ಬೆಂಗಳೂರು: ನಟ ದರ್ಶನ್ ಅವರಿಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ವೈಷ್ಣೋದೇವಿ ಮಂದಿರದ ಚಿತ್ರ ಹಂಚಿಕೊಂಡಿರುವ ವಿಜಯಲಕ್ಷ್ಮಿ ಅವರು ತ್ಯಾಂಕ್‌ಫುಲ್, ಗ್ರೇಟ್‌ಫುಲ್ ಹಾಗೂ ಬ್ಲೆಸ್ಡ್ ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರಿಂದ ವಿಜಯಲಕ್ಷ್ಮಿ ಅವರು ಈ ರೀತಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಎಲ್ಲ ಪೋಸ್ಟ್‌ಗಳನ್ನೂ ಡಿಲೀಟ್ ಮಾಡಿದ್ದಾರೆ. ದರ್ಶನ್ ಬಂಧನ ಕುರಿತು ಅಭಿಮಾನಿಗಳಿಗೆ ಬರೆದಿದ್ದ ಪತ್ರದ ಒಂದೆರಡು ಪೋಸ್ಟ್ ಮಾತ್ರ ಇವೆ.
ಇನ್ನು ದರ್ಶನ್ ಅವರು ಇಂದೇ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗುವ ಸಂಭವ ಇರುವುದರಿಂದ ವಿಜಯಲಕ್ಷ್ಮಿ ಅವರು ಹಾಗೂ ಕುಟುಂಬದವರು ಈಗಾಗಲೇ ಬಳ್ಳಾರಿಗೆ ತಲುಪಿದ್ದಾರೆ.
ಜಾಮೀನು ಮಂಜೂರು
‘ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್, ವೈದ್ಯಕೀಯ ಚಿಕಿತ್ಸೆ ಪಡೆಯಲು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಮೇಲಿನ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.
ಬೆಳಗ್ಗೆ ಕಲಾಪ ಆರಂಭವಾದ ಕೂಡಲೇ ನ್ಯಾಯಪೀಠ ಆದೇಶವನ್ನು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದ ಪಿ.ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು.
ಷರತ್ತುಗಳು
* ಶಸ್ತ್ರಚಿಕಿತ್ಸೆ ಪಡೆಯುವ ಅಗತ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವಿನ ಆಧಾರದ ಈ ಮಧ್ಯಂತರ ಜಾಮೀನು ಆರು ವಾರ ಚಾಲ್ತಿಯಲ್ಲಿರಲಿದೆ.
* ದರ್ಶನ್ ಅವರು ತಮ್ಮ ಬೆನ್ನುಹುರಿ ಸಮಸ್ಯೆಗೆ ತಾವು ಇಚ್ಛಿಸಿದ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬಹುದು.
* ದರ್ಶನ್ ತಮ್ಮ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ನೀಡಬೇಕು.
* ಆರೋಗ್ಯ ಪರಿಸ್ಥಿತಿ, ಪ್ರಸ್ತಾವಿತ ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ತದನಂತರದ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಕೋರ್ಟ್ ಗೆ ವರದಿ ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.