ADVERTISEMENT

ಸಂದರ್ಶನ: ‘ಭೀಮ’ ಸಿನಿಮಾದ ‘ಗಿರಿಜಾ’ಳಿಗೆ ಜೀವ ತುಂಬಿದ ಪ್ರಿಯಾ

ಅಭಿಲಾಷ್ ಪಿ.ಎಸ್‌.
Published 22 ಆಗಸ್ಟ್ 2024, 23:30 IST
Last Updated 22 ಆಗಸ್ಟ್ 2024, 23:30 IST
<div class="paragraphs"><p>ಪ್ರಿಯಾ ಶಠಮರ್ಷಣ</p></div>

ಪ್ರಿಯಾ ಶಠಮರ್ಷಣ

   
ರಂಗಭೂಮಿ ಶಿಕ್ಷಕಿ, ಕಿರುತೆರೆ ನಟಿ ಪ್ರಿಯಾ ಶಠಮರ್ಷಣ, ‘ಭೀಮ’ ಸಿನಿಮಾ ಬಿಡುಗಡೆಗೊಂಡ ಬಳಿಕ ಖಡಕ್‌ ಪೊಲೀಸ್‌ ಅಧಿಕಾರಿ ‘ಗಿರಿಜಾ’ಳಾಗಿ ಬಹುತೇಕರಿಗೆ ಪರಿಚಿತ. ಪ್ರಸ್ತುತ ಸಮಾಜಕ್ಕೆ ಇಂತಹ ದಕ್ಷ ಮಹಿಳಾ ಅಧಿಕಾರಿಯ ಅವಶ್ಯಕತೆ ಇದೆ ಎನ್ನುವ ಪ್ರಿಯಾ ‘ಭೀಮ’ ಬಳಿಕ ಎರಡು ಕನ್ನಡ, ಒಂದು ತಮಿಳು ಸಿನಿಮಾ ಕಥೆ ಕೇಳಿದ್ದಾರೆ. ಅವರೊಂದಿಗೆ ಒಂದು ಮಾತುಕತೆ...

ಪ್ರಿಯಾ ಹಿನ್ನೆಲೆ ಏನು?

ನಾನು ಮೈಸೂರು ಹುಡುಗಿ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದಾಕೆ. ತಾಯಿ ಶಿಕ್ಷಕಿ, ತಂದೆ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಬಣ್ಣದ ಲೋಕ ನಮ್ಮ ಕುಟುಂಬಕ್ಕೆ ಹೊಸದು. ನನ್ನನ್ನೂ ಶಿಕ್ಷಕಿಯನ್ನಾಗಿ ಮಾಡುವ ಯೋಚನೆ ಪೋಷಕರಿಗೆ ಇತ್ತು.

ADVERTISEMENT

ನಾನು ಟಿಸಿಎಚ್‌ ಮಾಡಿದ್ದೇನೆ. ಆದರೆ ಶಾಲಾ ಶಿಕ್ಷಕಿಯಾಗದೆ ರಂಗಭೂಮಿ ಶಿಕ್ಷಕಿಯಾದೆ. ರಂಗಭೂಮಿ ನಂಟು ನನ್ನನ್ನು ನಟನೆಯತ್ತ ಸೆಳೆಯಿತು. 2008ರಿಂದ ರಂಗಭೂಮಿ ಪಯಣ ಆರಂಭ. ಮೈಸೂರಿನಲ್ಲಿ ಮಂಡ್ಯ ರಮೇಶ್‌ ಅವರ ಗರಡಿಯಲ್ಲಿ ‘ನಟನ’ದಲ್ಲಿ ರಂಗತರಬೇತಿ ಪಡೆದೆ. 2015ರಲ್ಲಿ ನಟ ಅವಿನಾಶ್‌ ಶಠಮರ್ಷಣ ಅವರನ್ನು ಮದುವೆಯಾದ ಬಳಿಕ ಬೆಂಗಳೂರಿಗೆ ಬಂದೆ.

ನಾವಿಬ್ಬರೂ ಸೇರಿ ‘SARK’– Silence, Action, Reaction and Talk ಎಂಬ ತಂಡ ಸ್ಥಾಪಿಸಿ ನಟನೆಯ ಕಾರ್ಯಾಗಾರಗಳನ್ನು, ತರಗತಿಗಳನ್ನು, ಬೇಸಿಗೆ ಶಿಬಿರಗಳನ್ನು ಸರ್ಕಾರಿ ರಂಗಮಂದಿರಗಳು, ಸ್ಥಳಗಳಲ್ಲಿ ಹೇಳಿಕೊಡುತ್ತಿದ್ದೇವೆ. ಜೊತೆಜೊತೆಯಲ್ಲೇ ರಂಗಾಭ್ಯಾಸ, ನಾಟಕಗಳ ಪ್ರದರ್ಶನಗಳನ್ನೂ ನೀಡುತ್ತಿ‌ದ್ದೇವೆ. ‘ಲಕ್ಷಣ’ ಧಾರಾವಾಹಿ ಮೂಲಕ ನಾನು ಕಿರುತೆರೆ ಪಯಣ ಆರಂಭಿಸಿದೆ.

ರಂಗಭೂಮಿಯ ಆಕರ್ಷಣೆಗೆ ಕಾರಣವೇನು?

ನನಗೆ ಚಿತ್ರಕಲೆ, ನೃತ್ಯ, ಕಥೆ ಹೇಳುವುದರಲ್ಲಿ ಆಸಕ್ತಿಯಿತ್ತು. ‘ನಟನ’ದಲ್ಲಿ ನಡೆಯುವ ‘ರಜಾಮಜಾ’ಗೆ ನನ್ನನ್ನು ತಾಯಿ ಸೇರಿಸಿದ್ದರು. ಅಲ್ಲಿ ಸ್ವಯಂಸೇವಕಿಯಾಗಿ ನಾನು ಸೇರಿಕೊಂಡೆ. ಅಲ್ಲಿ ನಾಟಕಗಳನ್ನು ನೋಡಿ ನನಗೆ ಸ್ಫೂರ್ತಿಯಾಯಿತು, ಪರಿಣಾಮ ಬೀರಿತು.

ನನ್ನೊಳಗಿನ ನಟನೆಯ ಸಾಮರ್ಥ್ಯವನ್ನು ಇನ್ನಷ್ಟು ಪಾಲಿಶ್‌ ಮಾಡಬೇಕು, ತರಬೇತಿ ಪಡೆದುಕೊಳ್ಳಬೇಕು ಎಂದು ಆಗ ಅನಿಸಿತು. ಇದನ್ನು ಮಂಡ್ಯ ರಮೇಶ್‌ ಅವರ ಜೊತೆ ಹಂಚಿಕೊಂಡೆ. ಸ್ವಯಂಸೇವಕಿಯಾಗಿ ಹೋದವಳು ‘ನಟನ’ದಿಂದ ಕಲಾವಿದೆಯಾಗಿ ಹೊರಬಂದೆ.

‘ಭೀಮ’ ಸಿನಿಮಾದಲ್ಲಿ ಅವಕಾಶ ದೊರಕಿದ್ದು ಹೇಗೆ? 

ಕೋವಿಡ್‌ ಬಳಿಕ ‘ಸಲಗ’ ಸಿನಿಮಾ ಬಿಡುಗಡೆಗೆ ದುನಿಯಾ ವಿಜಯ್‌ ಅವರು ಸಜ್ಜಾಗುತ್ತಿದ್ದರು. ಜೊತೆಗೆ ಹೊಸ ಸಿನಿಮಾವೊಂದಕ್ಕೆ ವಿಜಯ್‌ ಅವರು ಸಿದ್ಧತೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಪಾತ್ರವೊಂದಕ್ಕೆ ಅವಿನಾಶ್‌ ಅವರನ್ನು ವಿಜಯ್‌ ಕರೆದಿದ್ದರು. ಅವಿನಾಶ್‌ ಮೂಲಕ ನಾನೂ ರಂಗಭೂಮಿ ಕಲಾವಿದೆ ಎನ್ನುವುದು ವಿಜಯ್‌ ಅವರಿಗೆ ತಿಳಿಯಿತು. ಆ ಸಿನಿಮಾದಲ್ಲಿ ನಾನು ಬೇರೊಂದು ಪಾತ್ರಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ. ವಿಜಯ್‌ ಅವರು ಬಳಿಕ ಭೀಮ ಸಿನಿಮಾ ಕೈಗೆತ್ತಿಕೊಂಡರು.

‘ಭೀಮ’ದಲ್ಲಿ ‘ಗಿರಿಜಾ’ ಪಾತ್ರಕ್ಕೆ ಹೊಸ ಮುಖವನ್ನೇ ಅವರು ಹುಡುಕುತ್ತಿದ್ದರಂತೆ. ಒಂದು ದಿನ ನನಗೆ ಫೋನ್‌ ಮಾಡಿ, ‘ಪ್ರಿಯಾ ಬೇರೆ ಸ್ಕ್ರಿಪ್ಟ್‌ ತೆಗೆದುಕೊಂಡಿದ್ದೇನೆ. ಇದೊಂದು ಪವರ್‌ಫುಲ್‌ ಪಾತ್ರ ಮಾಡುತ್ತಿಯಾ’ ಎಂದು ಆಫರ್‌ ನೀಡಿದರು. ಹೀಗೆ ನಾನು ‘ಗಿರಿಜಾ’ಳಾದೆ.

ಐಪಿಎಸ್‌ ಅಧಿಕಾರಿ ಆಗಬೇಕು ಅಥವಾ ಭಾರತೀಯ ಸೇನೆ ಸೇರಬೇಕು ಎನ್ನುವ ಆಸೆ ಇತ್ತು. ಅದು ನಿಜಜೀವನದಲ್ಲಿ ನನಸು ಮಾಡಲು ಆಗಲಿಲ್ಲ. ಸಿನಿಮಾದಲ್ಲಿ ನನಸಾಗಿದೆ. ಇದು ಕಲಾವಿದರಿಗೆ ಸಿಗುವ ವರ. ಪ್ರತಿಯೊಂದು ಪಾತ್ರವನ್ನು ಅವರು ಜೀವಿಸಬಹುದು. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ‘ಮಾಲಾಶ್ರೀ ಅವರ ಜಾಗದಲ್ಲಿ ನಿಮ್ಮನ್ನು ಕಣ್ಮುಚ್ಚಿ ಒಪ್ಪಿಕೊಳ್ಳಬಹುದು’ ಎಂದಾಗ ಪ್ರಶಸ್ತಿ ಪಡೆದಷ್ಟೇ ಸಂತೋಷವಾಯಿತು. ಮೊದಲನೇ ಕಮರ್ಷಿಯಲ್‌ ಬ್ರೇಕ್‌ ‘ಭೀಮ’ದಿಂದ ಸಿಕ್ಕಿದೆ.

ಈ ಪಾತ್ರವನ್ನು ವಿಜಯ್‌ ಹಾಗೂ ಮಾಸ್ತಿ ಕೆತ್ತಿದ ಬಗೆ...

ವಿಜಯ್‌ ಹಾಗೂ ಮಾಸ್ತಿ ಅವರ ಡೆಡ್ಲಿ ಕಾಂಬಿನೇಷನ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದೊಂದು ಮ್ಯಾಜಿಕ್‌ ಕಾಂಬಿನೇಷನ್‌. ವಿಜಯ್‌ ಅವರು ಯೋಚಿಸುವ ಕಥೆಗೆ ತಲೆಮೇಲೆ ಹೊಡೆದ ರೀತಿ ಸಂಭಾಷಣೆ ಬರೆಯುವ ಕಲೆ ಮಾಸ್ತಿ ಅವರಿಗಿದೆ. ವಿಷಯಗಳ ಗುಚ್ಛ ವಿಜಯ್‌ ಅವರದ್ದಾದರೆ ಪದಗಳ ಗುಚ್ಛ ಮಾಸ್ತಿ ಅವರದ್ದು. ಕಲಾವಿದರ ನಟನೆಯ ಸಾಮರ್ಥ್ಯವನ್ನು ಗಮನಿಸಿಕೊಂಡು ವಿಜಯ್‌ ಅವರು ಸಂಭಾಷಣೆಗೆ ಮತ್ತಷ್ಟು ಒತ್ತು ನೀಡುತ್ತಾರೆ. ಹಲವೆಡೆ ಸಂಭಾಷಣೆಗಳಲ್ಲಿನ ಬದಲಾವಣೆಗಳನ್ನೂ ಆಯಾ ಕ್ಷಣದಲ್ಲೇ ಹೇಳುತ್ತಾರೆ.

ಹೆಚ್ಚಿನ ನಟನೆಯ ಜವಾಬ್ದಾರಿಯನ್ನೂ ಹಂಚುತ್ತಾರೆ. ನಿರ್ದೇಶಕನ ಸ್ಥಾನದಲ್ಲಿದ್ದಾಗ ವಿಜಯ್‌ ಅವರ ಯೋಚನೆಯೇ ಬದಲಾಗುತ್ತದೆ. ವಾಸ್ತವದಲ್ಲಿ ನಡೆಯುವ ಸ್ಥಿತಿಗತಿಗಳನ್ನು ನೋಡಿಕೊಂಡು ಆ ಕ್ಷಣದಲ್ಲೇ ಅವುಗಳನ್ನು ಸಿನಿಮಾದೊಳಗೆ ಅಳವಡಿಸುತ್ತಾರೆ. ನಾನು ಮೊದಲ ದೃಶ್ಯಕ್ಕೆ ಸಿದ್ಧವಾಗಿ ಹೋದ ಸಂದರ್ಭದಲ್ಲಿ ನನ್ನನ್ನು ಪೊಲೀಸ್‌ ಯುನಿಫಾರಂನಲ್ಲಿ ನೋಡಿ ‘ಪಾತ್ರವು ಅರ್ಧದಷ್ಟು ಇಲ್ಲೇ ಗೆದ್ದಿತು’ ಎಂದಿದ್ದರು ವಿಜಯ್‌.

ಮುಂದೆ ಬರಲಿರುವ ಒಂದೇ ರೀತಿಯ ಪಾತ್ರಗಳ ಆಫರ್‌ಗೆ ನಿಮ್ಮ ಉತ್ತರವೇನಿರಲಿದೆ?

ಹೌದು, ‘ಗಿರಿಜಾ’ ಪಾತ್ರವನ್ನು ನೋಡಿ ಈಗಾಗಲೇ ಹಲವರು ಎಸಿಪಿ, ಸಬ್‌ ಇನ್‌ಸ್ಪೆಕ್ಟರ್‌ ಪಾತ್ರಗಳ ಆಫರ್‌ಗಳನ್ನು ನೀಡಿದ್ದಾರೆ. ಇಂತಹ ಪಾತ್ರಗಳನ್ನು ಒಪ್ಪುವ ಮೊದಲು ಸಿನಿಮಾದ ಕಥೆ, ನನ್ನ ಪಾತ್ರದ ಪ್ರಾಮುಖ್ಯತೆಯನ್ನು ಖಂಡಿತಾ ನೋಡುತ್ತೇನೆ.

ಒಬ್ಬ ಕಲಾವಿದೆಯಾಗಿ ಎಲ್ಲವನ್ನೂ ಮರೆತು ಆ ಪಾತ್ರವನ್ನು ಜೀವಿಸುವ ಅವಕಾಶ ಸಿಗಬೇಕು. ಅಧ್ಯಯನಕ್ಕೆ, ಪ್ರಯೋಗಕ್ಕೆ ಅವಕಾಶವಿದ್ದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ಈ ಪಾತ್ರವನ್ನು ಪ್ರಿಯಾ ಬಿಟ್ಟರೆ ಬೇರೆ ಯಾರು ಮಾಡಲು ಸಾಧ್ಯವಿರಲಿಲ್ಲ ಎನ್ನುವ ಮಾತು ಪ್ರೇಕ್ಷಕರಿಂದ ಬರಬೇಕು. ಇಂತಹ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಹೊರತುಪಡಿಸಿ ನನ್ನ ಪಾತ್ರದ ಮೇಲೆಯೇ ಸಿನಿಮಾ ನಡೆಯಬೇಕು, ಮಹಿಳಾ ಪ್ರಧಾನ ಚಿತ್ರವಾಗಿರಬೇಕು ಎಂಬ ನಿಯಮಗಳೇನೂ ಹಾಕಿಕೊಂಡಿಲ್ಲ.

ಹೊಸ ಪ್ರಾಜೆಕ್ಟ್‌ಗಳು ಯಾವುದು?

ಅನೂಪ್‌ ಕಶ್ಯಪ್‌ ಅವರ ‘ಗಾಂಧಿ ಸ್ಕ್ವೇರ್‌’ ಎನ್ನುವ ಸಿನಿಮಾ ಮಾಡುತ್ತಿದ್ದೇನೆ. ಇದು ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನಲ್ಲಿದೆ. ಜೊತೆಗೆ ಮತ್ತೊಂದು ಬಿಗ್‌ಬಜೆಟ್‌ ಕನ್ನಡ ಸಿನಿಮಾವೊಂದರ ಮಾತುಕತೆ ನಡೆಯುತ್ತಿದೆ. ಜೊತೆಗೆ ‘ಭೀಮ’ ಬಿಡುಗಡೆ ಬಳಿಕ ತಮಿಳು ಸಿನಿಮಾವೊಂದರ ಆಫರ್‌ ಬಂದಿದೆ. ಇದರ ಕಥೆ ಕೇಳುತ್ತಿದ್ದೇನೆ. ಕನ್ನಡ ಸಿನಿಮಾವೊಂದರ ಮಾತುಕತೆಯೂ ನಡೆಯುತ್ತಿದೆ.

‘ಇವತ್ತಿನ ಪರಿಸ್ಥಿತಿಗೆ ‘ಗಿರಿಜಾ’ ಎನ್ನುವ ಅಧಿಕಾರಿ ಬೇಕು’
‘ಇವತ್ತಿನ ಸನ್ನಿವೇಶದಲ್ಲಿ ದೇಶದ ಹಲವೆಡೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ನೋಡುವಾಗ ‘ಗಿರಿಜಾ’ ರೀತಿಯ ದಕ್ಷ ಅಧಿಕಾರಿ ಬೇಕು ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ವೈಯಕ್ತಕವಾಗಿ ಈ ಪಾತ್ರದಿಂದ ಆಚೆ ನಿಂತು ಸಾಮಾನ್ಯಪ್ರಜೆಯಾಗಿ ನಾನೂ ಇದನ್ನೇ ಆಗ್ರಹಿಸುತ್ತೇನೆ. ‘ಗಿರಿಜಾ’ ರೀತಿಯ ದಕ್ಷ ಅಧಿಕಾರಿ ಅವಶ್ಯವಾಗಿದೆ. ಯಾವುದಕ್ಕೂ ಅಂಜದೆ ಧ್ವನಿ ಎತ್ತಿ ನ್ಯಾಯದ ಪರ ಹೋರಾಟ ಮಾಡುವ ಹೆಣ್ಣುಮಕ್ಕಳು ಬರಬೇಕಾಗಿದೆ. ಇವತ್ತು ಈ ರೀತಿಯ ಜಾಗೃತಿ ಮೂಡಬೇಕಾಗಿದೆ. ಊಹೆಗೂ ಮೀರಿದ ದುರಂತಗಳು ನಡೆಯುತ್ತಿವೆ. ಈ ವರ್ಷದ ಸ್ವಾತಂತ್ರ್ಯ ದಿನವನ್ನು ನಾವು ಬಹಳ ನೋವಿನಿಂದ ಕಳೆದೆವು. ‘ಭೀಮ’ ಸಿನಿಮಾ ಗೆದ್ದಿದೆ, ಪಾತ್ರಗಳು ಗೆದ್ದಿವೆ. ಆದರೆ ಸಿನಿಮಾದಲ್ಲಿರುವ ಸಂದೇಶವನ್ನು ಗೆಲ್ಲಿಸುವ ಸಮಯ ಇದಾಗಿದೆ’ ಎನ್ನುತ್ತಾರೆ ಪ್ರಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.