ಬೆಂಗಳೂರು: ಬೆಂಗಳೂರು 13ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಏಪ್ರಿಲ್‌ನಲ್ಲಿ ನಡೆಯಲಿದೆ. ಈ ಸಂಬಂಧ ಸಿದ್ಧತೆಗಳು ಸಾಗಿದ್ದು, ಕನ್ನಡ, ಭಾರತೀಯ ಮತ್ತು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.
ಕೋವಿಡ್ ಕಾರಣಕ್ಕೆ ಚಿತ್ರೋದ್ಯಮದ ಚಟುವಟಿಕೆಗಳು ಸಾಕಷ್ಟು ಹಿನ್ನಡೆ ಕಂಡಿದ್ದವು. 13ನೇ ಚಿತ್ರೋತ್ಸವ ನಡೆಸಲು ಅನುಮತಿ ಕೋರಿ ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಈ ವರ್ಷ ಫೆಬ್ರುವರಿಯಲ್ಲಿ ಚಿತ್ರೋತ್ಸವ ನಡೆಸಲು ಸಿದ್ಧತೆ ಮಾಡುವಂತೆ ಮುಖ್ಯಮಂತ್ರಿ ಸಮ್ಮತಿ ನೀಡಿದ್ದರು. ಅದರಂತೆ ಸಿದ್ಧತೆಗಳು ನಡೆದಿದ್ದು, ಏಪ್ರಿಲ್‌ನಲ್ಲಿ ಚಿತ್ರೋತ್ಸವ ನಡೆಯಲಿದೆ. ವಿಶ್ವದ 5 ಸಾವಿರ ಕಡೆಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತಿವೆ. ಅದರಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಮಾತ್ರ ಅಂತರರಾಷ್ಟ್ರೀಯ ಮಾನ್ಯತೆ ಇದೆ. ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಅಂತರರಾಷ್ಟ್ರೀಯ ಮಾನ್ಯತೆ ಸಿಗಬಹುದೇ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮನೆ ಮಾಡಿದೆ.
ಚಲನಚಿತ್ರಗಳ ಆಹ್ವಾನ: ಕನ್ನಡ ಸಿನಿಮಾ ಸ್ಪರ್ಧೆ, ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ ‘ಚಿತ್ರಭಾರತಿ’ ಮತ್ತು ‘ಏಷ್ಯನ್ ಸಿನಿಮಾ’ ಸ್ಪರ್ಧಾ ವಿಭಾಗಕ್ಕೆ ಚಿತ್ರಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ: ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಸಲ್ಲಿಸಬೇಕಾದ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯದ್ದಾಗಿರಬೇಕು. ಜನವರಿ 1, 2020ರಿಂದ ಡಿಸೆಂಬರ್ 31, 2020ರ ಅವಧಿಯಲ್ಲಿ ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ನಿರ್ಮಾಣಗೊಂಡಿರುವ ಚಿತ್ರಗಳೂ ಈ ವಿಭಾಗದಲ್ಲಿ ಭಾಗವಹಿಸಬಹುದು.
ಚಿತ್ರ ಭಾರತಿ: ಭಾರತೀಯ ಚಿತ್ರಗಳ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತದ ಯಾವುದೇ ಭಾಷೆಯ ಚಿತ್ರಗಳು ಸ್ಪರ್ಧಿಸಬಹುದು. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದ ನಿಯಮ ಹಾಗೂ ಅವಧಿ ಇಲ್ಲಿಯೂ ಅನ್ವಯವಾಗುತ್ತವೆ. ಮೂರೂ ವಿಭಾಗಗಳಿಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ ನಿರ್ಮಾಣದ ಅವಧಿ ಎಂದು ಪರಿಗಣಿಸಲಾಗುತ್ತದೆ.
ಜ. 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆ. 8ರ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು www.biffes.org ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಪ್ರತಿ ಚಿತ್ರದ ಅರ್ಜಿ ಶುಲ್ಕ ₹ 3 ಸಾವಿರ. ಚಿತ್ರ ಇಂಗ್ಲಿಷ್ ಸಬ್‌ಟೈಟಲ್ ಹೊಂದಿರಬೇಕು. ಆನ್‌ಲೈನ್ ಸ್ಕ್ರೀನರ್ ಸೌಲಭ್ಯ ಇರಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ +91 80-23494255, 080-23493410 ಅಥವಾ biffesblr@gmail.co.in & ad@biffes.in ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.