ನಟ ಭುವನ್ ಪೊನ್ನಣ್ಣ ಪಕ್ಕಾ ‘ಲವ್ ಮೂಡ್’ನಲ್ಲಿದ್ದರು. ಬಲು ಬೇಗ ಮಾತಿಗೆ ಸಿಕ್ಕ ಪರಿಯಲ್ಲೇ ಅವರ ಜಾಲೀ ಬದುಕಿನ ಮಿಂಚಿತ್ತು. ‘ಪ್ರೇಮಿಗಳ ದಿನ’ ಅಂದ್ರೆ ನಿಮಗೆ ಏನು ನೆನಪಾಗುತ್ತೆ ಎಂದರೆ, ‘ನನ್ನ ಜೀವನದಲ್ಲಿ ಬೇಜಾನ್ ಲವ್ ಸ್ಟೋರಿಗಳಿವೆ ಒಂದಾ, ಎರಡಾ? ಯಾವುದು ಹೇಳಲಿ? ಅಂತ ಒಮ್ಮೆ ತಮ್ಮ ಗುಂಗುರು ಕೂದಲ ಮೇಲೆ ಕೈಯಾಡಿಸಿಕೊಂಡ ಭುವನ್, ತಮ್ಮ ಪ್ರೇಮಪುರಾಣ ನವಿರಾಗಿಯೇ ಬಿಚ್ಚಿಟ್ಟರು.
ನನಗೆ ಒಂದು ವೀಕ್‌ನೆಸ್ ಇದೆ. ಅದುವೇ ಬ್ಯೂಟಿ. ದೇವರು ಸ್ವಲ್ಪ ಜಾಸ್ತಿ ಟೈಮ್ ತಗೊಂಡು ಯಾರನ್ನಾದರೂ ಸೃಷ್ಟಿಮಾಡಿದ್ದರೆ, ಅಂಥ ಸೌಂದರ್ಯದ ಕಡೆ ಬೇಗ ಆಕರ್ಷಿತನಾಗ್ತೀನಿ. ಲವ್ ಆಗಿಬಿಡುತ್ತೆ. ಹಾಗಾಗಿ, ಲೆಕ್ಕವಿಲ್ಲದಷ್ಟು ಕ್ರಶ್ ಆಗಿಬಿಟ್ಟಿದೆ...
ಅವಳೇ ಸ್ಫೂರ್ತಿ!
ನಾನೂ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೆ. ಒಬ್ಬರಿಗೊಬ್ಬರು ಬಿಟ್ಟುಕೊಡಲಾರದಷ್ಟು ಪ್ರೀತಿ ನಮ್ಮದಾಗಿತ್ತು. ಆಗಿನ್ನೂ ನಾನು ಇಷ್ಟು ಜನಪ್ರಿಯನಾಗಿರಲಿಲ್ಲ. ಅವಕಾಶಗಳಿಗಾಗಿ ಅಲೆದಾಟವಿತ್ತು. ಪ್ರೀತಿಗೆ ಬರವಿರಲಿಲ್ಲ. ಅವಳು ಮಾಡೆಲ್ ಆಗಿದ್ದವಳು. ಇಬ್ಬರೂ ಜತೆಯಾಗಿ ಐದು ವರ್ಷ ರಿಲೇಷನ್ ಶಿಪ್‌ನಲ್ಲಿದ್ದೆವು. ಅವಳ ಅಮ್ಮ ನನ್ನ ಬಗ್ಗೆ ಫಿಟ್ಟಿಂಗ್ ಇಟ್ಟು ಅವಳನ್ನು ನನ್ನಿಂದ ದೂರ ಮಾಡಿದರು. ಆಗ ಅನಿಸಿತು ನನಗೆ ಜೀವನದಲ್ಲಿ ಬರೀ ಪ್ರೀತಿ ಇದ್ದರಷ್ಟೇ ಸಾಲದು. ಹಣವೂ ಇರಬೇಕೆಂದು. ನಿಜ ಹೇಳಬೇಕೆಂದರೆ ನನಗೆ ಅವಳೇ ಸ್ಫೂರ್ತಿ. ಅವಳಿಂದಾಗಿ ನಾನು ಜೀವನವನ್ನು ಗಂಭೀರವಾಗಿ ತೆಗೆದುಕೊಂಡೆ.
ನನ್ನ ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವೂ ಹೆಣ್ಣಿನಿಂದಲೇ ಆಗಿದೆ. ಬ್ರೇಕ್ಅಪ್ ಆಗಿದ್ದು ಒಳ್ಳೆಯದೇ ಆಯಿತು. ಪ್ರೇಮಿಗಳ ದಿನ ಬಂದರೆ ಸಾಕು ಇದೆಲ್ಲಾ ನೆನಪಾಗುತ್ತೆ. ಹಾಗಂತ ನಾನು ಬೇಸರಪಟ್ಟುಕೊಳ್ಳೋದಿಲ್ಲ. ನನ್ನ ಪ್ರಕಾರ ಅಪ್ಪ–ಅಮ್ಮನ ಪ್ರೀತಿಯೇ ನಿಜವಾದ ಪ್ರೀತಿ. ಗರ್ಲ್‌ಫ್ರೆಂಡ್, ಹೆಂಡ್ತಿ ಎಲ್ಲವೂ ಅಡ್ಜಸ್ಟ್‌ಮೆಂಟ್ ಕಣ್ರೀ...
ಅವಳಿಲ್ಲ ಅಂತ ನಾನು ಇದುವರೆಗೂ ಕೊರಗಿಲ್ಲ. ನನಗೆ ಸಣ್ಣಸಣ್ಣ ಸಂಗತಿಯೂ ಖುಷಿ ಕೊಡುತ್ತೆ. ಒಂದೊಳ್ಳೆ ಬಿರಿಯಾನಿ ಕೊಟ್ಟರೆ ಅದನ್ನೇ ಅರ್ಧಗಂಟೆ ಎಂಜಾಯ್ ಮಾಡುತ್ತಾ ತಿಂದು ಸಂತಸ ಪಡ್ತೀನಿ...
ಇನ್ನು ಪ್ರೇಮಿಗಳ ದಿನ ಬಂದರೆ ಸಾಕು. ಬೆಳಿಗ್ಗೆಯಿಂದಲೂ ನಿರಂತರವಾಗಿ ಕರೆಗಳು ಬರುತ್ತವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ನನಗೆ ಹುಡುಗಿಯರೇ ಹೆಚ್ಚು ಫಾಲೋವರ್ಸ್ ಇದ್ದಾರೆ. ಕೆಲವರಂತೂ ತಮ್ಮ ಕೈಕೊಯ್ದುಕೊಂಡು, ಎದೆ, ಕೈಮೇಲೆ ನನ್ನ ಚಿತ್ರ, ಹೆಸರಿನ ಟ್ಯಾಟೂ ಹಾಕಿಸಿಕೊಂಡವರಿದ್ದಾರೆ. ನಿತ್ಯವೂ ‘ಐ ಲವ್ ಯೂ’ಅಂತ ಸಂದೇಶಗಳು ಬರುತ್ತಲೇ ಇರುತ್ತವೆ. ನಾನು ಹೇಳೋದಿಷ್ಟೇ ಪ್ರೀತಿ ಇರಲಿ ಆದರೆ, ಹುಚ್ಚುಪ್ರೀತಿ ಬೇಡ.
ಈಗಿನ ತಂತ್ರಜ್ಞಾನ ರೊಮಾನ್ಸ್ ಅನ್ನು ಕೊಂದುಬಿಟ್ಟಿದೆ. 80–90ರ ದಶಕದ ರೊಮ್ಯಾಂಟಿಕ್ ಭಾವನೆಗಳು ಈಗಿಲ್ಲ. ಅವಸರ ಪ್ರೇಮಕ್ಕೆ ಸಿನಿಮಾಗಳ ಕೊಡುಗೆಯೂ ಸಾಕಷ್ಟಿದೆ. ಸಿನಿಮಾ ಉದ್ಯಮವಾಗಿದೆ ನಿಜ. ಸಿನಿಮಾ ಓಡುವುದಕ್ಕಾಗಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡಬಾರದು. ‘ಅಪ್ಪ ಲೂಸಾ ಅಮ್ಮ ಲೂಸಾ’ ಅನ್ನುವಂಥ ಸಾಲುಗಳನ್ನು ಪುಟ್ಟ ಮಕ್ಕಳ ಬಾಯಲ್ಲಿ ಕೇಳುವಂತಾಗಿದೆ. ವಿಷಾದವೆಂದರೆ ದೊಡ್ಡ ದೊಡ್ಡ ನಿರ್ದೇಶಕರು, ಗೀತರಚನೆಕಾರರು ಅಂತ ಅನಿಸಿಕೊಂಡವರೇ ಇಂಥದ್ದನ್ನು ಕೊಡುತ್ತಿದ್ದಾರೆ...ಎನ್ನುತ್ತಾ ಮಾತು ಮುಗಿಸಿದ ಭುವನ್ ಹುಡುಗಿಯರನ್ನು ಇಂಪ್ರೆಸ್ ಮಾಡಲು ಕೆಲ ಟಿಪ್ಸ್ ನೀಡಲು ಮರೆಯಲಿಲ್ಲ...
ಹುಡುಗರಿಗೆ ಭುವನ್ ಟಿಪ್ಸ್...
* ಆತ್ಮವಿಶ್ವಾಸದಿಂದ ಇರಿ. ಫಿಟ್‌ನೆಸ್ ಕಡೆ ಗಮನ ಕೊಡಿ
* ಅವಳೊಂದಿಗೆ ಏನು ಮಾತನಾಡಬೇಕು, ಮಾತನಾಡಬಾರದು ಎನ್ನುವ ಬಗ್ಗೆ ಎಚ್ಚರವಿರಲಿ
* ಕೊಳಕು ಹುಡುಗರು ಹುಡುಗಿಯರಿಗೆ ಇಷ್ಟವಾಗೋಲ್ಲ. ಹಾಗಾಗಿ, ಸ್ನಾನ ತಪ್ಪಿಸಬೇಡಿ
* ಒಳ್ಳೆಯ ಡಿಯೊಡ್ರೆಂಟ್ ಬಳಸಿ. ಸ್ಟ್ರಾಂಗ್ ಪರ್ಫ್ಯೂಮ್ ಬೇಡ
* ಒಳ್ಳೆಯ ಶೂ ಇರಲಿ, ಬಾಯಿಯ ದುರ್ಗಂಧ ಬಾರದಿರಲು ಮೌತ್ ಫ್ರೆಶ್‌ನರ್ ಬಳಸಿ
* ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ
* ಹುಡುಗಿ ಚೆನ್ನಾಗಿ ಅಲಂಕರಿಸಿಕೊಂಡಾಗ ಅವಳ ದೇಹವನ್ನೇ ನೋಡಿ ಬಾಯ್ಬಿಡಬೇಡಿ! ನಿಮ್ಮ ನೋಟ ಅವಳಿಗೆ ಮುಜುಗರ ತಾರದಿರಲಿ
* ಅವಳ ಅಲಂಕಾರ ಹೊಗಳಿ.
* ಅಪ್ಪಿತಪ್ಪಿ ಅವಳಿಗೆ ಬೋರಾಗುವಂತೆ ಮಾತನಾಡಬೇಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.