‘ಸೀತಾರಾಮ್ ಬಿನೊಯ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ವಿಜಯ್ ರಾಘವೇಂದ್ರ ನಟಿಸಿದ್ದ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ದೇವಿ, ಈಗ ವಿಜಯ್ ರಾಘವೇಂದ್ರ ಜೊತೆ ‘ಕೇಸ್ ಆಫ್‌ಕೊಂಡಾಣ’ವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು.
ವಿಜಯ ರಾಘವೇಂದ್ರ ಮಾತನಾಡಿ, ‘ಸೀತಾರಾಮ್ ಬಿನೋಯ್ ಕೇಸ್ ನಂಬರ್ 18’ರ ನಂತರ ಇವರು ನನಗೆ ಮತ್ತೊಮ್ಮೆ ಅವಕಾಶ ಕೊಟ್ಟಿದ್ದಾರೆ. ದೇವಿ ಅವರ ಬದ್ಧತೆ, ಕೆಲಸದ ಬಗೆಗಿನ ಇರುವ ಗಾಂಭೀರ್ಯತೆ ವಿಶೇಷ. ಬಹಳ ವಿರಳವಾಗಿ ಸಿಗುವ ತಂತ್ರಜ್ಞ ಅವರು ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಜೋಗಿ ಮಾತನಾಡಿ, ‘2015ಕ್ಕೆ ಸಿನಿಮಾ ಸಂಭಾಷಣೆ ಬರೆಯುವುದನ್ನು ನಿಲ್ಲಿಸಿಬಿಟ್ಟೆ. ‘ಇದೊಳ್ಳೆ ರಾಮಾಯಣ ಸಿನಿಮಾ ನಂತರ ಯಾವುದೇ ಚಿತ್ರಕ್ಕೆ ಬೇರೆ ಬೇರೆ ಕಾರಣಗಳಿಂದ ಸಂಭಾಷಣೆ ಬರೆದಿರಲಿಲ್ಲ. ಇದೊಂದು ಸುಂದರವಾದ ತಂಡ, ಸುಂದರವಾದ ಕಥೆ. ಬಹಳ ಸುಂದರವಾಗಿ ಪ್ರೆಸೆಂಟ್ ಮಾಡಲು ಹೊರಟಿದ್ದಾರೆ. ನಿಜವಾಗಲೂ ಬಹಳ ಸಂತೋಷವಾಗುತ್ತಿದೆ. ಪ್ರತಿಯೊಬ್ಬರೂ ಬೆಂಬಲ ಕೊಡಿ’ ಎಂದರು.
ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಬಾರಿ ತನಿಖಾ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 09/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹಾಗೂ ಭಾವನಾ ಮೆನನ್ ಇಬ್ಬರು ಪೊಲೀಸ್ ಅಧಿಕಾರಿಗಳಾಗಿ ನಟಿಸಲಿದ್ದಾರೆ. ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಜೋಗಿಯವರ ಸಂಭಾಷಣೆ ಈ ಚಿತ್ರಕ್ಕಿದೆ. ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.