ನವದೆಹಲಿ: ಪುಷ್ಪ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಅಭಿನಂದನೆ ಸಲ್ಲಿಸಿದ್ದಾರೆ.
ಗುರುವಾರ(ಅ.17) ಘೋಷಿಸಲಾದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 'ಪುಷ್ಪಾ ದಿ ರೈಸ್' ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎನಿಸಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ಗಾಗಿ ಭಾರತದಲ್ಲಿರುವ ಕ್ರಿಕೆಟಿಗ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಸ್.ಎಸ್ ರಾಜಮೌಳಿ, ದೇವಿ ಶ್ರೀ ಪ್ರಸಾದ್ ಮತ್ತು ಎಂಎಂ ಕೀರವಾಣಿ ಸೇರಿದಂತೆ ತೆಲುಗು ಚಿತ್ರರಂಗದ ಇತರ ರಾಷ್ಟ್ರೀಯ ಪ್ರಶಸ್ತಿ ವಿಜೇತರೊಂದಿಗೆ ಅಲ್ಲು ಅರ್ಜುನ್ ಕುಳಿತಿರುವ ಚಿತ್ರವನ್ನು ವಾರ್ನರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಅಲ್ಲು ಅರ್ಜುನ್‌ಗೆ ಅಭಿನಂದನಾ ಸಂದೇಶವನ್ನು ಟ್ಯಾಗ್ ಮಾಡಿದ್ದಾರೆ.
ವಾರ್ನರ್ ಹೈದರಾಬಾದ್ ಬಗ್ಗೆ ಹೆಚ್ಚು ಆಕರ್ಷತರಾಗಿದ್ದಾರೆ. ಅಲ್ಲಿನ ಅಭಿಮಾನಿಗಳನ್ನು ಆಗಾಗ ರೀಲ್ಸ್, ನೃತ್ಯ ಮಾಡುವ ಮೂಲಕ ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಪುಷ್ಪಾ ಚಿತ್ರದ 'ಸಾಮಿ ಸಾಮಿ' ಹಾಗೂ 'ಶ್ರೀವಲ್ಲಿ' ಹಾಡುಗಳಿಗೆ ನೃತ್ಯ ಮಾಡಿದ್ದು, ವಿಡಿಯೊ ವೈರಲ್ ಆಗಿತ್ತು. ಅಲ್ಲದೇ ಹೈದರಾಬಾದ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ವಾರ್ನರ್, ಶ್ರೀವಲ್ಲಿ ಡಿಜೆ ಹಾಡಿಗೆ ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.
ಇನ್ನು ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ಹೈದರಾಬಾದ್‌ಗೆ ಹಿಂತಿರುಗಿದ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಅ.17ರಂದು ದೆಹಲಿಯಲ್ಲಿ ನಡೆದಿತ್ತು. ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್‌ರಾಜ್ '777 ಚಾರ್ಲಿ' ಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.