ADVERTISEMENT

ಮುಗಿಲುಪೇಟೆ ಚಿತ್ರದ ನಿರ್ದೇಶಕನ ಕೊಲೆಗೆ ಯತ್ನ: ಕಿರುತೆರೆ ನಟ ತಾಂಡವ ಬಂಧನ

ನಟ ತಾಂಡವೇಶ್ವರ ಅಲಿಯಾಸ್‌ ತಾಂಡವ ಅವರನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 11:35 IST
Last Updated 19 ನವೆಂಬರ್ 2024, 11:35 IST
<div class="paragraphs"><p>ತಾಂಡವ </p></div>

ತಾಂಡವ

   

ಬೆಂಗಳೂರು: ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪದ ಅಡಿ ನಟ ತಾಂಡವೇಶ್ವರ ಅಲಿಯಾಸ್‌ ತಾಂಡವ ಅವರನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಹಾಸನದ ತಾಂಡವೇಶ್ವರ ಅವರು ‘ಜೋಡಿಹಕ್ಕಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಚಲನಚಿತ್ರಗಳಲ್ಲೂ ಕೆಲಸ ಮಾಡಲು ಮುಂದಾಗಿದ್ದರು. ಚಿತ್ರ ನಿರ್ದೇಶಕ ಭರತ್‌ ನವುಂದ ಅವರೊಂದಿಗೆ ‘ದೇವನಾಂಪ್ರಿಯ’ ಚಿತ್ರ ನಿರ್ಮಾಣಕ್ಕೆ ಇಬ್ಬರ ಮಧ್ಯೆ ಮಾತುಕತೆ ನಡೆದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಚಿತ್ರ ನಿರ್ಮಾಣಕ್ಕೆ ನಿರ್ಮಾಪಕರು ಸಿಗದ ಕಾರಣಕ್ಕೆ ತಾಂಡವೇಶ್ವರ ಅವರೇ ಹಂತ ಹಂತವಾಗಿ ನಿರ್ದೇಶಕರಿಗೆ ₹6 ಲಕ್ಷ ನೀಡಿದ್ದರು.

ಈ ಮಧ್ಯೆ ಚಿತ್ರ ನಿರ್ಮಾಣಕ್ಕೆ ಹಾಸನ ಕುಮಾರಸ್ವಾಮಿ ಹಣ ಹೂಡಿಕೆ ಮಾಡಿದ್ದರು. ಚಿತ್ರ ನಿರ್ಮಾಣ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ವಿಳಂಬ ಆಗಿದ್ದರಿಂದ ಹಣ ವಾಪಸ್ ನೀಡುವಂತೆ ತಾಂಡವೇಶ್ವರ ಅವರು ಭರತ್‌ ಅವರನ್ನು ಕೇಳಿದ್ದರು. ಈ ಸಂಬಂಧ ಚರ್ಚಿಸಲು ಚಂದ್ರಾ ಲೇಔಟ್‌ನ ಬಸವೇಶ್ವರ ಬಡಾವಣೆಯ ನಿರ್ಮಾಪಕ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆಯುತ್ತಿತ್ತು. ಆಗ ಆರೋಪಿ ಕೃತ್ಯ ಎಸಗಿದ್ಧಾರೆ’ ಎಂದು ಪೊಲೀಸರು ಹೇಳಿದರು.

‘ಸಭೆಯಲ್ಲಿ ಹಣಕಾಸಿನ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ತಾಂಡವೇಶ್ವರ್ ಅವರು ತಮ್ಮ ಬಳಿಯಿದ್ದ ಬಂದೂಕಿನಿಂದ ನಿರ್ದೇಶಕರತ್ತ ಗುಂಡು ಹಾರಿಸಿದ್ದರು. ಆಗ ಅವರು ತಪ್ಪಿಸಿಕೊಂಡಿದ್ದರಿಂದ ಗುಂಡು ಕಚೇರಿ ಕೊಠಡಿಯ ಮೇಲ್ಚಾವಣಿಗೆ ತಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ನಿರ್ದೇಶಕ ನೀಡಿದ ದೂರು ಆಧರಿಸಿ ಬಿಎನ್‌ಎಸ್‌ 109 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಕಲಂ 3, 27, 30ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ರವಿಚಂದ್ರನ್‌ ಅವರ ಮಗ ಮನೋರಂಜನ್‌ ನಾಯಕನಾಗಿ ನಟಿಸಿದ್ದ ಮುಗಿಲ್‌ಪೇಟೆ ಸಿನಿಮಾವನ್ನು 2021ರಲ್ಲಿ ಭರತ್‌ ನಿರ್ದೇಶಿಸಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.