ADVERTISEMENT

'ಅವನೇ ಶ್ರೀಮನ್ನಾರಾಯಣ'ದ ಕಥೆ ಹೇಳಿದ ರಕ್ಷಿತ್: ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 8:33 IST
Last Updated 29 ನವೆಂಬರ್ 2019, 8:33 IST
ಅವನೇ ಶ್ರೀಮನ್ನಾರಾಯಣ
ಅವನೇ ಶ್ರೀಮನ್ನಾರಾಯಣ   

ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ರಕ್ಷಿತ್‌ ಶೆಟ್ಟಿ ನಾಯಕನಾಗಿ ಅಭಿನಯಿಸಿರುವಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. 24 ಗಂಟೆಗಳ ಅವಧಿಯೊಳಗೆ ಸುಮಾರು 39 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಮರುಭೂಮಿಯಲ್ಲಿ ಒಂದು ಅಡ್ಡ, ಅಲ್ಲಿಗೆ ಜಟಕಬಂಡಿಯಲ್ಲಿ ಬರುವ ಪೊಲೀಸ್‌, ನೆಲದ ಮೇಲೆ ಬಿದ್ದಿರುವ ಪಶುವಿನ ತೆಲೆಬುರುಡೆ.. ಹೀಗೆ ಕಾಲ್ಪನಿಕ ಪಟ್ಟಣದ ಚಿತ್ರಣದಿಂದಲೇ ತರೆದುಕೊಳ್ಳುವ ಅವನೇ ಶ್ರೀಮನ್ನಾರಾಯಣದ ಟ್ರೇಲರ್‌ ಸಾಕಷ್ಟು ಕುತೂಹಲಗಳನ್ನು ಜನರ ಮನಸ್ಸಿನಲ್ಲಿ ಮೂಡಿಸುತ್ತದೆ.

ಹಾಗೆ ಗಮನವಿಟ್ಟು ಕೇಳಿ ಒಂದು ಕಥೆ ಹೇಳ್ತೀನಿ.... ನಾರಾಯಣ ಕಥೆ ಇಲ್ಲಿಂದ ಶುರುವಾಗುತ್ತದೆ.

ADVERTISEMENT

‘ಒಬ್ಬ ನಾಯಕನ ಪಥದಲ್ಲಿ ಎರಡು ಯುದ್ಧ. ರಣರಂಗದಲ್ಲಿ ಒಂದು, ಅಂತರಂಗದಲ್ಲಿ ಒಂದು’ ಎನ್ನುವ ಡೈಲಾಗ್​ ಸಿನಿಮಾ ಎನ್ನನ್ನು ಹೇಳಲು ಹೊರಟಿದೆ ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ. ನಮ್ಮ ಅಂತರಂಗದಲ್ಲಿ ನಡೆಯುವ ಕಳ್ಳ–ಪೊಲೀಸ್‌ (ಸತ್ಯ–ಸುಳ್ಳು) ಯುದ್ಧದ ಬಗ್ಗೆ ನಿರ್ದೇಶಕರು‌ ಹೇಳಲು ಹೊರಟಿದ್ದಾರೆಯೇ ಎನ್ನುವ ಪ್ರಶ್ನೆಯನ್ನೂ ಈ ಟ್ರೇಲರ್‌ ನೋಡುಗನಲ್ಲಿ ಹುಟ್ಟಿಸುತ್ತದೆ.

ಉಳಿದವರು ಕಂಡಂತೆ ಸಿನಿಮಾವನ್ನು ನೆನಪಿಸುವ ಈ ಟ್ರೇಲರ್‌ನಲ್ಲಿರುವ ಪ್ರತಿ ಫೇಮ್‌ ಒಂದೊಂದು ಆಲೋಚನೆಯನನ್ನು ನೋಡುಗರ ಮನದಲ್ಲಿ ಹುಟ್ಟಿಸುತ್ತಿದೆ. ಉತ್ತಮ ವಿಎಫ್‌ಎಕ್ಸ್‌ ಎಫೆಕ್ಸ್‌, ಸಿನಿಮಾಟೊಗ್ರಾಫಿ, ಹಿನ್ನಲೆ ಸಂಗೀತ ಚಿತ್ರತಂಡದ ಪರಿಶ್ರಮವನ್ನು ಬಿಚ್ಚಿಟ್ಟಿದೆ.

ರಕ್ಷಿತ್‌ ಶೆಟ್ಟಿ ನಟಿಸಿದ ಕೊನೆಯ ಸಿನಿಮಾ ‘ಕಿರಿಕ್‌ ಪಾರ್ಟಿ’ . ಮೂರು ವರ್ಷದ ಬಳಿಕ ತೆರೆ ಕಾಣುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿರುವುದು ಸಹಜ. ರಕ್ಷಿತ್‌ಗೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ.

200 ದಿನಗಳ ಕಾಲ ಇದರ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ದಿನಗಳವರೆಗೆ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ. ರಕ್ಷಿತ್‌ ಶೆಟ್ಟಿ ಅವರದು ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ. ಆ ಪಾತ್ರದ ಹೆಸರು ನಾರಾಯಣ ಅಂತೆ. ನೋಡಲು ಆತ ಭ್ರಷ್ಟ ಅಧಿಕಾರಿ. ಆದರೆ, ಅತಿ ಬುದ್ಧಿವಂತ. ಜನರ ಸಮಸ್ಯೆಯನ್ನು ತನ್ನ ಬುದ್ಧಿವಂತಿಕೆಯಿಂದ ಹೇಗೆ ಪರಿಹರಿಸುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.

ಚರಣ್‌ ರಾಜ್‌ ಮತ್ತು ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಎಚ್‌.ಕೆ. ಪ್ರಕಾಶ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಬಾಲಾಜಿ ಮೋಹನ್‌ ತಾರಾಗಣದಲ್ಲಿದ್ದಾರೆ.

ನವೆಂಬರ್‌ 28ರಂದು ಮಧ್ಯಾಹ್ನ 2.30ಕ್ಕೆ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳದಲ್ಲಿ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ತಮಿಳಿನಲ್ಲಿ ಟ್ರೇಲರ್‌ ಬಿಡುಗಡೆ ಮಾಡಿದ ದನುಷ್‌ ತಂಡದ ಪ್ರಯತ್ನವನ್ನು ಮೆಚ್ಚಿದ್ದಾರೆ. ತೆಲುಗಿನಲ್ಲಿ ಟ್ರೇಲರ್‌ ಬಿಡುಗಡೆ ಮಾಡಿದ ನಾನಿ ‘ದೃಶ್ಯ ಚಮತ್ಕಾರ, ಅನನ್ಯ ಮತ್ತು ಆಸಕ್ತಿದಾಯಕ’ವಾದ ಟ್ರೇಲರ್‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮಲಯಾಳದಲ್ಲಿ ನಟ ನವೀನ್ ಪೌಲಿ ಟ್ರೇಲರ್‌ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.