ಬೆಂಗಳೂರು: 2009ರಲ್ಲಿ ಬಿಡುಗಡೆಯಾಗಿ ಜಾಗತಿಕ ದಾಖಲೆಗಳನ್ನು ದೂಳಿಪಟ ಮಾಡಿದ್ದ ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್' ಸರಣಿಯ ಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲವೇ? ಹೀಗೊಂದು ಅನುಮಾನ ಮೂಡಿದೆ.
ಹೌದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಟ್ರೇಲರ್ ಮಾತ್ರ ಬಿಡುಗಡೆಯಾಗಿವೆ. ಆದರೆ, ಕನ್ನಡ ಟ್ರೇಲರ್ ಬಿಡುಗಡೆಯಾಗಿಲ್ಲ. ಈ ಹಿಂದೆ ಇದರ ಟೀಸರ್ ಬಿಡುಗಡೆಯಾಗಿದ್ದಾಗ ಕನ್ನಡದ ಟೀಸರ್ ಇತ್ತು.
ಆದರೆ, ಇದೀಗ ಕನ್ನಡ ಟ್ರೇಲರ್ ಬಿಡುಗಡೆಯಾಗದಿರುವುದಲ್ಲದೇ ಟ್ರೇಲರ್‌ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮಾತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಇಂತಹ ಅಪರೂಪದ ಸಿನಿಮಾವನ್ನು ಕನ್ನಡದಲ್ಲಿ ಬಿಡುಗಡೆ ಮಾಡದಿರಲು ನಿರ್ಮಾಪಕರು ನಿರ್ಧಾರ ಮಾಡಿದರೇ ಎನ್ನುವ ಅನುಮಾನ ಮೂಡಿದೆ. ಅಥವಾ ಏನಾದರೂ ತಾಂತ್ರಿಕ ಅನಾನುಕೂಲವಾಯಿತೇ ಎಂಬ ಬಗ್ಗೆ ಚಿತ್ರತಂಡ ಏನೂ ಹೇಳಿಲ್ಲ.
ಇದರಿಂದ ಕನ್ನಡಿಗರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ವೀಕ್ಷಿಸುವ ಭಾಗ್ಯ ಕನ್ನಡಿಗರಿಗೆ ಇಲ್ಲವೇ? ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ. 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಡಿಸೆಂಬರ್ 16 ರಂದು ಬಿಡುಗಡೆಯಾಗುತ್ತಿದೆ.
ಟ್ರೇಲರ್‌ಗೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಹಿಂದಿನ ಅವತಾರ್ ಸಿನಿಮಾದಲ್ಲಿನ ನಾಯಕ ನಾಯಕಿಗೆ ಈ ಸಿನಿಮಾದಲ್ಲಿಮಕ್ಕಳಾಗಿದ್ದು ಹೊಸದೊಂದು ಲೋಕವನ್ನು ಜೇಮ್ಸ್ ಕೆಮರೂನ್ ಅನಾವರಣ ಮಾಡಲಿದ್ದಾರೆ.
ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಮುಖ್ಯ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.