ಬೆಂಗಳೂರು: ‘ನನ್ನ ಮೊದಲ ಸಿನಿಮಾವನ್ನು ನೋಡಿ ವಿಮರ್ಶಕರು ಇವನು ಇಡ್ಲಿ– ವಡೆ ಮಾರಲು ಲಾಯಕ್ಕು, ಹೊಟೇಲ್‌ನಲ್ಲಿ ಕ್ಲೀನ್ ಮಾಡಲು ಹೋಗಬಹುದು ಎಂದೆಲ್ಲಾ ವ್ಯಂಗ್ಯವಾಗಿ ಬರೆದಿದ್ದರು. ಈ ಟೀಕೆಗಳಿಂದ ಬೇಸರಗೊಂಡಿದ್ದೆ. ಆದರೆ, ಆ ಸಿನಿಮಾ ಹಿಟ್ ಆಗಿತ್ತು. ಮುಂದೆ ಆ ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡೆ’.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಈ ರೀತಿ ತಮ್ಮ ಸಿನಿಮಾ ಮತ್ತು ಉದ್ಯಮ ಕ್ಷೇತ್ರದ ಬೆಳವಣಿಗೆಯನ್ನು ವಿವರಿಸಿದ್ದು ಬಾಲಿವುಡ್‌ನ ನಟ ಸುನೀಲ್ ಶೆಟ್ಟಿ.
‘ಸಿನಿಮಾದಲ್ಲಿ ನಟಿಸುವಾಗ ನನ್ನ ಪ್ಲಸ್ ಮತ್ತು ಮೈನಸ್ ಅಂಶಗಳು ಯಾವುದು ಎಂಬುದನ್ನು ಪರಾಮರ್ಶಿಸಿಕೊಳ್ಳುತ್ತಿದ್ದೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆ. ನನ್ನ ಯಾವುದೇ ಸಿನಿಮಾ ಸೋಲು ಕಂಡಾಗ ಮಾಧ್ಯಮಗಳು ಇವನ ಕಥೆ ಮುಗಿದು ಹೋಗಿತು ಎಂದು ಬರೆದು ಬಿಡುತ್ತಿದ್ದವು. ಆಗ ಅವರು ನನ್ನನ್ನು ನೋಡುವ ರೀತಿಯೇ ಬೇರೆ ಆಗಿರುತ್ತಿತ್ತು. ಆದರೆ, ನಂಬಿದ ದೇವರು ನನ್ನ ಕೈಬಿಡಲಿಲ್ಲ. ಮಾನಸಿಕವಾಗಿ ಕುಗ್ಗಲೂ ಇಲ್ಲ’ ಎಂದರು.
‘ನಾನು ಚಿಕ್ಕವನಿದ್ದಾಗ ನಮ್ಮ ತಂದೆ ಮುಲ್ಕಿಯಿಂದ ಮುಂಬೈಗೆ ನಮ್ಮನ್ನೆಲ್ಲ ಕರೆದುಕೊಂಡು ಹೋದರು. ಆಗ ಬಡತನವಿತ್ತು. ಅವರು ಹೋಟೆಲ್‌ನಲ್ಲಿ ಟೇಬಲ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದರು. ಗೋಣಿ ಚೀಲವೇ ಅವರಿಗೆ ಹಾಸಿಗೆ ಮತ್ತು ಹೊದಿಕೆ ಆಗಿತ್ತು. ಈ ರೀತಿ ಹಲವು ಕಡೆ ಕಷ್ಟಪಟ್ಟು ಕೆಲಸ ಮಾಡಿ ನಮ್ಮನ್ನು ಬೆಳೆಸಿದರು. ಆವರು ಕೆಲಸ ಮಾಡಿದ ಹೋಟೆಲ್‌ಗಳನ್ನು ನಾನು ಖರೀದಿಸಿದೆ. ನನ್ನ ತಂದೆಯೇ ನನ್ನ ಪಾಲಿನ ಹೀರೊ’ ಎಂದು ಅವರು ಹೇಳಿದರು.
‘ನನಗೆ ನನ್ನ ವೃತ್ತಿಯ ಬಗ್ಗೆ ಬಹಳ ಶ್ರದ್ಧೆ ಮತ್ತು ಪ್ರೀತಿ ಇತ್ತು. ಬೇರೆಯವರು ಹೇಳುವುದನ್ನು ಗಮನವಿಟ್ಟು ಆಲಿಸುವ ಪರಿಪಾಟ ಹೊಂದಿದ್ದೆ. ಇದರಿಂದ ಜೀವನದಲ್ಲಿ ಸಾಕಷ್ಟು ಪಾಠಗಳನ್ನು ಕಲಿತೆ’ ಎಂದು ಸುನಿಲ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.