ADVERTISEMENT

ಸಿನಿ ಸುದ್ದಿ | ಸೂಪರ್‌ ಹೀರೊ ಈ ‘ಬಘೀರ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 0:35 IST
Last Updated 25 ಅಕ್ಟೋಬರ್ 2024, 0:35 IST
ಶ್ರೀಮುರಳಿ 
ಶ್ರೀಮುರಳಿ    

‘ಉಗ್ರಂ’, ‘ಕೆ.ಜಿ.ಎಫ್‌’ ಸರಣಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ, ಡಾ.ಸೂರಿ ನಿರ್ದೇಶನದ ‘ಬಘೀರ’ ಸಿನಿಮಾ ಅ.31ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ಸೂಪರ್‌ ಹೀರೊ ಆಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. 

ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿತು. ‘ಬಘೀರ’ ಮೂರು ವರ್ಷ ಹಲವು ವಿಷಯಗಳನ್ನು ತಿಳಿಸಿಕೊಟ್ಟಿತು. ಈ ಸಿನಿಮಾದ ಕಥೆಯನ್ನು ಬರೆದ ಪ್ರಶಾಂತ್‌ ನೀಲ್‌ ನನ್ನ ಮೆಚ್ಚಿನ ಕಥೆಗಾರ. ಖರ್ಚಿನ ಬಗ್ಗೆ ಹೊಂಬಾಳೆ ಫಿಲಂಸ್‌ ಎಂದಿಗೂ ಪ್ರಶ್ನೆ ಮಾಡಿಲ್ಲ. ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು ಎನ್ನುವ ಯೋಜನೆ ನನ್ನದು. ಆದರೆ ಈ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡ ಕಾರಣ ಅದು ಆಗಲಿಲ್ಲ. ಗಾಯಗೊಂಡಿದ್ದಾಗ ಭಯಪಟ್ಟಿದ್ದೆ. ಗಾಯಗೊಂಡಿದ್ದ ಕಾಲನ್ನು ಮತ್ತೆ ಮರಳಿಕೊಡಿ, ಒಳ್ಳೊಳ್ಳೆಯ ಸಿನಿಮಾ ಮಾಡಬೇಕು ಎಂದು ವೈದ್ಯರ ಬಳಿ ಹೇಳಿದ್ದೆ. ಎಲ್ಲರಂತೆ ನಾನೂ ಶ್ರಮಪಟ್ಟಿದ್ದೇನೆ. ‘ಬಘೀರ’ಕ್ಕಾಗಿ ಹೆಚ್ಚಿನ ಶ್ರಮವನ್ನೇ ಹಾಕಿದ್ದೇನೆ. ಈ ಸಿನಿಮಾ ದೊಡ್ಡ ಪ್ರಯತ್ನ. ನಮ್ಮ ಇಂಡಸ್ಟ್ರಿ ಹೆಮ್ಮೆಪಡುವ ಸಿನಿಮಾ ಆಗಲಿದೆ. ‘ಬಘೀರ’ನ ಪಾತ್ರಕ್ಕೆ ಪ್ರವೇಶಿಸಿದಾಗ ಖುಷಿಪಟ್ಟಿದ್ದೆ. ಚಿಕ್ಕವರಿದ್ದಾಗ ನಾವೂ ಸೂಪರ್‌ ಹೀರೊ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆವು. 2014–15ರಲ್ಲೇ ಡಾ.ಸೂರಿ ಅವರ ಕಥೆಯೊಂದನ್ನು ಒಪ್ಪಿಕೊಂಡಿದ್ದೆ. ಅದನ್ನೂ ಶೀಘ್ರದಲ್ಲೇ ಮಾಡುತ್ತೇನೆ’ ಎಂದರು ಶ್ರೀಮುರಳಿ. 

ನಿರ್ದೇಶಕ ಡಾ.ಸೂರಿ ಮಾತನಾಡಿ, ‘ಕನ್ನಡದಲ್ಲಿ ಸೂಪರ್‌ ಹೀರೊ ಸಿನಿಮಾವನ್ನು ಯಾರೂ ಮಾಡಿಲ್ಲ ಅಂದುಕೊಂಡಿದ್ದೇನೆ. ‘ಬಘೀರ’ ಬರುವುದೇ ರಾತ್ರಿ. ಹೀಗಾಗಿ ರಾತ್ರಿಯಲ್ಲಿ ನಡೆಸಿದ ಚಿತ್ರೀಕರಣವೇ ಹೆಚ್ಚು. ‘ಬಘೀರ’ ಎಂದರೆ ಕರಿಚಿರತೆ. ಪ್ರಶಾಂತ್‌ ಈ ಕಥೆ ಹೇಳಿದಾಗ ‘ಬಘೀರ’ ಎಂಬ ಶೀರ್ಷಿಕೆಯೇ ಮೊದಲು ತಲೆಗೆ ಬಂದಿತ್ತು. ದಿನದಲ್ಲಿ ನಾಯಕ ಒಬ್ಬ ನಿಷ್ಠಾವಂತ ಪೊಲೀಸ್‌ ಅಧಿಕಾರಿ, ರಾತ್ರಿ ಆತನೇ ‘ಬಘೀರ’. ಈ ಸಿನಿಮಾ ಒಂದು ಭಾವನಾತ್ಮಕ ಆ್ಯಕ್ಷನ್‌ ಥ್ರಿಲ್ಲರ್‌. ಸದ್ಯ ಅ.31ರಂದು ಕನ್ನಡ ಮತ್ತು ತೆಲುಗಿನಲ್ಲಷ್ಟೇ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರ ಯಶಸ್ಸು ಕಂಡರೆ ಇತರೆ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ’ ಎಂದರು.     

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.