ADVERTISEMENT

ಸೇಡಿನ ಕಥೆಯಲ್ಲ ‘ಭೈರತಿ ರಣಗಲ್‌’: ನಟ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 0:03 IST
Last Updated 8 ನವೆಂಬರ್ 2024, 0:03 IST
ಶಿವರಾಜ್‌ಕುಮಾರ್‌ 
ಶಿವರಾಜ್‌ಕುಮಾರ್‌    

ನಟ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನ.15ರಂದು ಬಿಡುಗಡೆಯಾಗುತ್ತಿದೆ. ನರ್ತನ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾ  ‘ಮಫ್ತಿ’ ಸಿನಿಮಾದ‌ ಪ್ರೀಕ್ವೆಲ್. ಸಿನಿಮಾವನ್ನು ‘ಗೀತಾ ಪಿಕ್ಚರ್ಸ್‌’ ಲಾಂಛನದಡಿ ಗೀತಾ ಶಿವರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ‘ವೇದ’ ಸಿನಿಮಾ ಬಳಿಕ ಗೀತಾ ಅವರು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ಶಿವರಾಜ್‌ಕುಮಾರ್‌ ಹಂಚಿಕೊಂಡ ವಿಷಯಗಳು ಇಲ್ಲಿವೆ. 

  • ‘ವೇದ’ ಬಳಿಕ ಗೀತಾ ಪಿಕ್ಚರ್ಸ್‌ ನಿರ್ಮಾಣ ಮಾಡಿರುವ ಎರಡನೇ ಸಿನಿಮಾ ‘ಭೈರತಿ ರಣಗಲ್‌’. ‘ಏತಕ್ಕೆ ಏಕಾಏಕಿ ಭೈರತಿ ರಣಗಲ್‌ ಮಾಡುತ್ತಿದ್ದೀರಿ’ ಎಂದು ಹಲವರು ಕೇಳಿದರು. ಈ ಸಿನಿಮಾ ಮಾಡಬೇಕು ಎನ್ನುವ ಯೋಚನೆ ‘ಮಫ್ತಿ’ ಮಾಡುವಾಗಲೇ ಇತ್ತು. ನರ್ತನ್‌ ಜೊತೆ ಆಗಲೇ ನಾನು ಚರ್ಚಿಸಿದ್ದೆ. ಶೇಕಡ 30–40 ಕಥೆ ಆಗಲೇ ಸಿದ್ಧವಿತ್ತು. ಕಥೆ ಬೆಳೆಯುತ್ತಾ ರುಕ್ಮಿಣಿ ವಸಂತ್‌, ರಾಹುಲ್‌ ಬೋಸ್‌, ಅವಿನಾಶ್‌, ಗೋಪಾಲಕೃಷ್ಣ ದೇಶಪಾಂಡೆ, ಶಬೀರ್‌ ಅವರ ಪಾತ್ರಗಳು ಸೇರಿಕೊಂಡವು.  

  • ‘ಮಫ್ತಿ’ ಶ್ರೀಮುರಳಿ ಸಿನಿಮಾವಾಗಿತ್ತು. ಅದರಲ್ಲಿ ಮೊದಲಾರ್ಧದ ಬಳಿಕ ‘ಭೈರತಿ ರಣಗಲ್‌’ ಪಾತ್ರದ ಪ್ರವೇಶವಾಗಿತ್ತು. ಈ ಬಗ್ಗೆ ನರ್ತನ್‌ ಹೇಳಿದಾಗ, ಹೆಚ್ಚು ಕಡಿಮೆ ಆದರೆ ಏನು ಎಂಬ ಭಯವಿತ್ತು. ಬಳಿಕ ಗೀತಾ ಜೊತೆ ಚರ್ಚಿಸಿ ಸಿನಿಮಾ ಒಪ್ಪಿಕೊಂಡೆ. ಆದರೆ ‘ಭೈರತಿ ರಣಗಲ್‌’ ಎಂಬ ಪಾತ್ರವನ್ನು ಜನರು ವಿಜ್ರಂಭಣೆಯಿಂದ ಸ್ವೀಕರಿಸಿದರು. ನರ್ತನ್‌ ಕೆಲಸದಲ್ಲಿ ಮೌಲ್ಯಯುತ ಅಂಶಗಳು ಇರುತ್ತವೆ, ಅವರಿಗೆ ಸಿನಿಮಾ ಬಗ್ಗೆ ಅಪಾರ ಪ್ರೀತಿ ಇರುವುದು ತಿಳಿಯುತ್ತದೆ. ಸಿನಿಮಾ ಪೂರ್ಣಗೊಳಿಸಿದ್ದೇ ಅರಿವಿಗೆ ಬರಲಿಲ್ಲ. 

    ADVERTISEMENT
  • ನಾನು, ರಾಹುಲ್‌ ಬೋಸ್‌ ಪಾತ್ರಗಳ ಮೂಲಕ ಎದುರಾದಾಗ ನಮ್ಮ ಕಣ್ಣುಗಳಲ್ಲಿ ಸೌಮ್ಯತೆ ಇತ್ತು. ಆದರೆ ಅವುಗಳಲ್ಲಿ ಬೆಂಕಿಯೂ ಇತ್ತು. ಭೈರತಿ ರಣಗಲ್‌ ಒಳಗೆ ಒಬ್ಬ ರಕ್ಷಕನೂ ಇದ್ದ, ರಾಕ್ಷಸನೂ ಇದ್ದಾನೆ. ಹೀಗೆ ರಾಹುಲ್‌ ಬೋಸ್‌ ಎದುರು ಮತ್ತೊಬ್ಬ ಖಳನಾಯಕನೇ ಇದ್ದ. 

  • ‘ಮಫ್ತಿ’ಯ ಪ್ರೀಕ್ವೆಲ್‌ ‘ಭೈರತಿ ರಣಗಲ್‌’. ‘ಭೈರತಿ ರಣಗಲ್‌’ನ ಸೀಕ್ವೆಲ್‌ ಬರಲಿದೆ. ಇದರೊಂದಿಗೆ ಕಥೆಗೊಂದು ಅಂತ್ಯ ಸಿಗಲಿದೆ. ಇದೊಂದು ರಿವೇಂಜ್‌ ಕಥೆ ಅಲ್ಲ. ಒಂದು ಮಹತ್ವಾಕಾಂಕ್ಷೆ ಇರುವ ಸಿನಿಮಾ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.