ADVERTISEMENT

ಬೊಕ್ಕತಲೆಯ ಹುಡುಗನ ಚೊಕ್ಕ ಚಿತ್ರ 'ಬಾಲಾ'

ವಿಶಾಖ ಎನ್.
Published 8 ನವೆಂಬರ್ 2019, 13:52 IST
Last Updated 8 ನವೆಂಬರ್ 2019, 13:52 IST
‘ಬಾಲಾ’ ಚಿತ್ರದಲ್ಲಿ ಆಯುಷ್ಮಾನ ಖುರಾನಾ
‘ಬಾಲಾ’ ಚಿತ್ರದಲ್ಲಿ ಆಯುಷ್ಮಾನ ಖುರಾನಾ   

ಚಿತ್ರ: ಬಾಲಾ (ಹಿಂದಿ)
ನಿರ್ಮಾಣ: ದಿನೇಶ್ ವಿಜನ್
ನಿರ್ದೇಶನ: ಅಮರ್ ಕೌಶಿಕ್
ತಾರಾಗಣ: ಆಯುಷ್ಮಾನ್ ಖುರಾನಾ, ಭೂಮಿ ಪೆಡ್ನೇಕರ್, ಯಾಮಿ ಗೌತಮ್, ಜಾವೆದ್ ಜಾಫ್ರಿ, ಸೌರಭ್ ಶುಕ್ಲಾ

ಆಯುಷ್ಮಾನ್ ಖುರಾನಾ ಶಾರೀರವೀಗ ಸೂಜಿಗಲ್ಲು. ಇತ್ತೀಚಿನ ‘ಡ್ರೀಮ್ ಗರ್ಲ್’ ಸಿನಿಮಾದಲ್ಲಿ ಹುಡುಗಿಯ ಕಂಠದಲ್ಲಿ ಮಾತನಾಡಿದ್ದ ಅವರು, ಈ ಸಿನಿಮಾದಲ್ಲಿ ಜನಪ್ರಿಯ ಚಿತ್ರತಾರೆಯರ ಸಂಭಾಷಣೆಗಳನ್ನು ಅನುಕರಿಸುವುದರ ಮೂಲಕ ಕಚಗುಳಿ ಇಟ್ಟಿದ್ದಾರೆ. ಚಿಕ್ಕಪ್ರಾಯದಲ್ಲೇ ಬೊಕ್ಕತಲೆಯ ಸಾಮಾಜಿಕ ಸಮಸ್ಯೆಗೆ ಇದಿರಾಗುವ ತರುಣನ ಕಥೆಯ ಚಿತ್ರ ‘ಬಾಲಾ’. ಚಿತ್ರಕಥಾ ಬರಹ ಸಿನಿಮಾದ ಹೈಲೈಟ್. ಅಭಿನಯ ಹಾಗೂ ಹದ ತಪ್ಪದ ಮೆಲೋಡ್ರಾಮಾ ಬೋನಸ್ಸು.

‘ಬಾಲಾ’ ಯಃಕಶ್ಚಿತ್ ಹಾಸ್ಯಚಿತ್ರವಲ್ಲ. ಬೊಕ್ಕತಲೆಯವನ ಗುಪ್ತಗಾಮಿನಿಯಾದ ಸಂಕಟವನ್ನು ಅದು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತದೆ. ಆ ಮೂಲಕ ವಿಷಾದದ ಪರಿಧಿಯೊಳಗೂ ನೋಡುಗನನ್ನು ತೂರಿಸುತ್ತದೆ.

ADVERTISEMENT

ಶಾರುಖ್ ಖಾನ್‌ ತರಹವೇ ಸಂಭಾಷಣೆ ಹೇಳಬಲ್ಲ ಬಾಲಾ ಮುಕುಂದ್ ಶುಕ್ಲಾ ಹೈಸ್ಕೂಲಿನಲ್ಲಿ ಸಹಪಾಠಿಗಳ ಕಣ್ಮಣಿ. ತನ್ನ ರೇಷಿಮೆಯಂಥ ಕೂದಲಿಗೆ ಹೆಸರುವಾಸಿ. ಸ್ಫುರದ್ರೂಪ ಹೊಮ್ಮಿಸಿದ ಅಹಮ್ಮಿನ ಅಲೆ ಮೇಲೆ ತೇಲುವ ಅವನಿಗೆ ಹತ್ತೇ ವರ್ಷ ಕಳೆಯುವಷ್ಟರಲ್ಲಿ ಕೂದಲುಗಳು ಉದುರತೊಡಗುತ್ತವೆ. ‘ಕೇಶೀರಾಜ’ನಾಗಿಯೇ ಉಳಿಯಬೇಕೆಂಬ ಕನಸು ಕಮರುತ್ತಿರುವಾಗ ಅವನು ಕೂದಲನ್ನು ಪಡೆಯಲು ಏನೆಲ್ಲ ಮಾಡುತ್ತಾನೆ ಎನ್ನುವುದು ಸಿನಿಮಾದ ಮೊದಲರ್ಧ.

ಅವನ ತಾಕಲಾಟಕ್ಕೆ ಸಾಕ್ಷಿಯಾಗುವ ಸುಂದರ ಮಧ್ಯಮವರ್ಗದ ಕುಟುಂಬ. ತಲೆಗೆ ತರಹೇವಾರಿ ತೈಲ, ಗೋಮೂತ್ರ. ಮೊಟ್ಟೆ, ಸಗಣಿ ತಿಕ್ಕುವ ಸಹೋದರ, ಆ ಸಹೋದರನಿಗೆ ಅಣ್ಣನಿಗೆ ಸಹಾಯ ಮಾಡುವಂತೆ ಆಣತಿ ನೀಡುವ ತಾಯಿ, ಹಣ್ಣು ವಯಸ್ಸಿನಲ್ಲೂ ಎಲ್ಲಕ್ಕೂ ಸಣ್ಣ ನಗುವಿನೊಟ್ಟಿಗೆ ಸಾಕ್ಷಿಯಾಗುವ ಅಜ್ಜ, ಯಾವುದೋ ಕಾಲದಲ್ಲಿ ರಣಜಿ ಕ್ರಿಕೆಟ್ ಪಂದ್ಯ ಆಡಿದ ಸಾಧನೆಯನ್ನು ಬೆನ್ನಿಗಿಕ್ಕಿಕೊಂಡ ಅಪ್ಪ, ಕಪ್ಪು ಬಣ್ಣದ ಪಕ್ಕದ ಮನೆಯ ಪ್ರತಿಭಾವಂತ ಹುಡುಗಿ, ತರುಣನ ಸಕಲ ಸಂಕಟಗಳಿಗೂ ಸಾಕ್ಷಿಯಾಗುತ್ತಾ ಅವನ ಬೆನ್ನಿಗೆ ನಿಲ್ಲುವ ಕ್ಷೌರಿಕ... ಇವೆಲ್ಲವೂ ಸಿನಿಮಾದ ‘ಸಿಚ್ಯುಯೇಷನಲ್ ಕಾಮಿಡಿ’ಗೆ ಒದಗಿಬರುವ ಪಾತ್ರಗಳು.

ಇಂತಹ ಕಪ್ಪು–ಬಿಳುಪು ಪಾತ್ರಗಳ ನಡುವೆಯೇ ಸುಂದರ ನಾಯಕಿಯ ಆಗಮನ. ಅವಳೊಟ್ಟಿಗೆ ಪ್ರೇಮ, ವಿವಾಹ. ಕೊನೆಗೆ ‘ವಿಗ್ಗಾವತಾರಿ ನಾಯಕ’ನ ಅಸಹಾಯತೆಯಿಂದಾಗಿ ವಿಚ್ಛೇದನ.

ಈ ಎಲ್ಲವುಗಳನ್ನೂ ನಿರ್ದೇಶಕ ಅಮರ್ ಕೌಶಿಕ್ ಕಚಗುಳಿ ಇಡುತ್ತಾ, ನಾಯಕನ ಬಗೆಗೆ ಅನುಕಂಪ ಸ್ಫುರಿಸುತ್ತಲೇ ತೋರುತ್ತಾರೆ. ಚಿತ್ರಕಥೆ ಬರೆದಿರುವ ನಿರೇನ್ ಭಟ್ ಕೌಶಲಕ್ಕೆ ಹೆಚ್ಚು ಮೆಚ್ಚುಗೆ ಸಲ್ಲಬೇಕು. ಸಚಿನ್–ಜಿಗರ್ ಹಿನ್ನೆಲೆ ಸಂಗೀತ ಸಿನಿಮಾದ ದೃಶ್ಯಗಳ ಪರಿಣಾಮಕ್ಕೆ ಪೂರಕವಾಗಿದೆ.

ಆಯುಷ್ಮಾನ್ ಖುರಾನಾ ತಾವು ನಿರ್ವಹಿಸಲು ಅಸಾಧ್ಯವಾದ ಯಾವ ಪಾತ್ರವೂ ಭೂಮಿಯ ಮೇಲೆ ಇಲ್ಲ ಎನ್ನುವಷ್ಟು ಕಕ್ಕುಲತೆಯಿಂದ ‘ಬಾಲಾ’ ಆಗಿದ್ದಾರೆ. ಸೌರಭ್ ಶುಕ್ಲಾ ಟೈಮಿಂಗ್‌ಗೆ ಫಿದಾ ಆಗದೇ ವಿಧಿಯಿಲ್ಲ. ಭೂಮಿ ಪೆಡ್ನೇಕರ್ ಮೇಕಪ್ ಕೆಟ್ಟದಾಗಿದೆಯಾದರೂ ಕಣ್ಣ ಬೆಳಕಿನಲ್ಲಿ ನಾಯಕನಿಗೆ ಕನ್ನಡಿಯಾಗುವ ಅವರ ಪಾತ್ರಕ್ಕೊಂದು ತೂಕವಿದೆ. ಹೆಚ್ಚು ಒಳ್ಳೆಯ ಪಾತ್ರಗಳೇ ಇರುವ ಸಿನಿಮಾ ಮಾಡುವುದು ಕಷ್ಟ ಎನ್ನುವ ಅಭಿಪ್ರಾಯವಿದೆ. ಅದಕ್ಕೆ ಈ ಚಿತ್ರ ಅಪವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.