ಬೆಂಗಳೂರು: 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆ.29 ರಿಂದ ಮಾ.7ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಚಿತ್ರೋತ್ಸವದಲ್ಲಿ ದೇಶ ವಿದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಿಯನ್ ಮಾಲ್‌ನ ಪಿವಿಆರ್ ಸಿನಿಮಾದ 11 ಪರದೆಗಳು, ಚಾಮರಾಜಪೇಟೆಯಲ್ಲಿರುವ ರಾಜ್‌ಕುಮಾರ್ ಕಲಾ ಭವನ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಪ್ರತಿನಿಧಿಗಳಿಗೆ ಮಾರ್ಚ್ 1 ರಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ’ ಎಂದರು.
ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರಗಳ ವಿಭಾಗ(ಚಿತ್ರಭಾರತಿ), ಕನ್ನಡ ಚಲನಚಿತ್ರಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಜಗತ್ತಿನ 50 ದೇಶಗಳಿಂದ ಸಿನಿಮಾಗಳನ್ನು ನಿರೀಕ್ಷಿಸಲಾಗಿದೆ.
ಇದೇ ವೇಳೆ ಆಯ್ದ ಪರದೆಗಳಲ್ಲಿ ಚಿತ್ರೋದ್ಯಮ ಸಂಬಂಧಿತ ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸಗಳು ನಡೆಯಲಿವೆ.
ಪ್ರತಿನಿಧಿ ನೋಂದಣಿ:
‘www.biffes.org ತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಫೆ.15 ರಿಂದ ಆರಂಭವಾಗಲಿದೆ. ಆಸಕ್ತರು ಇಲ್ಲಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರಿಗೆ ₹800, ಚಿತ್ರೋದ್ಯಮದ ಸದಸ್ಯರು, ಫಿಲ್ಮ್ ಸೊಸೈಟಿ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ₹400 ಶುಲ್ಕ ನಿಗದಿಪಡಿಸಲಾಗಿದೆ’ಎಂದು ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ತಿಳಿಸಿದರು. ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.