ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿರುವ ಶ್ರೀಮನ್ನಾರಾಯಣ ಶೂಟಿಂಗ್ ವಿಷಯದಲ್ಲಿಯೂ ದಾಖಲೆ ಮಾಡಿದ್ದಾನೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ! 198ದಿನಗಳ ಕಾಲ 335 ಕಾಲ್ ಶೀಟ್‌ಗಳಷ್ಟು ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್‌ಗೆ ಸಿದ್ಧವಾಗಿದೆ.
ಶ್ರೀಮನ್ನಾರಾಯಣನ ಈ ದಾಖಲೆಗಳ ಜೊತೆಗೇ ನಾಯಕ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗಳಿಗೆ ಮರಳಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ. ಅಲ್ಲದೇ ಇಂದು (ಜೂನ್ 06) ರಕ್ಷಿತ್ ಅವರ ಜನ್ಮದಿನವೂ ಹೌದು. ಇದೇ ಹಿನ್ನೆಲೆಯಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಜತೆಗೆ ಇಂದು ಸಂಜೆ 6 ಗಂಟೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿಯೂ ಹೇಳಿಕೊಂಡಿದೆ.
ಪರದೆಯೊಂದನ್ನು ಸೀಳಿಕೊಂಡು ನಾಯಕ ಹೊರನುಗ್ಗಿ ಬರುತ್ತಿರುವ ರೀತಿಯ ಈ ಪೋಸ್ಟರ್ ಬಹುತೇಕ ದಿನಪತ್ರಿಕೆಗಳಲ್ಲಿಯೂ, ಸೋಷಿಯಲ್ ಮೀಡಿಯಾಗಳಲ್ಲಿಯೂ ಇಂದು ರಾರಾಜಿಸುತ್ತಿದೆ. ಮೊದಲ ನೋಟಕ್ಕೇ ಆಕರ್ಷಿಸುವಂತಿರುವ ಈ ಪೋಸ್ಟರ್ ಅನ್ನು ಮತ್ತೆ ನೋಡಿದಾಗ ಎಲ್ಲೋ ನೋಡಿದಂತೆ ಭಾಸವಾಗುತ್ತದೆ. ಇನ್ನಷ್ಟು ಯೋಚಿಸಿದರೆ ಪರಿಕಲ್ಪನೆಯ ಹಿಂದಿರುವ ಮಾದರಿ ಹೊಳೆಯುತ್ತದೆ.
‘ಪಟಾ ಪೋಸ್ಟರ್ ನಿಕ್ಲಾ ಹೀರೊ!’
ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ್ದ 2013ರಲ್ಲಿ ತೆರೆಗೆ ಬಂದ ಹಿಂದಿ ಸಿನಿಮಾ ಪಟಾ ಪೋಸ್ಟರ್ ನಿಕ್ಲಾ ಹೀರೊ’. ಇದರಲ್ಲಿ ಶಾಹೀದ್ ಕಪೂರ್ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಪೋಸ್ಟರ್‌ನ ಕಾನ್ಸೆಪ್ಟ್ ಮತ್ತು ಶ್ರೀಮನ್ನಾರಾಯಣನ ಪೋಸ್ಟರ್‌ಗೂ ಅಚ್ಚರಿ ಹುಟ್ಟಿಸುವಷ್ಟು ಹೋಲಿಕೆ ಇದೆ. ಇದರಲ್ಲಿಯೂ ನಾಯಕ ಪರದೆಯನ್ನು ಒಡೆದುಕೊಂಡುಹೊರಬರುವ ನಾಯಕ ಚಿತ್ರವೇ ಇದೆ.
ಇದೊಂದು ಆಕಸ್ಮಿಕ ಎಂದು ಸಮಜಾಯಿಶಿ ಕೊಡಬಹುದಾದರೂ ಸಾಕಷ್ಟು ಜನಪ್ರಿಯವಾಗಿದ್ದ ಚಿತ್ರವೊಂದರ ಪೋಸ್ಟರ್ ಹೀಗೆ ಮರುಕಳಿಸುವುದನ್ನು ‘ಆಕಸ್ಮಿಕ’ ಎಂದು ಒಪ್ಪಿಬಿಡುವುದೂ ಕಷ್ಟ. ಇಷ್ಟು ಸುದೀರ್ಘ ಚಿತ್ರೀಕರಣ ಮಾಡಿದ, ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದ ತಂಡಕ್ಕೆ ಪೋಸ್ಟರ್‌ನಲ್ಲಿ ಸ್ವಂತಿಕೆ ಕಾಪಾಡಿಕೊಳ್ಳುವುದು ಸಾಧ್ಯವಾಗಲಿಲ್ಲವೇಕೆ? ಈ ಪ್ರಶ್ನೆಗೆ ಚಿತ್ರತಂಡವೇ ಉತ್ತರಿಸಬೇಕು.ಈಗಷ್ಟೇ ಸೋಷಿಯಲ್ ಮೀಡಿಯಾಗೆ ಮರಳಿರುವ ರಕ್ಷಿತ್‌ಗೆ ಅಭಿಮಾನಿಗಳಿಂದ ಈ ಪ್ರಶ್ನೆ ಎದುರಾದರೂ ಅಚ್ಚರಿಯಿಲ್ಲ.
‘ಅವನೇ ಶ್ರೀಮನ್ನರಾಯಣ’ ಸಿನಿಮಾವನ್ನುಸಚಿನ್ ರವಿ ನಿರ್ದೇಶಿಸುತ್ತಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.