ADVERTISEMENT

ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ‌ ತಂದ ಆರೋಪ: ನಟ ಚೇತನ್ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 20:03 IST
Last Updated 21 ಮಾರ್ಚ್ 2023, 20:03 IST
ನಟ ಚೇತನ್
ನಟ ಚೇತನ್   

ಬೆಂಗಳೂರು: ‘ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪದಡಿ ನಟ ಎ. ಚೇತನ್‌ ಕುಮಾರ್‌ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಚೇತನ್‌ ಅವರು ಹಿಂದೂ ಧರ್ಮ ಬಗ್ಗೆ ಫೇಸ್‌ಬುಕ್ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಬರಹ ಪ್ರಕಟಿಸಿದ್ದರು. ಈ ಸಂಬಂಧ ಶಿವಕುಮಾರ್ ಎಂಬುವವರು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ಚೇತನ್‌ ಅವರನ್ನು ಮನೆಯಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಚೇತನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಸಂಜೆ ಬಿಟ್ಟು ಬರಲಾಗಿದೆ’ ಎಂದು ಹೇಳಿದರು.

ADVERTISEMENT

‘ಆರೋಪಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಯನ್ನು ನ್ಯಾಯಾಲಯ ಮುಂದೂಡಿದೆ’ ಎಂದು ಹೇಳಿದರು.

ದೂರಿನ ವಿವರ: ‘ಉರಿಗೌಡ ಹಾಗೂ ನಂಜೇಗೌಡ ವಿಚಾರವಾಗಿ ಬರಹ ಪ್ರಕಟಿಸಿರುವ ನಟ ಚೇತನ್, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದರು.

ಎರಡನೇ ಬಾರಿ ಜೈಲಿಗೆ: ಹಿಜಾಬ್ ವಿವಾದದ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದ ಆರೋಪದಡಿ ಚೇತನ್ ಅವರನ್ನು 2022ರ ಫೆಬ್ರುವರಿ 22ರಂದು ಬಂಧಿಸಲಾಗಿತ್ತು.

ಕೆಲದಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಚೇತನ್, ಜಾಮೀನು ಮೇಲೆ ಹೊರ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.