ಬಿಗ್‌ಬಾಸ್ ಅರ್ಧಕ್ಕೇ ಸ್ಥಗಿತವಾದ ಕಾರಣ ನಟಿ ನಿಧಿ ಸುಬ್ಬಯ್ಯ ಮೈಸೂರಿಗೆ ಮರಳಿದ್ದಾರೆ. ಇದೀಗ ಮತ್ತೆ ಸಿನಿಮಾದತ್ತ ಹೆಜ್ಜೆ ಇಡಲು ಸಜ್ಜಾಗಿರುವ ನಿಧಿ, ಹಾರರ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಚಂದನವನಕ್ಕೆ ಇನ್ನಷ್ಟು ಹತ್ತಿರವಾಗಲು ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿರುವ ಅವರು, ಮುಂದಿನ ಸಿನಿ ಜರ್ನಿಯ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.
* ಬಿಗ್‌ಬಾಸ್‌ಗೆ ಕರೆಯಬಹುದು ಎನ್ನುವ ಮುನ್ಸೂಚನೆ ಇತ್ತೇ?
ಆ ಸಂದರ್ಭದಲ್ಲಿ ನಾನು ಮುಂಬೈನಲ್ಲಿದ್ದೆ. ಮೊದಲು ನಾನು ಬರುವುದಿಲ್ಲ ಎಂದೇ ಹೇಳಿದ್ದೆ. ಬಿಗ್‌ಬಾಸ್ ಹೇಗಿರುತ್ತದೆ ಎನ್ನುವುದೂ ತಿಳಿದಿರಲಿಲ್ಲ. ಯಾವ ಭಾಷೆಯಲ್ಲೂ ನಾನು ಬಿಗ್‌ಬಾಸ್ ನೋಡಿರಲಿಲ್ಲ. ನಂತರದಲ್ಲಿ ನನ್ನಲ್ಲಿದ್ದ ಒಂದಿಷ್ಟು ಗೊಂದಲ, ಭಯವನ್ನು ಬಿಗ್‌ಬಾಸ್ ತಂಡ ದೂರ ಮಾಡಿತು. ಕೊನೆಯದಾಗಿ ಒಪ್ಪಿಕೊಂಡ ಸ್ಪರ್ಧಿ ನಾನೇ ಆಗಿದ್ದೆ. ತುಂಬಾ ಯೋಚಿಸಿದ ಬಳಿಕ, ಫೆ.18ಕ್ಕೆ ಒಪ್ಪಿಗೆ ನೀಡಿದೆ. ಒಪ್ಪಿಗೆ ನೀಡಿದ ಬಳಿಕ ಅಮ್ಮನಿಗೆ ಈ ವಿಷಯ ಹೇಳಿ ಅತ್ತಿದ್ದೆ. ಜನರು ದಿನವೂ ನಮ್ಮನ್ನು ನೋಡುತ್ತಾರೆ. ನನಗೆ ಒಳಗೊಂದು, ಹೊರಗೊಂದು ಇರಲು ಸಾಧ್ಯವಿಲ್ಲ. ಹೇಗಾಗುತ್ತದೆಯೋ ಎನ್ನುವ ಭಯವಿತ್ತು. ಆದರೆ, ಬಿಗ್‌ಬಾಸ್ ಮನೆಯಲ್ಲೇ ಹಲವರು ಸ್ನೇಹಿತರು ಸಿಕ್ಕಿದರು. ಅದರ ಗುಂಗಿನಿಂದ ನಾನು ಇನ್ನೂ ಹೊರಬಂದಿಲ್ಲ. ಯಾರಿಗಾದರೂ ಬಿಗ್‌ಬಾಸ್ ಆಫರ್ ಬಂದರೆ ಖಂಡಿತ ಯೋಚನೆ ಮಾಡಬೇಡಿ, ‘ಬರುತ್ತೇನೆ ಎನ್ನಿ’ ಎಂದು ಈಗ ಹೇಳುತ್ತೇನೆ. ಇದೊಂದು ಅದ್ಭುತ ಅನುಭವ.
*ಬಿಗ್‌ಬಾಸ್‌ನಿಂದ ನೀವು ಕಲಿತ ಪಾಠ?
ಬೆಳಗ್ಗೆ ಏಳಲು ಹಾಡಿಲ್ಲ, ಊಟ ಸೇರುತ್ತಿಲ್ಲ. ಮನೆಯೊಳಗೆ ಜ್ಯೂಸ್, ಸೇಬಿಗೆ ಕಿತ್ತಾಡುತ್ತಿದ್ದೆವು. ಈಗ ಎಲ್ಲವೂ ಇದೆ. ಆದರೆ ಏನೂ ಸೇರುತ್ತಿಲ್ಲ. ಬಿಗ್‌ಬಾಸ್ ಅರ್ಧಕ್ಕೇ ನಿಲ್ಲಲಿದೆ ಎನ್ನುವುದು ನಮಗೆಲ್ಲರಿಗೂ ಒಂದು ಕ್ಷಣ ಆಘಾತದ ವಿಷಯವಾಗಿತ್ತು. ಮನೆಯೊಳಗೂ ನಾನು ನಾನಾಗಿಯೇ ಇದ್ದೆ. 15 ಜನರು ಒಟ್ಟಿಗೆ ಇರುವಾಗ ಜಗಳ ಸಹಜ. ನನ್ನ ಅಪ್ಪ–ಅಮ್ಮನಿಗೆ ನಾನೊಬ್ಬಳೇ ಮಗಳು. ಹೀಗಾಗಿ ನಾನು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಬಿಗ್‌ಬಾಸ್ ಮನೆ ಒಳಗೆ ಪ್ರವೇಶಿಸಿದ ನಂತರ ಈ ವಿಷಯದಲ್ಲಿ ನಾನು ಬದಲಾಗಿದ್ದೇನೆ. 17 ಜನರಿಗೆ ಅಡುಗೆ ಮಾಡಿದ್ದು ಮೊದಲ ಬಾರಿಯಾಗಿತ್ತು. ಕೋಳಿ ಜಗಳ ಆದ ಮೇಲೆ ಮತ್ತೆ ಸ್ನೇಹಿತರಾಗುವುದು ಹೀಗೆ ತುಂಬಾ ಖುಷಿಯಾಗಿದ್ದೆ. ಈಗ ಖಾಲಿ ಖಾಲಿ ಎನಿಸುತ್ತಿದೆ.
*ಪಂಚರಂಗಿ, ಅಣ್ಣಾಬಾಂಡ್ ಬಳಿಕ ಬಾಲಿವುಡ್ ಪಯಣ. ಒಳ್ಳೆಯ ಅವಕಾಶಕ್ಕಾಗಿ ನಿಧಿ ಕಾದಿದ್ದರೇ?
ಇಂದಿಗೂ ನಾನು ‘ಪಂಚರಂಗಿ ಹುಡ್ಗಿ’ ಆಗಿಯೇ ಗುರುತಿಸಿಕೊಳ್ಳುತ್ತಿದ್ದೇನೆ. ‘ಪಂಚರಂಗಿ’ ದೊಡ್ಡ ಹಿಟ್ ಆದ ಚಿತ್ರ. ನನ್ನ ಸಿನಿ ಪಯಣದಲ್ಲಿ ಅಷ್ಟು ಬೇಗ ಯಶಸ್ಸು ಸಿಗುತ್ತದೆ ಎಂದುಕೊಂಡಿರಲಿಲ್ಲ. ಆಗಷ್ಟೇ ನಾನು ನಟನೆ ಕಲಿಯುತ್ತಿದ್ದೆ. ಅದಾದ ಬಳಿಕ ‘ಕೃಷ್ಣನ ಮ್ಯಾರೇಜ್ ಸ್ಟೋರಿ’, ‘ಅಣ್ಣಾಬಾಂಡ್’, ‘ಆಯುಷ್ಮಾನ್‌ಭವ’ ಚಿತ್ರದಲ್ಲಿ ನಾನು ನಟಿಸಿದ್ದೆ. ಈ ಸಂದರ್ಭದಲ್ಲೂ ಹಲವು ಕಥೆಗಳನ್ನು ನಾನು ಕೇಳಿದ್ದೆ. ಆದರೆ ಎಲ್ಲ ಕಥೆಗಳಲ್ಲೂ ನನ್ನ ಪಾತ್ರ ‘ಪಂಚರಂಗಿ’ ಚಿತ್ರದಲ್ಲಿನ ಪಾತ್ರದಂತೆ ಬಬ್ಲಿಬಬ್ಲಿಯಾಗೇ ಇತ್ತು. ಈ ರೀತಿ ಪಾತ್ರಗಳನ್ನೇ ಮಾಡಿದರೆ ಜನರಿಗೂ, ನನಗೂ ಹಿಡಿಸುವುದಿಲ್ಲ. ಇದು ಒಂದು ರೀತಿ 9–5 ಕಚೇರಿ ಕೆಲಸದ ಹಾಗಾಗುತ್ತಿತ್ತು. ಹೀಗಾಗಿ ಬೇರೆ ರೀತಿಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಕಥೆ ಆಯ್ಕೆಗೆ ಹೆಚ್ಚಿನ ಒತ್ತು ನೀಡಿದ್ದೆ. ‘ಅಣ್ಣಾಬಾಂಡ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎರಡು ಬಾಲಿವುಡ್ ಸಿನಿಮಾಗಳ ಆಫರ್ ಬಂದಿತ್ತು. ಇದಕ್ಕಾಗಿ ನಾನು ಮುಂಬೈಗೆ ತೆರಳಿದೆ.
* ಈ ರೀತಿಯ ಪಾತ್ರ ಮಾಡಬೇಕು ಎನ್ನುವ ಆಸೆ ನಿಮಗೆ ಇದೆಯೇ?
ಒಂದು ಪಾತ್ರದ ಬಗ್ಗೆ ನಾನೇ ಆಶ್ಚರ್ಯಪಡಬೇಕು. ಇಂತಹ ಅವಕಾಶವನ್ನು ನಾನೆಂದೂ ಬಿಟ್ಟುಕೊಡುವುದಿಲ್ಲ.ಪಂಚರಂಗಿ ಸಿನಿಮಾದಲ್ಲಿ ನನಗೆ ನೀಡಿದ್ದ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೆ. ಆತ್ಮಕಥೆಯಿರುವ ಚಿತ್ರಗಳಲ್ಲಿ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ. ಏಕೆಂದರೆ ಇಂತಹ ಪಾತ್ರಗಳು ಬಹಳಷ್ಟು ಸವಾಲಿನದ್ದಾಗಿರುತ್ತದೆ. ಇಂತಹ ಪಾತ್ರಗಳನ್ನು ಮಾಡಿ, ಈ ಪಾತ್ರವನ್ನು ಮುಂದೆ ಹಲವು ವರ್ಷ ಜನರು ನನ್ನನ್ನು ನೆನಪಿಸಿಕೊಳ್ಳುವಂತೆ ಮಾಡಬೇಕು ಎಂಬ ಅಭಿಲಾಷೆ.
* ಲೋಹಿತ್ ನಿರ್ದೇಶನದ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಈ ಚಿತ್ರದಲ್ಲಿ ಹೀರೋ ಇಲ್ಲ. ಹೀರೋಯಿನ್ ಆಧಾರಿತ ಹಾರರ್ ಥ್ರಿಲ್ಲರ್ ಚಿತ್ರವಿದು. ಹೀಗಾಗಿ ಸವಾಲು ಬಹಳಷ್ಟಿದೆ. ಯೂಟ್ಯೂಬ್ ಬ್ಲಾಗರ್ ಆಗಿರುವ ಹುಡುಗಿಯೊಬ್ಬಳು ಕಾಡೊಂದರಲ್ಲಿ ದೆವ್ವ ಇಲ್ಲವೆಂದು ಸಾಬೀತುಪಡಿಸಲು ಗೊಪ್ರೊ ಕ್ಯಾಮೆರಾದೊಂದಿಗೆ ಹೋಗುತ್ತಾಳೆ. ನಂತರ ನಡೆಯುವ ಘಟನೆಗಳು ಏನು ಎನ್ನುವುದು ಚಿತ್ರದ ಕಥೆ. ನನ್ನ ಪಾತ್ರದ ಅವಧಿಯಲ್ಲಿ ಶೇ 90ರಷ್ಟು ಭಾಗ ನಾನು ಒಬ್ಬಂಟಿಯಾಗಿ ಇರುತ್ತೇನೆ. ಬಿಗ್‌ಬಾಸ್ ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ಈ ಚಿತ್ರ ಒಪ್ಪಿಕೊಂಡಿದ್ದೆ. ಮಾರ್ಚ್‌ನಿಂದ ಚಿತ್ರೀಕರಣ ಆರಂಭಕ್ಕೆ ಚಿತ್ರತಂಡ ನಿರ್ಧರಿಸಿತ್ತು. ಆದರೆ ಬಿಗ್‌ಬಾಸ್ ಮುಗಿದ ನಂತರ ಚಿತ್ರೀಕರಣ ಆರಂಭಿಸುವುದಕ್ಕೆ ಚಿತ್ರತಂಡ ಒಪ್ಪಿಕೊಂಡಿತು. ಇದೀಗ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ಮತ್ತೆ ಮುಂದಕ್ಕೆ ಹೋಗಿದೆ.
* ಬಿಗ್‌ಬಾಸ್ ಬಳಿಕ ಮತ್ತಷ್ಟು ಅವಕಾಶಗಳು ಅರಸಿಬಂದಿವೆಯೇ?
ನಟನೆ ಬಿಡಲು ಸಾಧ್ಯವಿಲ್ಲ. ಒಮ್ಮೆ ಬಣ್ಣಹಚ್ಚಿದ ಬಳಿಕ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ಸಿನಿಮಾ ಪಯಣ ಹೀಗೆಯೇ ಸಾಗಲಿದೆ. ಬಿಗ್‌ಬಾಸ್ ಮನೆಯಲ್ಲಿ ನನ್ನ ವ್ಯಕ್ತಿತ್ವ ಗುರುತಿಸಿದ ಹಲವು ನಿರ್ದೇಶಕರು, ಸಹ ನಟರು ನನಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪಯಣ ಮುಂದುವರಿಸಲು ಲಾಕ್‌ಡೌನ್ ಬಳಿಕ ನಾನು ಬೆಂಗಳೂರಿನ ಜೆ.ಪಿ.ನಗರಕ್ಕೆ ಸ್ಥಳಾಂತರವಾಗುತ್ತಿದ್ದೇನೆ. ಈ ಹಿಂದೆ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮೈಸೂರಿಗೆ ಮರಳುತ್ತಿದ್ದೆ. ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಹಲವರು ಜೆ.ಪಿ.ನಗರದಲ್ಲಿದ್ದಾರೆ. ‘ನಾವೇ ಮನೆ ಹುಡುಕುತ್ತೇವೆ ಬಾ’ ಎಂದು ಅವರೂ ಹೇಳಿದ್ದಾರೆ. ಬಿಗ್‌ಬಾಸ್ 8ನೇ ಆವೃತ್ತಿಗೆ ಅಂತ್ಯ ಸಿಗದೇ ಇದ್ದರೆ, ಬೆಂಗಳೂರಿನಲ್ಲಿ ನಾನು ವಾಸಿಸಲಿರುವ ನನ್ನ ಮನೆಯಲ್ಲೇ ಬಿಗ್‌ಬಾಸ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.