ADVERTISEMENT

ಡಬ್ಬಿಂಗ್‌ ಮುಗಿಸಿದ ಗೋಧ್ರಾ; ಹಾಡಿಗೂ ಬಿಗ್‌ಬಜೆಟ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:45 IST
Last Updated 29 ಡಿಸೆಂಬರ್ 2019, 19:45 IST
ಶ್ರದ್ಧಾ ಶ್ರೀನಾಥ್‌ ಮತ್ತು ನೀನಾಸಂ ಸತೀಶ್‌
ಶ್ರದ್ಧಾ ಶ್ರೀನಾಥ್‌ ಮತ್ತು ನೀನಾಸಂ ಸತೀಶ್‌   

ವ್ಯವಸ್ಥೆಯಲ್ಲಿ ನಡೆಯುವ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರನಾದವನ ಕಥೆಯನ್ನು ಹೇಳಲಿರುವ ‘ಗೋಧ್ರಾ’ ಚಿತ್ರವು ನಟ ನೀನಾಸಂ ಸತೀಶ್‌ ಅವರ ಇದುವರೆಗಿನ ವೃತ್ತಿ ಬದುಕಿನಲ್ಲೇ ಅತ್ಯಂತ ದೊಡ್ಡ ಬಜೆಟ್‌ ಸಿನಿಮಾ ಆಗಲಿದೆಯಂತೆ!

ಈ ಚಿತ್ರದ ಮಾತಿನ ಲೇಪನ (ಡಬ್ಬಿಂಗ್‌) ಮುಗಿದಿದ್ದು, ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಚಿತ್ರದ ನಾಯಕ ಎಂಟ್ರಿಕೊಡುವ ಸನ್ನಿವೇಶದ ‘ಜೈ ಬೋಲೋ ಜೈ ಜೈ ಬೋಲೋ ಜೈ ಹನುಮಾನ್ ಅಂದ್ಕೊಂಡಂಗೆ ಆಗೋದಿಲ್ಲ ಮನುಷ್ಯನ ಜನ್ಮ’ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೊಂದು ಹಾಡಿಗೆ ಸುಮಾರು ₹30 ಲಕ್ಷದಿಂದ ₹40 ಲಕ್ಷವನ್ನು ವ್ಯಯಿಸಿ ಚಿತ್ರೀಕರಿಸುವುದು ಚಿತ್ರತಂಡದ ಯೋಜನೆ.

ಚೇತನ್‌ಕುಮಾರ್‌ ಸಾಹಿತ್ಯ ಬರೆದಿರುವ ಈ ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್‌ ಕೂಡ ಹಾಕಲಾಗುತ್ತಿದೆ.ಚಿತ್ರದ ಟೀಸರ್‌ ಅನ್ನು ಜನವರಿಯ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆಚಿತ್ರತಂಡ. ಇದೊಂದು ಬಿಗ್‌ಬಜೆಟ್‌ ಸಿನಿಮಾ ಎನ್ನುವ ಮಾತಿಗೆ ಪುಷ್ಟಿನೀಡುವಂತೆ ‘ಚಿತ್ರಕ್ಕೆ ವಿನಿಯೋಗಿಸಿರಬಹುದಾದ ಬಜೆಟ್‌ನ ಅಂದಾಜು ಪ್ರೇಕ್ಷಕನಿಗೆ ಟೀಸರ್‌ನಲ್ಲೇ ಗೊತ್ತಾಗಲಿದೆ’ ಎನ್ನುವ ಮಾತು ಸೇರಿಸುತ್ತಾರೆ ನಟ ಸತೀಶ್‌ ಕೂಡ.

ADVERTISEMENT

ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ನೀನಾಸಂ ಸತೀಶ್‌ ಮತ್ತು ಶ್ರದ್ಧಾ ಶ್ರೀನಾಥ್‌ ಕಾಣಿಸಿಕೊಂಡಿದ್ದಾರೆ.ಸತೀಶ್‌ ಅವರದ್ದು ಕ್ರಾಂತಿಕಾರಿ ಸುಭಾಷ್‌ ಪಾತ್ರ. ಈತನ ಸಹಪಾಠಿ ಮತ್ತು ಪ್ರೇಮಿಯಾಗಿ ಶ್ರದ್ಧಾ ಕಾಣಿಸಿಕೊಂಡಿದ್ದು,ನಾಯಕನಿಗೆ ಸರಿಸಮಾನ ಪಾತ್ರ ಇವರದ್ದು. ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್‌ ಕುಮಾರ್‌ ಹಾಗೂ ಪೈಲಟ್‌ ಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ‘ಅಚ್ಯುತ್‌ ಕುಮಾರ್‌ ಅವರ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಸಮಕಾಲಿನ ಯಾವುದೇ ರಾಜಕಾರಣಿಗೆ ಅವರ ಪಾತ್ರವನ್ನು ಹೋಲಿಸಿ ರೂಪಿಸಿಲ್ಲ. ಪಾತ್ರ ಅಥವಾ ಸಿನಿಮಾ ಮೂಲಕ ನಾವು ಯಾರನ್ನೂ ಟಾರ್ಗೆಟ್‌ ಮಾಡುವುದಿಲ್ಲ. ಅದು ಪ್ರೇಕ್ಷಕನ ಕಲ್ಪನೆಗೆ ಬಿಟ್ಟಿದ್ದು’ ಎನ್ನುವ ಸಮಜಾಯಿಷಿ ಸತೀಶ್‌ ಅವರದ್ದು.

ಜಾಕೋಬ್‌ ಫಿಲಮ್ಸ್‌ ಮತ್ತು ಲೀಡರ್‌ ಫಿಲ್ಮ್‌ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಕೆ.ಎಸ್‌.ನಂದೀಶ್‌ ಅವರದ್ದು.ಜಬೇಜ್‌ ಕೆ.ಗಣೇಶ್‌ ಛಾಯಾಗ್ರಹಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.