ಬೆಂಗಳೂರು: ಅಯೋಧ್ಯೆಯ ರಾಮಮಂದಿರ ಮತ್ತು ಕರ್ನಾಟಕಕ್ಕೆ ದೊರಕಿರುವ ಅವಕಾಶ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.
ಮೈಸೂರಿನ ಅರುಣ್ ಯೋಗಿರಾಜ್ ಅವರಿಗೆ ಬಾಲರಾಮನ ಮೂರ್ತಿ ಕೆತ್ತಲು ದೊರಕಿರುವ ಅವಕಾಶ ಸೇರಿದಂತೆ ಹಲವು ವಿಚಾರಗಳನ್ನು ಕಿಚ್ಚ ಸುದೀಪ್ ‘ಎಕ್ಸ್’ನಲ್ಲಿ ಪ್ರಸ್ತಾಪಿಸಿದ್ದಾರೆ.
ಕಿಚ್ಚನ ಪೋಸ್ಟ್ ಇಂತಿದೆ...
‘ರಾಮ ಜಯ ರಾಮ, ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು. ವಾಲ್ಮೀಕಿಗಳು ರೂಪಿಸಿದ ಶ್ರೀರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನೇಕೆ ಕೊಟ್ಟೆ, ನಿನ್ನ ಕೀರ್ತನೆಗೆ ಎರಡೇ ಕಿವಿಗಳು...‘ ಎಂದು ಸುದೀಪ್ ಬರೆದುಕೊಂಡಿದ್ದಾರೆ.
‘ನಮ್ಮದು ಎಂತಹ ಪುಣ್ಯ. ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣಿನ ಗರ್ಭದಿಂದ ಎದ್ದು ಬಂದೆ. ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ. ಅರುಣ್ ಯೋಗರಾಜ್ ಅವರಿಗೆ ನಿನ್ನ ಕೆತ್ತಲು ಕಲಾಶೀರ್ವಾದವಾದೆ. ನಿನ್ನ ಪರಮ ಭಕ್ತ ಕನ್ನಡದ ಮಣ್ಣಿನ ವೀರ ಹನುಮಾನ. ಇದು ಕರ್ನಾಟಕಕ್ಕೆ ನಿಜವಾದ ಸಮ್ಮಾನ. ಜೈಶ್ರೀರಾಮ್’ ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಇಂದು (ಸೋಮವಾರ) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯಿತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಾಲಿವುಡ್ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ಮೆಗಾಸ್ಟಾರ್ ನಟ ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಧನುಷ್, ಸಂಗೀತ ನಿರ್ದೇಶಕ ಅನು ಮಲಿಕ್, ಗಾಯಕ ಶಂಕರ್ ಮಹಾದೇವನ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಲಿವುಡ್ ನಿರ್ದೇಶಕರಾದ ರೋಹಿತ್ ಶೆಟ್ಟಿ ಮತ್ತು ರಾಜಕುಮಾರ್ ಹಿರಾನಿ, ನಟಿ ಮಾಧುರಿ ದೀಕ್ಷಿತ್, ಕಂಗನಾ ರನೌತ್, ರಣಬೀರ್ ಕಪೂರ್ -ಆಲಿಯಾ ಭಟ್, ವಿಕ್ಕಿ ಕೌಶಲ್ -ಕತ್ರಿನಾ ಕೈಫ್ ಮತ್ತು ಆಯುಷ್ಮಾನ್ ಖುರಾನಾ ಅವರು ಅಯೋಧ್ಯೆಯ ರಾಮಮಂದಿರದ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಇತರೆ ಕ್ರೀಡಾ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ಖ್ಯಾತ ಬಾಣಸಿಗ ಸಂಜೀವ್ ಕಪೂರ್, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸ್ವಾಮಿ ಅವಧೇಶಾನಂದ ಗಿರಿ, ಯೋಗ ಗುರು ಸ್ವಾಮಿ ರಾಮ್‌ದೇವ್, ಹಿಂದಿ ಕವಿ ಕುಮಾರ್ ವಿಶ್ವಾಸ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.