ಶಿವರಾಜ್‌ಕುಮಾರ್ ಪಿಯಾನೊ ನುಡಿಸುವ ದೃಶ್ಯದಿಂದ ಶುರುವಾಗುವಆಯುಷ್ಮಾನ್‌ಭವ ಸಿನಿಮಾದ ಟ್ರೇಲರ್... ಅನಂತ್‌ನಾಗ್ ರಚಿತರಾಮ್ ನೃತ್ಯ, ತುಂಬಿದ ಕುಟುಂಬ, ಅನಿರೀಕ್ಷಿತ ಘಟನೆಗಳು, ಔಟ್‌ಹೌಸ್, ನೃತ್ಯ... ಈ ಬಿಡಿ ಬಿಡಿ ದೃಶ್ಯಗಳು ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಎಂಬುದನ್ನು ಸ್ಪಷ್ಟಪಡಿಸುತ್ತವೆ.
'ದೇಹದಲ್ಲಿ ನ್ಯೂನತೆ ಇರೋನು ರೋಗಿ ಅಲ್ಲ, ಮನಸ್ಸಲ್ಲಿ ನ್ಯೂನತೆ ಇರೋನೆ ರೋಗಿ’ ಶಿವಣ್ಣ ಅವರ ಈ ಡೈಲಾಗ್, ತುಂಬು ಕುಟುಂಬದಲ್ಲಿ ಯಾರೋ ಒಬ್ಬರಿಗೆ ಮಾನಸಿಕ ಸಮಸ್ಯೆ ಇದೆ ಎನ್ನುವುದನ್ನು ತಿಳಿಸುತ್ತದೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸೈಕಲಾಜಿಕರ್ ಥ್ರಿಲ್ಲರ್ ಸಿನಿಮಾ ಬಂದಿವೆ. ಈ ಟ್ರೇಲರ್‌ನಲ್ಲಿನ ಹಿನ್ನಲೆ ಸಂಗೀತ, ದೃಶ್ಯಗಳನ್ನು ನೋಡಿದರೆ ಇದು ಆಪ್ತಮಿತ್ರ ಸಿನಿಮಾವನ್ನು ನೆನಪಿಸುತ್ತದೆ. ಆ ಸಿನಿಮಾವನ್ನು ರೂಪಿಸಿದ ನಿರ್ದೇಶಕ ಪಿ.ವಾಸು ಹಾಗೂ ನಿರ್ಮಾಪಕ ದ್ವಾರಕೀಶ್ ಜೋಡಿಯೇ ಈ ಸಿನಿಮಾದಲ್ಲೂ ಜೊತೆಯಾಗಿರುವುದು ಅದಕ್ಕೆ ಕಾರಣವಿರಬಹುದು.
ಶಿವಣ್ಣ ಅವರಿಗೆ ನಟಿ ರಚಿತಾ ರಾಮ್ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ‘ಆನಂದ್’ ಎಂದು ಹೆಸರಿಡಲಾಗಿತ್ತು. ಆದರೆ, ಚಿತ್ರಕಥೆಗೂ ಮತ್ತು ಟೈಟಲ್‌ಗೆ ಹೊಂದಾಣಿಕೆಯಾಗದ ಪರಿಣಾಮ ‘ಆಯುಷ್ಮಾನ್‌ಭವ’ ಎಂದು ಹೆಸರಿಡಲಾಗಿದೆ.
‘ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ ಈ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿರುವ ಖುಷಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಗ್ರಾಫಿಕ್ಸ್ ತಂತ್ರಗಾರಿಕೆ ಹೆಣೆಯಲಾಗಿದೆ. ಒಂದು ಕಾಲು ಗಂಟೆಗೂ ಹೆಚ್ಚು ಸಮಯದ ವಿಷುವಲ್ ಎಫೆಕ್ಟ್ ಇದೆ.ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವಿದೆ.ಚಿತ್ರದ ಐದು ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಇದು ಅವರು ಸಂಗೀತ ಸಂಯೋಜನೆಯ ನೂರನೇ ಚಿತ್ರವೂ ಹೌದು.ಅನಂತನಾಗ್, ಸುಹಾಸಿನಿ ಮಣಿರತ್ನಂ, ಸುಧಾರಾಣಿ, ಶಿವಾಜಿ ಪ್ರಭು, ಜೈಜಗದೀಶ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.