ಯಶಸ್ವಿಯಾದ ಸಿನಿಮಾದ ಎರಡನೇ ಭಾಗವನ್ನು ಮಾಡುವುದು ಗೊತ್ತಿದೆ. ಆದರೆ ಸಿನಿಮಾದ ಟೀಸರ್‌ನ ಎರಡನೇ ಭಾಗ ಬಿಡುಗಡೆ ಮಾಡುವುದು ಗೊತ್ತಿದೆಯಾ? ಗೊತ್ತಿಲ್ಲ ಎಂತಲೇ ಅದನ್ನು ಮಾಡುತ್ತಿದ್ದಾರೆ ನಿರ್ದೇಶಕ ಸುನಿ.
ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಟೀಸರ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಅವರು ಚಿತ್ರದ ಎರಡನೇ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದು ಹಿಂದಿನ ಟೀಸರ್ ಅನ್ನೇ ಇನ್ನಷ್ಟು ವಿಸ್ತರಿಸಿ ಕೊಟ್ಟಂತಿದೆ. ಹಾಗಾಗಿ ಇದನ್ನು ಟೀಸರ್ ಭಾಗ 2 ಎನ್ನಲಡ್ಡಿಯಿಲ್ಲ.
ಪಾರಿವಾಳ– ಕಲ್ಕಿ– ಪಾರಿಜಾತ ಈ ಮೂರು ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಸುನಿ ಈ ಚಿತ್ರದ ಕಥೆ ಹೆಣೆದಿದ್ದಾರೆ.
‘ನಾಯಕ ಕಲ್ಕಿ ಅನಾಥ. ಪಾರಿವಾಳ ಕಂಡ್ರೆ ಅವನಿಗೆ ಜೀವ. ಅವನ ಜೀವವನ್ನು ಪ್ರೀತಿಸುವ ಪಾರಿಜಾತ ಎಂಬ ಹುಡುಗಿ ಬಂದಾಗ ಏನಾಗುತ್ತದೆ ಎನ್ನುವುದೇ ಕಥೆ’ ಎಂದು ಎಳೆಯನ್ನು ಇಷ್ಟೇ ಇಷ್ಟು ಬಿಟ್ಟುಕೊಟ್ಟ ಸುನಿ, ಚಿತ್ರೀಕರಣದ ಅನುಭವದ ಕಡೆಗೆ ಹೊರಳಿದರು.
‘ನಾಯಿ, ಬೆಕ್ಕುಗಳನ್ನಾದರೆ ನಮಗಿಷ್ಟ ಬಂದ ಹಾಗೆ ಚಿತ್ರೀಕರಿಸುವುದು ಸುಲಭ. ಆದರೆ ಪಾರಿವಾಳ ನಮ್ಮ ಮಾತು ಕೇಳುವುದಿಲ್ಲ. ಅದು ಹಾರಿದಾಗ, ಅದರ ಅನುಕೂಲಕ್ಕೆ ತಕ್ಕ ಹಾಗೆಯೇ ನಾವು ಚಿತ್ರೀಕರಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಪಟ್ಟ ಪಾಡು ಅಷ್ಟಿಷ್ಟಲ್ಲ’ ಎನ್ನುವುದು ಅವರ ಅನುಭವದ ಮಾತು.
ಪಾರಿವಾಳದ ರೇಸ್‌ಗಾಗಿ ತರಬೇತಿ ಪಡೆದ ಎರಡು ಪಾರಿವಾಳಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ. ‘ಚಿತ್ರದಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಪಾರಿವಾಳಗಳ ರೇಸ್ ಇರುತ್ತದೆ. ಅದಕ್ಕಾಗಿ ಚಿತ್ರೀಕರಣಕ್ಕೂ ಮುಂಚೆ ಮತ್ತು ಕೊನೆಗೆ ಪ್ರಾಣಿ ವೈದ್ಯರಿಂದ ಪಾರಿವಾಳದ ಆರೋಗ್ಯವನ್ನು ಪರೀಕ್ಷಿಸಿದ್ದೇವೆ. ಇದಕ್ಕಾಗಿ ಅನುಮತಿಯನ್ನೂ ಪಡೆದುಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ಮುದ್ದು ಮುಖದ, ಕಿಡಿನೋಟದ ಹುಡುಗ ಧನವೀರ್ ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಿಕ್ಸ್ ಪ್ಯಾಕ್ ಮಾಡಿದ್ದರಂತೆ. ನಂತರ ಮತ್ತೆ ಇಪ್ಪತ್ತೆರಡು ದಿನ ಕಷ್ಟಪಟ್ಟು ದೇಹ ದಂಡಿಸಿ ಏಯ್ಟ್ ಪ್ಯಾಕ್ ಅನ್ನೂ ಮಾಡಿಕೊಂಡಿದ್ದಾರೆ. ಅವರ ಈ ಅಂಗಸೌಷ್ಠವವನ್ನು ನಾಯಕಿಯ ಕನಸಿನಲ್ಲಿ ಬರುವ ಒಂದು ಹಾಡಿನಲ್ಲಿ ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ. ಈ ಹಾಡು ಥಾಯ್ಲೆಂಡ್‌ನಲ್ಲಿ ಚಿತ್ರೀಕರಣವಾಗಲಿದೆ.
ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಧನವೀರ್‌ಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪಾರಿಜಾತ ಎಂಬುದು ಅವರ ಪಾತ್ರದ ಹೆಸರು. ಈ ಪಾತ್ರವೂ ಪಾರಿಜಾತದಂತೆಯೇ ಎಲ್ಲರಿಗೂ ಇಷ್ಟವಾಗಲಿದೆ ಎಂಬ ನಂಬಿಕೆಯೂ ಅವರಿಗಿದೆ. ‘ಸುನಿ ಅವರ ಜತೆ ಕೆಲಸ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈ ಚಿತ್ರದ ಮೂಲಕ ನೆರವೇರಿದೆ’ ಎಂದು ಅವರು ಖುಷಿಯನ್ನು ಹಂಚಿಕೊಂಡರು.
ರವಿ ಬಸ್ರೂರು ಬಜಾರ್‌ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಧನವೀರ್ ಅವರ ತಂದೆ ತಿಮ್ಮೇಗೌಡ ಹಣ ಹೂಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮೊದಲಲ್ಲಿ ಚಿತ್ರವನ್ನು ಚಿತ್ರಬಜಾರ್‌ಗೆ ತರುವ ಯೋಚನೆ ತಂಡಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.