ಲೋಕನಾಥ್ ಒಬ್ಬ ವಂಡರ್‌ಫುಲ್ ಪರ್ಸನ್!
ನನಗೆ ಲೋಕನಾಥ್ ಸರಿಸುಮಾರು 50 ವರ್ಷಗಳಿಂದ ಪರಿಚಯ. ಮೊದಲು ನಾವಿಬ್ಬರೂ ರಂಗಭೂಮಿಯಲ್ಲಿಯೇ ಕೆಲಸ ಮಾಡುತ್ತಿದ್ದದ್ದು. ನಂತರ ಅವರ ಜತೆ ಒಂದೆರಡು ಸಿನಿಮಾ ಮಾಡಿದ್ದೇನಷ್ಟೆ. ಆದರೆ ಹೆಚ್ಚು ಒಡನಾಟ ಬೆಳೆದಿದ್ದು ರಂಗಭೂಮಿ ಮೂಲಕವೇ.
ಅವರು ಅದ್ಭುತ ನಟ, ತುಂಬ ಚೆನ್ನಾಗಿ ನಟಿಸುತ್ತಿದ್ದರು, ಅವರ ಹೆಸರು ಕೇಳಿದಾಗೆಲ್ಲ ಬೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿ ತಿಂದ ಪ್ರಸಂಗ ಜ್ಞಾಪಕಕ್ಕೆ ಬರುತ್ತದೆ ಎಂಬುದೆಲ್ಲಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆ ಸಂಗತಿಗಳ ಜತೆಗೇ ನನಗೆ ಅವರಲ್ಲಿದ್ದ ಮಾನವೀಯ ಗುಣಗಳು ತುಂಬ ಮುಖ್ಯ ಎಂದು ಅನಿಸುತ್ತದೆ. ಸಿಕ್ಕಾಪಟ್ಟೆ ಒಳ್ಳೆಯ ಮನುಷ್ಯ ಅವರು. ತಾನೊಬ್ಬ ದೊಡ್ಡ ನಟ ಎಂಬ ಹಮ್ಮು ತೋರದೆ, ಸಹಕಲಾವಿದರ ಚಳಿಬಿಡಿಸಿ ಹೇಗೆ ನಟಿಸಬೇಕು ಎಂದು ಪ್ರೀತಿಯಿಂದ, ಮನೆ ಹುಡುಗರಿಗೆ ಹೇಳಿಕೊಟ್ಟ ಹಾಗೆಯೇ ಹೇಳಿಕೊಡುತ್ತಿದ್ದರು. ಅವರ ಕಷ್ಟಕ್ಕೆ ಮನೆ ಮನುಷ್ಯನಷ್ಟು ಆಪ್ತವಾಗಿ ಸ್ಪಂದಿಸುತ್ತಿದ್ದರು.
‘ಬೂತಯ್ಯನ ಮಗ ಅಯ್ಯು’ ಸಿನಿಮಾ ಚಿತ್ರೀಕರಣ ಆಗುತ್ತಿದ್ದಾಗ ನನ್ನ ಮಗಳು ಸುಧಾ ಬೆಳವಾಡಿಗೆ ಎಂಟು ವರ್ಷ. ನಾನೊಮ್ಮೆ ಅವಳನ್ನು ಚಿತ್ರೀಕರಣ ಸ್ಥಳಕ್ಕೆ ಕಳಿಸಿದ್ದೆ. ಅವಳು ಸ್ವಭಾವತಃ ಸ್ವಲ್ಪ ಪುಕ್ಕಲಿ. ಎಲ್ಲದಕ್ಕೂ ಬೇಗ ಅತ್ತುಬಿಡುತ್ತಿದ್ದಳು. ನಾನು ಲೋಕನಾಥ್‌ಗೆ ‘ಸುಧಾನ ಕಳಿಸ್ತಿದ್ದೀನಪ್ಪಾ, ಅವಳು ಬೇಗ ಎಲ್ಲದಕ್ಕೂ ಹೆದರಿಕೊಂಡುಬಿಡ್ತಾಳೆ. ಒಂಚೂರು ನೋಡ್ಕೊ’ ಎಂದು ಹೇಳಿದ್ದೆ. ಅವತ್ತು ಲೋಕನಾಥ್ ಅವಳನ್ನು ನೋಡಿಕೊಂಡು ಬಗೆಯನ್ನು ಸುಧಾ ಈವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಎಲ್ಲಿ ಕೂತರೂ ಅವರು ಪಕ್ಕ ಬಂದು ಕೂತು ‘ಊಟ ಮಾಡಿದ್ಯಾ?’ ‘ತಿಂಡಿ ತಿಂದ್ಯಾ?’ ಎಂದು ವಿಚಾರಿಸಿಕೊಂಡು ತುಂಬ ಕಾಳಜಿಯಿಂದ ನೋಡಿಕೊಂಡರಂತೆ. ಅವರ ಆ ಸ್ವಭಾವ ನನಗೂ ಗೊತ್ತಿತ್ತು. ಅವರನ್ನು ಎಲ್ಲರೂ ‘ಅಂಕಲ್’ ಎಂದು ಕರೆಯುತ್ತಿದ್ದರು. ಆ ಅನ್ವರ್ಥಕ್ಕೆ ಸಾರ್ಥಕತೆ ಕೊಡುವ ಹಾಗೆಯೇ ಅವರ ಸ್ವಭಾವವೂ ಇತ್ತು. ಎಲ್ಲರನ್ನೂ ಸೋದರಮಾವನ ಥರವೇ ನೋಡಿಕೊಳ್ಳುತ್ತಿದ್ದರು.
ನಾನು ಅವರಿಗಿಂತ ಒಂದ್ಹತ್ತು ವರ್ಷ ಚಿಕ್ಕವಳಿರಬೇಕು. ಆಫೀಸಿಂದ ನೇರವಾಗಿ ರಂಗ ತಾಲೀಮಿಗೆ ಹೋಗುತ್ತಿದ್ದೆ. ನನ್ನ ಕಂಡ ತಕ್ಷಣ ‘ಆಫೀಸಿಂದ ಬಂದ್ಯಾ? ಟೀ ಕುಡಿದಾಯ್ತಾ?’ ಎಂದು ಕಾಳಜಿಯಿಂದ ವಿಚಾರಿಸಿಕೊಳ್ತಿದ್ರು. ಹಾಗೆಯೇ ‘ಹೋಗುವಾಗ ಒಬ್ಬಳೇ ಆಟೊ ಹಿಡ್ಕೊಂಡು ಹೋಗಿಬಿಡಬೇಡ’ ಎಂದೂ ಹೇಳುತ್ತಿದ್ದರು. ಪ್ರತಿ ನಿತ್ಯ ನಮ್ಮ ಮನಗೆ ಬಂದು ಬಿಟ್ಟು ಹೋಗುತ್ತಿದ್ದರು.
ನಾಟಕ ಮಾಡುವಾಗಲೂ ಪರದೆ ಹಿಂದೆ ನಿಂತಿರುವಾಗ ಯಾವುದೋ ಒಂದು ದೃಶ್ಯದ ಕುರಿತು ನನಗೆ ಕೊಂಚ ಹಿಂಜರಿಕೆ ಇದ್ದರೆ ಆ ಸಮಯದಲ್ಲಿ ಬಂದು ಧೈರ್ಯ ಕೊಡುತ್ತಿದ್ದರು. ಅನುಭವಿ ನಟರು ಮತ್ತು ಹೊಸ ಕಲಾವಿದರು ಎಲ್ಲರಿಗೂ ಅವರು ತುಂಬ ಆಪ್ತರಾಗಿದ್ದರು. ಅಷ್ಟೇ ಸರಳವಾಗಿದ್ದರು.
ಬರೀ ಸಿನಿಮಾದಲ್ಲಿ ಮಾತ್ರ ಅಲ್ಲ; ನಿಜಜೀವನದಲ್ಲಿಯೂ ಉಪ್ಪಿನಕಾಯಿ ಎಂದರೆ ತುಂಬ ಪ್ರೀತಿ ಅವರಿಗೆ. ಒಮ್ಮೆ ಸಿನಿಮಾ ಶೂಟಿಂಗ್‌ಗೆಂದು ಹೋಗಿದ್ದಾಗ ಅಲ್ಲಿ ತುಂಬ ನೆಲ್ಲಿಕಾಯಿ ಕಾಣಿಸಿತು. ಬೆಟ್ಟದ ನೆಲ್ಲಿಕಾಯಿ. ಅದನ್ನು ತೆಗೆದುಕೊಂಡು ಉಪ್ಪಿನಕಾಯಿ ಹಾಕಬೇಕು ಎಂಬುದು ಅವರ ಆಸೆ. ‘ನನ್ನ ಮಗ ಪ್ರದೀಪ ತುಂಬ ಚೆನ್ನಾಗಿ ಉಪ್ಪಿನಕಾಯಿ ಹಾಕುತ್ತಾನೆ’ ಎಂದು ನಾನು ಹೇಳಿದೆ. ಮನೆಗೆ ಬಂದು ಪ್ರದೀಪ ಹಾಕಿದ ಉಪ್ಪಿನಕಾಯಿ ರುಚಿ ನೋಡಿ ತುಂಬ ಇಷ್ಟಪಟ್ಟರು. ಹಾಗೆಯೇ ಮೂರು ನಾಲ್ಕು ಸೇರು ನೆಲ್ಲಿಕಾಯಿ ತಂದುಕೊಟ್ಟು ‘ಉಪ್ಪಿನಕಾಯಿ ಹಾಕಿಕೊಡಪ್ಪ’ ಎಂದರು. ಮಗ ಉಪ್ಪಿನಕಾಯಿ ಹಾಕಿಕೊಟ್ಟ. ಎಷ್ಟು ಸಂಭ್ರಮದಿಂದ ಕಾರಿನಲ್ಲಿ ಬಂದು ಎರಡು ಜಾಡಿ ಉಪ್ಪಿನಕಾಯಿ ತೆಗೆದುಕೊಂಡು ಹೋದರು... ಎರಡು ಜಾಡಿ ಉಪ್ಪಿನಕಾಯಿಯೇನೂ ದೊಡ್ಡ ವಿಷಯ ಅಲ್ಲ. ಆದರೆ ಅಂಥ ಸಣ್ಣ ವಿಷಯಕ್ಕೂ ಅವರು ಪಡುತ್ತಿದ್ದ ಸಂಭ್ರಮ ತುಂಬ ವಿಶೇಷವಾದದ್ದು.
ಅವರು ತುಂಬ ಶಿಸ್ತಿನ ಮನುಷ್ಯನೂ ಹೌದು. ರಂಗನಿರ್ದೇಶಕ ಪ್ರಸನ್ನ ತುಂಬ ಶಿಸ್ತಿನ ಮನುಷ್ಯ. ಅವರ ನಾಟಕದಲ್ಲಿ ಲೋಕನಾಥ್ ನಟಿಸುತ್ತಿದ್ದರು. ಅವರಷ್ಟೇ ಇವರಿಗೂ ಶಿಸ್ತು. ತಾಲೀಮಿನ ಎಂಟನೇ ದಿನ ಪುಸ್ತಕ ನೋಡಿಕೊಳ್ಳದೇ ಡೈಲಾಗ್ ಹೇಳಬೇಕು ಎನ್ನುವುದು ಪ್ರಸನ್ನ ಅವರ ಕಟ್ಟುನಿಟ್ಟಿನ ಸೂಚನೆ. ನಾಟಕದ ಬಹುತೇಕ ಭಾಗ ಲೋಕನಾಥ್ ಅವರದೇ ಇರುತ್ತಿತ್ತು. ಆದರೆ ಒಂದು ಸಾಲೂ ತಪ್ಪದೇ ಅಷ್ಟನ್ನೂ ಒಪ್ಪಿಸುತ್ತಿದ್ದರು.
ಅವರ ಮಗಳು ಆರತಿ ನಮ್ಮ ಸುಧಾ ಕ್ಲಾಸ್‌ಮೇಟ್, ಅವರ ಮಗ ಅಶ್ವಿನ್ ನಮ್ಮ ಪ್ರಕಾಶ ಬೆಳವಾಡಿ ಕ್ಲಾಸ್‌ಮೇಟ್. ಒಟ್ಟೊಟ್ಟಿಗೇ ಓಡಾಡಿಕೊಂಡಿರುತ್ತಿದ್ದರು. ನಮ್ಮ ಮನೆಯ ಸಂಬಂಧಿಕರೂ ಹಾಗಿರುವುದಿಲ್ಲ; ಅಷ್ಟು ಆಪ್ತವಾಗಿದ್ದರು. ಅವರು ಎಷ್ಟು ನುರಿತ ಕಲಾವಿದನೋ ಅದಕ್ಕಿಂತ ಒಂದು ಕೈ ಮೇಲೆ ಮಾನವೀಯ ವ್ಯಕ್ತಿಯಾಗಿದ್ದರು. ಅವರನ್ನು ನೋಡಿ ನಟನೆಯನ್ನಷ್ಟೇ ಅಲ್ಲ, ವರ್ತನೆಯನ್ನೂ ಕಲಿತುಕೊಳ್ಳಬೇಕು. ಅಂಥ ಮನುಷ್ಯ ಲೋಕನಾಥ್.
ಬ್ಯೂಟಿಫುಲ್ ಹ್ಯೂಮನ್‌ಬಿಯಿಂಗ್!
ನಿರೂಪಣೆ: ಪದ್ಮನಾಭ ಭಟ್
ಲೋಕನಾಥ್ ನೆನಪು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.