್ನೂ ಮಾರಾಟವಾಗಿಲ್ಲ. ಒಟಿಟಿ ಮಾರುಕಟ್ಟೆ ಬಿದ್ದು ಹೋಗಿದೆ. ದೊಡ್ಡ ಹೀರೊಗಳ ಸಿನಿಮಾಗೆ ಈ ಹಕ್ಕು ದೊಡ್ಡ ಮೊತ್ತವಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿನ ಕಲೆಕ್ಷನ್‌ ಶೇಕಡ  50ರಷ್ಟು ಬಿದ್ದು ಹೋಗಿದೆ  
ರಾಕ್‌ಲೈನ್‌ ವೆಂಕಟೇಶ್, ನಿರ್ಮಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.