ಚಿತ್ರ: ಭರಾಟೆ
ನಿರ್ಮಾಪಕ: ಸುಪ್ರೀತ್
ನಿರ್ದೇಶನ: ಚೇತನ್‌ಕುಮಾರ್
ತಾರಾಗಣ: ಶ್ರೀಮುರಳಿ, ಶ್ರೀಲೀಲಾ, ಸಾಯಿಕುಮಾರ್, ತಾರಾ, ರವಿಶಂಕರ್, ಅವಿನಾಶ್, ಅಯ್ಯಪ್ಪ ಶರ್ಮ, ರಂಗಾಯಣ ರಘು, ಗಿರಿ, ಸಾಧುಕೋಕಿಲ, ಶೋಭರಾಜ್
‘ನೀನು ಪ್ರೀತಿ ಹಂಚಲು ಬಂದಿರುವ ಬುದ್ಧನಲ್ಲ; ಯುದ್ಧ ಸಾರಲು ಬಂದ ಕೃಷ್ಣ...’ –ತನ್ನ ಕುಟುಂಬದ ವಿರುದ್ಧವೇ ಸಮರಕ್ಕೆ ನಿಂತ ನಾಯಕನಿಗೆ, ನಾಯಕಿ ರಾಧಾ ಹೇಳುವ ಮಾತು ಇದು. ಆಕೆಯದು ಪ್ರೀತಿ, ದ್ವೇಷದ ಅಡಕತ್ತರಿಗೆ ಸಿಲುಕಿದ ಅಸಹಾಯಕ ಸ್ಥಿತಿ. ಒಂದೇ ತಕ್ಕಡಿಯಲ್ಲಿ ನ್ಯಾಯ ಮತ್ತು ಅನ್ಯಾಯವನ್ನು ಮುಖಾಮುಖಿಯಾಗಿಸಿ ‘ಭರಾಟೆ’ ಚಿತ್ರದಲ್ಲಿ ಮಾನವೀಯತೆಯ ಮಹತ್ವ ಸಾರಿದ್ದಾರೆ ನಿರ್ದೇಶಕ ಚೇತನ್‌ಕುಮಾರ್.
ಅಳಿವಿನಂಚಿನಲ್ಲಿರುವ ಆಯುರ್ವೇದ ಪದ್ಧತಿಯ ಕಥನದೊಟ್ಟಿಗೆ ಏಕಕಾಲಕ್ಕೆ ಹಲವು ಕಥನಗಳನ್ನು ಚೇತನ್ ಒಂದೇ ಥಾಲಿಯಲ್ಲಿ ಉಣಬಡಿಸುತ್ತಾರೆ. ಥಾಲಿಯಲ್ಲಿರುವ ಕೆಲವು ತಿನಿಸುಗಳಿಗೆ ಉಪ್ಪು ಕೂಡ ಜಾಸ್ತಿಯಾಗಿದೆ. ಕೌಟುಂಬಿಕ ದ್ವೇಷ, ಪ್ರೀತಿಯ ತಳಮಳ, ರಾಜಕೀಯದ ದೊಂಬರಾಟ, ರೈತರ ಸಂಕಷ್ಟ, ಆ್ಯಕ್ಷನ್... ಎಲ್ಲವನ್ನೂ ಒಂದೇ ಕ್ಯಾನ್ವಾಸ್ ಮೇಲೆ ಹೇಳುವ ಒತ್ತಡವನ್ನು ತಮ್ಮ ಮೇಲೆ ಹೇರಿಕೊಂಡಿದ್ದಾರೆ. ಅವರ ಈ ಆಯಾಸ ಪ್ರೇಕ್ಷಕರಿಗೂ ತಟ್ಟುತ್ತದೆ.
ಶ್ರೀಮುರಳಿ ಅವರ ತಾರಾ ವರ್ಚಸ್ಸನ್ನೇ ನೆಚ್ಚಿಕೊಂಡು ಬಂದಿರುವ ಚಿತ್ರ ‘ಭರಾಟೆ’. ಅವರ ಮಿತಿ ಮತ್ತು ಶಕ್ತಿಯ ಎರಡರ ಅರಿವೂ ನಿರ್ದೇಶಕರಿಗೆ ಗೊತ್ತಿದೆ. ಹಾಗಾಗಿಯೇ, ಅವರ ಅಭಿಮಾನಿಗಳು ಬಯಸುವ ಎಲ್ಲವನ್ನೂ ಕೊಟ್ಟಿದ್ದಾರೆ. ಹಾಗಾಗಿ, ಚಿತ್ರದಲ್ಲಿ ನಟನೆಗಿಂತ ಆ್ಯಕ್ಷನ್ ಹೆಚ್ಚಿದೆ.
ರಾಜಕೀಯದಲ್ಲಿ ಬಲ್ಲಾಳ ಕುಟುಂಬವೇ ಕಿಂಗ್‌ಮೇಕರ್. ಮತ್ತೊಂದೆಡೆ ಆಯುರ್ವೇದ ಚಿಕಿತ್ಸೆ ಮೂಲಕ ಜನಸೇವೆ ಮಾಡುವುದು ರತ್ನಾಕರ ಕುಟುಂಬದ ಧ್ಯೇಯ. ಈ ಎರಡು ಮನೆತನಗಳ ನಡುವೆ ವೈವಾಹಿಕ ಬಿಕ್ಕಟ್ಟು ತಲೆದೋರುತ್ತದೆ. ಇದು ರತ್ನಾಕರ ಕುಟುಂಬದ ಯಜಮಾನ ಸೇರಿದಂತೆ ಹನ್ನೆರಡು ಮಂದಿಯ ಹತ್ಯೆಯೊಂದಿಗೆ ಅಂತ್ಯ ಕಾಣುತ್ತದೆ. ನಾಯಕ ಜಗನ್, ಆತನ ಅಪ್ಪ, ಅಮ್ಮ ಮಾತ್ರವೇ ಬದುಕುಳಿಯುತ್ತಾರೆ. ಬಲ್ಲಾಳ ಕುಟುಂಬದ ರಾಧಾಳ ಮೇಲೆ ಜಗನ್‌ಗೆ ಪ್ರೀತಿ ಮೂಡುತ್ತದೆ. ಆ ಪ್ರೀತಿ ಆತನಿಗೆ ದಕ್ಕುತ್ತದೆಯೇ ಎನ್ನುವುದು ಚಿತ್ರದ ಹೂರಣ.
ಚಿತ್ರದ ಕಥೆ ತೆರೆದುಕೊಳ್ಳುವುದು ರಾಜಸ್ಥಾನದಲ್ಲಿ. ಮೊದಲಾರ್ಧದಲ್ಲಿ ಶ್ರೀಮುರಳಿ ಆಯುರ್ವೇದ ಪದ್ಧತಿಯ ಉಳಿವಿಗಾಗಿ ದುಡಿಯುವ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯಾರ್ಧದಲ್ಲಿ ಬಾದಾಮಿಯ ಹಾದಿಗೆ ಹೊರಳಿದಾಗ ಕಥೆಗೊಂದು ಟ್ವಿಸ್ಟ್ ಸಿಗುತ್ತದೆ. ಇಲ್ಲಿ ಅವರದು ಎರಡು ಮನೆತನಗಳ ದ್ವೇಷ ನಿವಾರಿಸುವ ಜವಾಬ್ದಾರಿಯುತ ವ್ಯಕ್ತಿಯ ಪಾತ್ರ.ವಯೋವೃದ್ಧನಾಗಿ ಹಾಗೂ ಆ್ಯಕ್ಷನ್‌ನಲ್ಲಿ ಅವರದು ಕಲರ್‌ಫುಲ್ ಆದ ನಟನೆ.
ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಕೆಲವೆಡೆ ಕಥೆ ಸೊರಗಲು ಇದು ಕೂಡ ಕಾರಣ. ಆರಂಭದಲ್ಲಿ ಶಿಖರಕ್ಕೇರುವ ಸಾಯಿಕುಮಾರ್ ಪಾತ್ರ ಕೊನೆಯಲ್ಲಿ ದಿಢೀರನೆ ಪಾತಾಳಕ್ಕಿಳಿಯುತ್ತದೆ. ರವಿಶಂಕರ್, ಅಯ್ಯಪ್ಪ ಅವರ ಪಾತ್ರಗಳೂ ಇದರಿಂದ ಹೊರತಲ್ಲ.
ತಮಗೆ ಸಿಕ್ಕ ಪಾತ್ರಕ್ಕೆ ಶ್ರೀಲೀಲಾ ನ್ಯಾಯ ಒದಗಿಸಿದ್ದಾರೆ. ರಾಜಸ್ಥಾನ, ಸ್ವಿಡ್ಜರ್ಲೆಂಡ್‌ನ ರಮಣೀಯ ಸ್ಥಳಗಳು ಗಿರೀಶ್ ಆರ್. ಗೌಡ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಸಿಕ್ಕಿವೆ. ಅರ್ಜುನ್ ಜನ್ಯ ಸಂಯೋಜನೆಯ ಮೂರು ಹಾಡುಗಳು ಕೇಳಲು ಇಂಪಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.