ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಎಂಬುದು ಮತ್ತೊಮ್ಮೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಲಂಚವನ್ನು ಸ್ವೀಕರಿಸದೆ ಚುನಾವಣೆಯಲ್ಲಿ ಮತ ಚಲಾಯಿಸಲು ಪೋಷಕರನ್ನು ಒತ್ತಾಯಿಸುವಂತೆ ಮಕ್ಕಳಿಗೆ ಕರೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಜಯ್ ಹೇಳಿಕೆಯನ್ನು ತಮಿಳುನಾಡಿನ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸಹ ಸ್ವಾಗತಿಸಿದ್ದಾರೆ.
ಅವರು ಒಳ್ಳೆಯ ವಿಚಾರವನ್ನೇ ಹೇಳಿದ್ದಾರೆ. ನಿಮ್ಮ ಸಮಸ್ಯೆ ಏನು ಎಂದು ವಿಜಯ್ ಹೇಳಿಕೆ ಕುರಿತಾಗಿ ವರದಿಗಾರರು ಕೇಳಿದಾಗ ಉದಯನಿಧಿ ಪ್ರತಿಕ್ರಿಯಿಸಿದ್ದಾರೆ.
ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಎಂದು ಪ್ರಶ್ನಿಸಿದಾಗ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಪ್ರವೇಶಿಸುವ ಹಕ್ಕು ಇದೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷ ವಿಡುದಲೈ ಚಿರುತೈಗಳ್ ಕಟ್ಚಿ (ವಿಸಿಕೆ) ಪಕ್ಷದ ಅಧ್ಯಕ್ಷ ತೊಲ್ ತಿರುಮವಲವನ್ ಸಹ ವಿಜಯ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ನೀಲಂಗರೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಹಾಗೂ 12ನೇ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಿದ ವಿಜಯ್, ಚುನಾವಣೆ ಸಮಯದಲ್ಲಿ ಲಂಚ ಪಡೆಯದೇ ಮತ ನೀಡಲು ಪೋಷಕರನ್ನು ಒತ್ತಾಯಿಸಿ, ನೀವೇ ಬದಲಾವಣೆ ಕಾಣಬಹುದು ಎಂದು ಹೇಳಿದ್ದಾರೆ.
ಲಂಚ ಪಡೆಯದೇ ನಾಯಕರನ್ನು ಆಯ್ಕೆ ಮಾಡುವ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಹಾಗೇ ಮಾಡಿದಾಗ ನಿಮ್ಮ ವಿದ್ಯಾಭ್ಯಾಸವು ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.