ದೊರೆ–ಭಗವಾನ್ ಜೋಡಿ ಕನ್ನಡ ಚಿತ್ರರಂಗದ ಒಂದು ಜಮಾನಾ. ಈ ಜೋಡಿಯ ದೊರೆ ಈಗಿಲ್ಲ. ಭಗವಾನ್ ನಮ್ಮೊಂದಿಗಿದ್ದಾರೆ. ಆರೋಗ್ಯವಾಗಿ. ಸಿನಿಮಾ ಗತ್ತಿನಲ್ಲಿ. ಅಂತರರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಸಮಾರಂಭದ ಔತಣಕೂಟದಲ್ಲಿ ಶುಭ್ರ ಸೂಟುಧಾರಿಯಾಗಿ ಹಳೆಯ ಖದರಿನಲ್ಲಿ ಗಮನ ಸೆಳೆದರು. ಡಾ. ರಾಜ್‌ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳಿದವರು. ಅಣ್ಣಾವ್ರು ಎಂದೇ ಗೌರವದಿಂದ ನೆನಪಿಸಿಕೊಳ್ಳುವ ಭಗವಾನ್ ಸಜ್ಜನಿಕೆಯ ವ್ಯಕ್ತಿ.
ಸರ್ ಈಗಲೂ ಹರೆಯದ ಹುಡುಗನ ಹಾಗಿದ್ದೀರಲ್ಲ ಎಂದರೆ, ನಸುನಕ್ಕ ಭಗವಾನ್ ನನಗೀಗ 80 ದಾಟಿದೆ ಎಂದು ಸಣ್ಣ ತುತ್ತು ಬಾಯಿಗಿಡುತ್ತ ಹುಬ್ಬು ಕುಣಿಸಿದರು. ಬೆಳಿಗ್ಗೆ 7 ಗಂಟೆಗೆ ಏಳುತ್ತೇನೆ. ಪೇಪರ್ ಓದುತ್ತೇನೆ, ಹರಟೆ ಹೊಡೆಯುತ್ತೇನೆ. ಲಘು ಉಪಹಾರ ಮಾಡುತ್ತೇನೆ. ಸಂಜೆ ಮತ್ತು ರಾತ್ರಿ ಒಂದಷ್ಟು ಸಮಯ ಸ್ಕ್ರಿಪ್ಟ್ ಅಥವಾ ಕತೆ ಬರೆಯುತ್ತೇನೆ. ಬರೆಯುವುದು ನನಗಿಷ್ಟ ಎಂದರು.
ಸರ್, ಸಿನಿಮೋತ್ಸವಕ್ಕೆ ಅಣ್ಣಾವ್ರು ಹೋಗುತ್ತಿರಲಿಲ್ಲವಾ? ಎಂದಾಗ, ಅರೇ ನಾನು ಅಣ್ಣಾವ್ರು ಸಾಕಷ್ಟು ಸಿನಿಮೋತ್ಸವಗಳಿಗೆ ಹೋಗಿದ್ದೇವೆ. ನಾನಂತೂ ಬಹುತೇಕ ಉತ್ಸವಗಳಲ್ಲಿ ಭಾಗವಹಿಸಿದ್ದೇನೆ. ಗೋವಾ ನನ್ನ ನೆಚ್ಚಿನ ಸಿನಿಮೋತ್ಸವ. ‘ಸಿಐಡಿ 999’ ಸಿನಿಮಾ ಕಾಲದಿಂದ ಈಗಿನ ಗೋವಾದವರೆಗೂ ಎಷ್ಟೊಂದು ಬದಲಾವಣೆ. ಅಂತೆಯೇ ಸಿನಿಮಾಗಳಲ್ಲೂ.
ಸಿನಿಮೋತ್ಸವದಲ್ಲಿ ತಮಗೇನು ಇಷ್ಟ? ಎಂದರೆ, ‘ಒಳ್ಳೆ ಸಿನಿಮಾಗಳ ಕತೆ ಕದಿಯಬಹುದು.. ಹಾ ಹಾ..’ ಎಂಬ ಜೋರು ನಗು. ತಮಾಷೆಗೆ ಎಂದು ಸೇರಿಸಿದರು. ಫ್ರಾನ್ಸ್ ಚಿತ್ರಗಳಿಂದ ಗ್ಲ್ಯಾಮರ್, ಚೀನಾ ಚಿತ್ರಗಳಲ್ಲಿನ ಕತೆ, ಅಮೆರಿಕ ಚಿತ್ರಗಳ ಟೆಕ್ನಿಕ್, ಭಾರತೀಯ ಜನಸಂಸ್ಕೃತಿಗೆ ತುಂಬ ಸಾಮ್ಯ ಎನಿಸುವ ಇರಾನ್ ಚಿತ್ರಗಳ ಕಥಾಹಂದರ ಮತ್ತದರ ನಿರೂಪಣೆ.. ಎಲ್ಲವುಗಳಿಂದ ಸಾಕಷ್ಟು ಕಲಿಯಬಹುದು. ನಮ್ಮತನಕ್ಕೆ ಹೇಗೆ ಒಗ್ಗಿಸಿಕೊಳ್ಳುವುದು ಎನ್ನುವುದೇ ಕೊಡು ಕೊಳ್ಳುವಿಕೆಯಲ್ಲಿರುವ ಮಹತ್ವ ಎಂದರು. ಇಂಥ ಮೂಸೆಯಿಂದ ಹುಟ್ಟಿದ ಒಂದು ಚಿತ್ರ ‘ವಸಂತ ಗೀತ’ ಎನ್ನುವುದನ್ನು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.