ADVERTISEMENT

ಇವ ಚಾಲಾಕಿ ನಾರಾಯಣ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:30 IST
Last Updated 12 ಡಿಸೆಂಬರ್ 2019, 19:30 IST
‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ
‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ   

ಸಚಿನ್‌ ರವಿ ನಿರ್ದೇಶನದ ‘ಅವನೇ ಶ್ರೀಮನ್ನಾರಾಯಣ’ ಪ್ಯಾನ್‌ ಇಂಡಿಯಾ ಕಾನ್ಸೆಫ್ಟ್‌ನಡಿ ನಿರ್ಮಾಣವಾಗಿರುವ ಚಿತ್ರ. ದೊಡ್ಡ ಗ್ಯಾಪ್‌ನ ಬಳಿಕ ರಕ್ಷಿತ್‌ ಶೆಟ್ಟಿ ಪರದೆ ಮೇಲೆ ನಾರಾಯಣನ ಅವತಾರ ಎತ್ತಿದ್ದಾರೆ. ಅಂದಹಾಗೆ ಈ ನಾರಾಯಣ ‘ಕಿರಿಕ್‌ ಪಾರ್ಟಿ’ಯ ಕರ್ಣನಷ್ಟು ಮುಗ್ಧನಲ್ಲ. ಬಹಳ ಚಾಲಾಕಿಯಂತೆ!

ಇದೊಂದು ಫ್ಯಾಂಟಸಿ ಸಿನಿಮಾ. ಡಿಸೆಂಬರ್‌ 27ರಂದು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಹುಪಾಲು ಶೂಟಿಂಗ್‌ ನಡೆದಿರುವುದು ಸೆಟ್‌ನಲ್ಲಿಯೇ. ಎರಡು ಸಾವಿರ ದೃಶ್ಯಗಳನ್ನು ವಿಎಫ್ಎಕ್ಸ್‌ ಬಳಸಿ ಸಿದ್ಧಪಡಿಸಿರುವುದು ಇದರ ಮತ್ತೊಂದು ವಿಶೇಷ. ಜೊತೆಗೆ, ಬರೋಬ್ಬರಿ 200 ದಿನಗಳ ಕಾಲ ಚಿತ್ರದ ಶೂಟಿಂಗ್‌ ನಡೆಸಲಾಗಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ. ಮೂವತ್ತು ವರ್ಷದ ಹಿಂದೆ ನಡೆದ ಕಥೆಯನ್ನು ಆ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆಯಂತೆ.

ಆ ಗ್ರಾಮದ ಹೆಸರು ಅಮರಾವತಿ. ಅಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ನಾರಾಯಣನ ಕೆಲಸ. ರಕ್ಷಿತ್‌ ಶೆಟ್ಟಿ ನಾರಾಯಣನಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಅವರದು ಪೊಲೀಸ್‌ ಅಧಿಕಾರಿಯ ಪಾತ್ರ. ಜೊತೆಗೆ, ಆತ ಕಡುಭ್ರಷ್ಟನೂ ಹೌದು. ಆದರೆ, ತನ್ನ ಬುದ್ಧಿವಂತಿಕೆಯಿಂದ ಸಮಸ್ಯೆ ಪರಿಹರಿಸುವುದರಲ್ಲಿ ಆತ ನಿಸ್ಸೀಮ.

ADVERTISEMENT

ಮೂರು ವರ್ಷದ ಹಿಂದೆ ತೆರೆ ಕಂಡ ರಕ್ಷಿತ್‌ ನಟನೆಯ ‘ಕಿರಿಕ್‌ ಪಾರ್ಟಿ’ ಚಿತ್ರ ಭರ್ಜರಿ ಗೆಲುವು ಕಂಡಿತ್ತು. ಆ ಬಳಿಕ ಅವರ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅವರಿಗೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚರಣ್‌ ರಾಜ್‌ ಮತ್ತು ಅಜನೀಶ್‌ ಬಿ. ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಎಚ್‌.ಕೆ. ಪ್ರಕಾಶ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಅಚ್ಯುತ್‌ ಕುಮಾರ್‌, ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಬಾಲಾಜಿ ಮೋಹನ್‌, ಗೋಪಾಲಕೃಷ್ಣ ದೇಶ‍ಪಾಂಡೆ, ಮಧುಸೂದನ್‌ ರಾವ್, ಗೌತಮ್‌ ರಾಜ್‌, ಸಲ್ಮಾನ್‌ ಅಹಮ್ಮದ್‌, ಅನಿರುದ್ಧ್‌ ಮಹೇಶ್‌ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.