‘ಕಡ್ಡಿಪುಡಿ’ ಚಿತ್ರದ ಮೂಲಕ ಕನ್ನಡ ವೀಕ್ಷಕರ ಮನಸ್ಸಿನಲ್ಲಿ ಪುಟ್ಟದೊಂದು ಜಾಗ ಪಡೆದುಕೊಂಡ ನಟ ಬಾಲು ನಾಗೇಂದ್ರ. ಆ ಚಿತ್ರದ ‘ರೆಕ್ಕೆ ವೆಂಕ್ಟೇಶ’ನ ಪಾತ್ರ ಸಣ್ಣದಾಗಿದ್ದರೂ, ಅಷ್ಟು ಸುಲಭಕ್ಕೆ ಮರೆಯುವಂಥದ್ದಲ್ಲ. ಅದಾದ ನಂತರ, ‘ಹುಲಿರಾಯ’ ಸಿನಿಮಾದ ಸುರೇಶ ಅಲಿಯಾಸ್ ‘ಸುರೇಸ’ನ ಪಾತ್ರ ನಿಭಾಯಿಸಿದ ನಾಗೇಂದ್ರ, ತಾವು ಸಂಪಾದಿಸಿದ್ದ ಜಾಗವನ್ನು ತುಸು ಹಿರಿದಾಗಿಸಿಕೊಂಡರು.
‘ಹುಲಿರಾಯ’ ಚಿತ್ರದ ನಂತರ ಕನ್ನಡ ಸಿನಿಮಾ ಜಗತ್ತಿನ ಕಾಡಿನೊಳಗೆ ಕಳೆದುಹೋದಂತಿದ್ದ ಅವರು ಈಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ – ಅಂದರೆ, ಕಾಡಿನಿಂದ ಹೊರಬಂದಿದ್ದಾರೆ. ‘ಕಪಟ ನಾಟಕ ಸೂತ್ರಧಾರಿ’ ಎನ್ನುವ ಈ ಸಿನಿಮಾದಲ್ಲಿ ಅವರು ನಟಿ ಸಂಗೀತಾ ಭಟ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹಾಕಿರುವುದು ಗರುಡ ಕ್ರಿಯೇಷನ್ಸ್. ಚಿತ್ರದ ನಿರ್ದೇಶನ ವೇಣು ಕ್ರಿಷ್ ಅವರದ್ದು.
ಈ ಸಿನಿಮಾದಲ್ಲಿ ಬಾಲು ನಾಗೇಂದ್ರ ಅವರದ್ದು ಆಟೊ ರಿಕ್ಷಾ ಚಾಲಕನ ಪಾತ್ರ ಎನ್ನುವುದು ಗಾಂಧಿನಗರದಲ್ಲಿ ದೊರೆತಿರುವ ಮಾಹಿತಿ. ಈ ಆಟೊ ಚಾಲಕ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುವ ಯುವತಿಯ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ನಂತರ, ಇಬ್ಬರೂ ಕ್ರಿಮಿನಲ್‌ಗಳಾಗುತ್ತಾರೆ. ಅವರು ಅಪರಾಧಗಳ ಸುಳಿಯಿಂದ ಹೇಗೆ ಹೊರಬರುತ್ತಾರೆ ಎನ್ನುವುದು ಚಿತ್ರದ ಕಥೆಯ ಒಂದು ಎಳೆ.
ಅಲ್ಲದೆ, ಬಗೆಹರಿಯದ ನಿಗೂಢವೊಂದು ಈ ಸಿನಿಮಾ ಕಥೆಯ ಜೊತೆ ಹೆಣೆದುಕೊಂಡಿದೆಯಂತೆ. ‘ಹುಲಿರಾಯ’ ಚಿತ್ರೀಕರಣ ನಡೆದಿದ್ದು ಬೆಂಗಳೂರು ಹಾಗೂ ಆಗುಂಬೆ ಪರಿಸರದಲ್ಲಿ. ಆ ‘ಕಪಟ ನಾಟಕ ಸೂತ್ರಧಾರಿ’ಯ ಕಥೆ ನಡೆಯುವುದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ.
ನಾಗೇಂದ್ರ ಹಾಗೂ ಸಂಗೀತಾ ಜೊತೆ ಈ ಚಿತ್ರದಲ್ಲಿ ಕರಿಸುಬ್ಬು, ಶಂಕರ್ ಸ್ವಾಮಿ, ನವೀನ್ ವಾಸುದೇವ್, ಜಯದೇವ್ ಮತ್ತು ಉಗ್ರಂ ಮಂಜು ಅವರೂ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕ್ರೈಂ ಥ್ರಿಲ್ಲರ್ ಪ್ರೇಮಕಥೆ ಈ ಚಿತ್ರದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.