ಪ್ರಯೋಗಾತ್ಮಕ ಸಿನಿಮಾಗಳಿಗೆ ಇನ್ನು ಮುಂದೆ ಬಣ್ಣ ಹಚ್ಚುವುದಿಲ್ಲ. ಏನಿದ್ದರೂ ನನ್ನ ಹಳೆ ಶೈಲಿಯ ಕಾಮಿಡಿ ಸಿನಿಮಾಗಳಿಗೆ ವಾಪಸಾಗುತ್ತೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
‘ಪ್ರೀಮಿಯರ್ ಪದ್ಮಿನಿ’ಯ 50ನೇ ದಿನದ ಸಂಭ್ರಮ ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು. ‘ಅನುಭವದ ಆಧಾರದ ಮೇಲೆ ವಯಸ್ಸಾದ ಪಾತ್ರ ಮತ್ತು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದ್ದೆ. ಆದರೆ, ಇದುಪ್ರಯೋಜನವಾಗಲಿಲ್ಲ. ಪ್ರೇಕ್ಷಕರುನನ್ನನ್ನು ಹಾಸ್ಯ ನಟನಾಗಿಯೇ ನೋಡಲು ಇಷ್ಟಪಡುತ್ತಿರುವುದು ನನಗೂ ಮನವರಿಕೆಯಾಗಿದೆ. ಇನ್ನು ಮುಂದೆ ಕಾಮಿಡಿ ಹೊರತಾದ ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದು ಜಗ್ಗೇಶ್ ಕಡ್ಡಿಮುರಿದಂತೆ ಹೇಳಿದರು.
‘ಪರಭಾಷೆಗಳ ಸಿನಿಮಾಗಳ ಪೈಪೋಟಿ, ಕ್ರಿಕೆಟ್ ಟೂರ್ನಿ, ಚುನಾವಣೆಗಳ ನಡುವೆಯೂ ನಮ್ಮ ಸಿನಿಮಾವು ಅರ್ಧ ಶತಕ ಬಾರಿಸಿದೆ. ಉಪೇಂದ್ರ ಯುವಕನಾಗಿ ಕಾಣಿಸಿಕೊಂಡಿರುವುದಕ್ಕೆ ‘ಐ ಲವ್ ಯು’ ಹಿಟ್ ಆಗಿದೆ. ನಾನು ಸಹ, ನಗಿಸುವ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ. ಆ ಮೂಲಕ ನನ್ನ ಚಾರ್ಮ್ ಕೂಡ ಮರಳಿ ಉಳಿಸಿಕೊಳ್ಳುತ್ತೇನೆ. ಎರಡು ಕಾಮಿಡಿ ಪ್ರಧಾನ ಕತೆಗಳಲ್ಲಿ ಒಂದನ್ನು ಅಂತಿಮಗೊಳಿಸಲಾಗಿದೆ’ ಎಂದ ಜಗ್ಗೇಶ್, ಸದ್ಯದಲ್ಲೇ ತಮ್ಮ ಎಂದಿನ ಹಾಸ್ಯಪ್ರಧಾನ ಚಿತ್ರದಲ್ಲಿ ಮತ್ತೆ ನಟಿಸುವ ಇರಾದೆ ಹೊರಹಾಕಿದರು.
‘ನಿರ್ದೇಶಕರ ಧೈರ್ಯ, ನಿರ್ಮಾಪಕರ ಹಣದಿಂದ ಪ್ರೀಮಿಯರ್ ಪದ್ಮಿನಿ ಚಿತ್ರವು ಇಲ್ಲಿಯವರೆಗೂ ಬಂದಿದೆ. ನಾವೆಲ್ಲಾ ನೆಪ ಮಾತ್ರ. ರಾಜ್ಯದಲ್ಲಿ ಮೂರು ವರ್ಗದ ಚಿತ್ರಮಂದಿರಗಳು ಇವೆ. ತಾಲ್ಲೂಕು ಕೇಂದ್ರಗಳಲ್ಲಿರುವ ಚಿತ್ರಮಂದಿರಗಳ ಪೈಕಿಈಗಾಗಲೇ ಹಲವು ಬಾಗಿಲು ಮುಚ್ಚಿವೆ. ಪ್ರೇಕ್ಷಕ ಯಾವಾಗಲೂಒಳ್ಳೆಯ ಸಿನಿಮಾ ನೋಡಲು ಹೋಗುವಾಗ, ಗುಣಮಟ್ಟದ ಚಿತ್ರಮಂದಿರವನ್ನೂ ಬಯಸುತ್ತಾನೆ. ಸದ್ಯದ ಸ್ಥಿತಿಯಲ್ಲಿ ಅಂತಹ ಗುಣಮಟ್ಟದ ಚಿತ್ರಮಂದಿರಗಳು ಇಲ್ಲೇ ಇರುವುದರಿಂದ ಪ್ರೇಕ್ಷಕ ಚಿತ್ರಮಂದಿರಗಳತ್ತ ಬರುತ್ತಿಲ್ಲ. ಇದನ್ನು ಚಿತ್ರಮಂದಿರಗಳ ಮಾಲೀಕರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಜಗ್ಗೇಶ್ ಅವರು ರಾಜ್ಯದಲ್ಲಿರುವ ಚಿತ್ರಮಂದಿರಗಳ ದುಃಸ್ಥಿತಿಯತ್ತಲೂ ಬೆರಳು ತೋರಿದರು.
‘ಹಣ ಮಾಡುವ ಯೋಚನೆ ಇಟ್ಟುಕೊಳ್ಳದೆ ಈ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಲಾಭ ಬಾರದೆ ಇದ್ದರೂ ಹಣವನ್ನಂತೂಕಳೆದುಕೊಂಡಿಲ್ಲ. ಮುಂದೆಯು ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಇದೆ. ಮುಂದಿನ ಸಿನಿಮಾದ ಬಗ್ಗೆ ಸದ್ಯದಲ್ಲೇ ಮಾಹಿತಿ ಕೊಡುತ್ತೇನೆ’ ಎಂದು ನಿರ್ಮಾಪಕಿ ಶೃತಿ ನಾಯ್ಡು ಹೇಳಿದರು.
ಇದಕ್ಕೂ ಮೊದಲು ಕಲಾವಿದರಾದ ಪ್ರಮೋದ್, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ, ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ, ನಿರ್ದೇಶಕ ರಮೇಶ್ ಇಂದಿರಾ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.