ADVERTISEMENT

ಮಳೆಗಾಲದ ಮಧ್ಯೆ ಬರಲಿದ್ದಾನೆ ‘ಬೆಲ್ಚಪ್ಪ’

ಪ್ರದೀಶ್ ಎಚ್.ಮರೋಡಿ
Published 14 ಜೂನ್ 2019, 7:33 IST
Last Updated 14 ಜೂನ್ 2019, 7:33 IST
ಬೆಲ್ಚಪ್ಪ
ಬೆಲ್ಚಪ್ಪ   

ತುಳು ಚಿತ್ರರಂಗದಲ್ಲಿ ಟೈಟಲ್‌ನಲ್ಲೇ ಭಾರೀ ನಿರೀಕ್ಷೆಹುಟ್ಟಿಸಿರುವ ‘ಬೆಲ್ಚಪ್ಪ’ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಕರಾವಳಿಯಲ್ಲಿ ಈಗಾಗಲೇ ಮುಂಗಾರಿನ ಪ್ರವೇಶವಾಗಿರುವುದರಿಂದ ಈಗ ‘ಬೆಲ್ಚಪ್ಪ’ನನ್ನು ಹೊರತಂದರೆ ಕಷ್ಟವಾಗಬಹುದು. ಹೀಗಾಗಿ, ಮಳೆಯ ವಿರಾಮವನ್ನು ನೋಡಿಕೊಂಡು ಚಿತ್ರ ಬಿಡುಗಡೆಗೆ ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.

ರಜನೀಶ್‌ ದೇವಾಡಿಗ ‌ನಿರ್ದೇಶನದ ಎರಡನೇ ಚಿತ್ರಇದಾಗಿದೆ. ಜಯದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾದ ‘ಬೆಲ್ಚಪ್ಪ’ ಪಕ್ಕಾ ಕಾಮಿಡಿ ಚಿತ್ರ. ಈ ಚಿತ್ರವು ‘ತೆಲಿಪಂದೆ ಉಪ್ಪರೆಗ್‌ ಸಾಧ್ಯನೇ ಇಜ್ಜಿ’ ಎಂಬ ಟ್ಯಾಗ್‌ ಲೈನ್‌ ಅನ್ನುಹೊಂದಿದೆ. ‘ಕೋರಿ ರೊಟ್ಟಿ’ ಸಿನಿಮಾದ ಮೂಲಕ ಕರಾವಳಿಯಲ್ಲಿ ಪರಿಚಯಗೊಂಡ ರಜನೀಶ್‌ ಅವರ ಪ್ರಯೋಗಾತ್ಮಕ ಚಿತ್ರ ಇದಾಗಿದ್ದು, ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರವನ್ನು ಸೆನ್ಸಾರ್‌ ಮಂಡಳಿಯವರು ವೀಕ್ಷಿಸಿ ‘ಯು’ ಪ್ರಮಾಣಪತ್ರವನ್ನು ನೀಡಿದ್ದಾರೆ. ಅಲ್ಲದೆ, ಚಿತ್ರದ ಕಥೆ ಮತ್ತು ನಿರೂಪಣಾ ಶೈಲಿಯನ್ನು ಮೆಚ್ಚಿರುವುದು ನನಗೆ ಇನ್ನಷ್ಟು ಖುಷಿ ತಂದಿದೆ. ಕತ್ತರಿ ಪ್ರಯೋಗಕ್ಕೆ ಅವಕಾಶವಿಲ್ಲದಂತೆ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಬಿಡುಗಡೆಗೆ ಚಿತ್ರತಂಡಸದಾ ಸಿದ್ಧವಾಗಿದೆ. ಆದರೆ, ಈಗ ಮಳೆಗಾಲ ಆರಂಭವಾಗಿರುವುದರಿಂದ ಕರಾವಳಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಜತೆಗೆ ಶಾಲೆಗಳು ಆರಂಭವಾಗುವ ಸಮಯ ಬೇರೆ. ಹೀಗಾಗಿ, ಒಂದೆರಡು ತಿಂಗಳು ಕಾದು ನಂತರ ಬಿಡುಗಡೆ ಮಾಡುವ ಯೋಚನೆಯಿದೆ. ಒಂದು ವೇಳೆ ಮಳೆ ವಿರಾಮ ನೀಡಿದರೆ ತಕ್ಷಣ ಬೆಲ್ಚಪ್ಪ ತೆರೆಗೆ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ರಜನೀಶ್‌ ದೇವಾಡಿಗ.

ADVERTISEMENT

ಆಗಸ್ಟ್‌ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಗೆ ಯೋಜನೆ ಹಾಕಿಕೊಂಡಿದ್ದೇವೆ. ಅದೇ ಸಂದರ್ಭದಲ್ಲಿ ಕನ್ನಡದ ‘ಅವನೇ ಶ್ರೀಮನ್ನಾರಾಯಣ’, ‘ಕುರುಕ್ಷೇತ್ರ, ‘ಪೈಲ್ವಾನ್‌’ ಚಿತ್ರಗಳೂ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ಚಿತ್ರಮಂದಿರದ ಲಭ್ಯತೆಯನ್ನು ನೋಡಿಕೊಂಡು ಸಿನಿಮಾ ತೆರೆಗೆ ತರಲಾಗುವುದು. ‘ಕೋರಿ ರೊಟ್ಟಿ’ ಚಿತ್ರಕ್ಕಿಂತ ಈ ಚಿತ್ರ ಹೆಚ್ಚಿನ ಯಶಸ್ಸು ತಂದು ಕೊಡುತ್ತದೆ ಎಂಬುದು ರಜನೀಶ್‌ ಅವರ ವಿಶ್ವಾಸ.

ಎಲ್ಲ ವರ್ಗದವರನ್ನು ಕೇಂದ್ರೀಕರಿಸಿ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಸಿನಿಮಾದಲ್ಲಿ ಆರಂಭದಿಂದ ಅಂತ್ಯದ ವರೆಗೆ ಭರಪೂರ ಮನರಂಜನೆಯಿದೆ. ‘ತುಳುನಾಡ ಮಾಣಿಕ್ಯ’ಅರವಿಂದ ಬೋಳಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಸುತ್ತ ಚಿತ್ರಕಥೆ ಸಾಗುತ್ತದೆ. ಪ್ರತಿ ಹಂತದಲ್ಲೂ ಸಂದೇಶವಿದೆ. ಮಕ್ಕಳಿಂದ ಹಿಡಿದು ವೃದ್ಧರಿಗೆ ಸಂದೇಶವನ್ನು ಚಿತ್ರ ಹೊತ್ತುತಂದಿದೆ ಎಂದು ಹೇಳುತ್ತಾರೆ ರಜನೀಶ್‌.

ಹಾಲಿವುಡ್‌ನಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವಲಕ್ಷ್ಮೀಶ ಶೆಟ್ಟಿ ಈ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ತೋರಿಸಿರುವುದು ವಿಶೇಷವಾಗಿದೆ. ಸ್ಟಡಿ ಸೈಕಲ್‌ ಮತ್ತು ಸ್ಟಡಿ ಕ್ಯಾಮ್‌ ಬಳಸಿ ಚಿತ್ರೀಕರಣ ಮಾಡಲಾಗಿದೆ. ಹೀಗಾಗಿ, ಪ್ರತಿಯೊಂದು ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ ಎನ್ನುತ್ತಾರೆ ಅವರು.

ಯಶಸ್ವಿ ದೇವಾಡಿಗ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಜನೀಶ್‌ ದೇವಾಡಿಗ, ಉಮೇಶ್‌ ಮಿಜಾರ್, ದೀಪಕ್‌ ರೈ, ಯಜ್ಞೇಶ್‌, ಸುಕನ್ಯಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಾಲ್ಕು ಸೊಗಸಾದ ಹಾಡುಗಳು ಹಾಗೂ ಒಂದು ಸಾಹಸ ದೃಶ್ಯವನ್ನು ಚಿತ್ರವು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.