ADVERTISEMENT

ಬಂಗಾಳಿ ನಟ, ಮಾಜಿ ಸಂಸದ ತಪಸ್ ಪಾಲ್ ನಿಧನ 

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 8:06 IST
Last Updated 18 ಫೆಬ್ರುವರಿ 2020, 8:06 IST
ತಪಸ್ ಪಾಲ್
ತಪಸ್ ಪಾಲ್   

ಕೋಲ್ಕತ್ತ:ಬಂಗಾಳಿ ನಟ ಮತ್ತು ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ತಪಸ್ ಪಾಲ್ ಹೃದಯ ಸ್ತಂಭನದಿಂದ ಮಂಗಳವಾರನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಮಗಳನ್ನು ಭೇಟಿ ಮಾಡಲು ಮುಂಬೈಗೆ ಹೋಗಿ ಅಲ್ಲಿಂದ ಕೋಲ್ಕತ್ತಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಜುಹುನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು ಮುಂಜಾನೆ 4 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಕಳೆದ ಎರಡು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಪಾಲ್, ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ADVERTISEMENT

ಪಶ್ಚಿಮ ಬಂಗಾಳದ ಚಂದನ್‌ನಗರದಲ್ಲಿಹುಟ್ಟಿ ಬೆಳೆದ ಪಾಲ್, ಹೂಗ್ಲಿ ಮೊಹಸಿನ್ ಕಾಲೇಜಿನಲ್ಲಿ ಬಯೋ ಸಯನ್ಸ್ ಪದವಿ ಪಡೆದಿದ್ದಾರೆ.

1980ರಲ್ಲಿತರುಣ್ ಮುಜಂದರ್ಅವರ ದಾದರ್ ಕೀರ್ತಿ ಸಿನಿಮಾದ ಮೂಲಕ ಪಾಲ್ ಬಂಗಾಳಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಮೌವಾ ರಾಯ್ ಚೌಧರಿ,ದೇಬಶ್ರೀ ರಾಯ್ ಮತ್ತು ಸಂಧ್ಯಾ ರಾಯ್ ಸಹನಟಿಯರಾಗಿದ್ದರು. ದೇಬಶ್ರೀ ರಾಯ್ ಅವರೊಂದಿಗೆ ತಪಸ್ ಪಾಲ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಬಂಗಾಳಿ ಚಿತ್ರರಂಗದಲ್ಲಿ ನಾಲ್ಕು ವರ್ಷ ಕಳೆದ ನಂತರ 1984ರಲ್ಲಿ'ಅಬೋದ್'ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಪಾಲ್ ಅವರ ಜತೆಮಾಧುರಿ ದೀಕ್ಷಿತ್ ನಾಯಕಿಯಾಗಿ ನಟಿಸಿದ್ದರು. ಹಿರೇನ್ ನಾಗ್ ನಿರ್ದೇಶನದ ಈ ಚಿತ್ರ ಮಾಧುರಿಯ ಮೊದಲ ಚಿತ್ರವಾಗಿತ್ತು.

ಸುಮಾರು 3 ದಶಕಗಳ ಕಾಲ ಸಿಸಿಮಾ ರಂಗದಲ್ಲಿದ್ದ ತಪಸ್, ಪ್ರಸೆನ್‌ಜಿತ್ ಚಟರ್ಜಿ, ಸೌಮಿತ್ರಾ ಚಟರ್ಜಿ , ರಾಖಿ, ಮೌಷಮಿ ಚಟರ್ಜಿ ಮೊದಲಾದವರೊಂದಿಗೆ ಕೆಲಸ ಮಾಡಿದ್ದಾರೆ. 2013ರಲ್ಲಿ ತೆರೆಕಂಡ ಕಿಲಾಡಿ ಚಿತ್ರದಲ್ಲಿ ಪಾಲ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.