ADVERTISEMENT

ವಿಪರೀತ ಫಿಟ್‌ನೆಸ್ ಪ್ರಜ್ಞೆ ನನಗಿಲ್ಲ: ಪರಿಣೀತಿ ಚೋಪ್ರಾ

ವಿಶಾಖ ಎನ್.
Published 10 ಏಪ್ರಿಲ್ 2019, 6:28 IST
Last Updated 10 ಏಪ್ರಿಲ್ 2019, 6:28 IST
   

ಯಶ್‌ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಮೊಗಸಾಲೆಯಲ್ಲಿ ನಟ-ನಟಿಯರಿಗೆ ಆಡಿಷನ್ ಕೊಡುತ್ತಲೇ ತನ್ನೊಳಗಿನ ಅಭಿನಯದ ಆಕಾಂಕ್ಷೆಯನ್ನು ಕಾಪಿಟ್ಟುಕೊಂಡವರು ಪರಿಣೀತಿ ಚೋಪ್ರಾ. ಸಹಜಾಭಿನಯವೇ ತನ್ನ ವೃತ್ತಿಬದುಕನ್ನು ಮೇಲೆತ್ತೀತು ಎನ್ನುವುದು ಮೊದ ಮೊದಲು ಅವರ ವಿಶ್ವಾಸವಾಗಿತ್ತು. ಆದರೆ, ಥಳುಕು ಬಳುಕಿನ ಸಿನಿಮಾ ಲೋಕದಲ್ಲಿ ಅಷ್ಟೇ ಸಾಕಾಗದು ಎಂದು ತಿಳಿಯಲು ಮೂರು ವರ್ಷಗಳು ಸಾಕಾದವು.

ನಮ್ಮದೇ ಯಾವುದೋ ಗಲ್ಲಿಯ ಹುಡುಗಿಯಂತೆ ಕಾಣುತ್ತಾರೆ ಎಂದು ಪ್ರೇಕ್ಷಕರು ಶಹಬ್ಬಾಸ್‌ಗಿರಿ ಕೊಟ್ಟರೂ ಪರಿಣೀತಿ ತನ್ನ ಸೌಂದರ್ಯದಿಂದೇನೂ ಮೋಡಿ ಮಾಡಲಿಲ್ಲ. ತುಂಬು ಕೆನ್ನೆ, ದಡೂತಿ ದೇಹವನ್ನು ಹನ್ನೆರಡು ವರ್ಷ ಹೊತ್ತಿದ್ದವರು ಅವರು. ಅದನ್ನು ಕರಗಿಸಲು ಮೊದಲು ಒಂದು ಹಂತದ ಕಸರತ್ತು ಮಾಡಿದ್ದಾಯಿತು. ಆಮೇಲೆ ಅಭಿನಯದ ಕುರಿತು ತಲೆಕೆಡಿಸಿಕೊಂಡರು‌. ಮೂರು ವರ್ಷ ಬಣ್ಣದ ಲೋಕದ ಸತ್ಯಗಳನ್ನು ಕಂಡಮೇಲೆ ಎರಡೂವರೆ ವರ್ಷ ಅವರು ಯಾವ ಸಿನಿಮಾಗಳಲ್ಲೂ ಕಾಣಲೇ ಇಲ್ಲ. 'ಮೇರಿ ಪ್ಯಾರಿ ಬಿಂದು', 'ಗೋಲ್‌ಮಾಲ್ 4' ಎರಡೂ ಹಿಂದಿ ಚಿತ್ರಗಳಿಗೆ ಸಹಿ ಹಾಕುವವರೆಗೆ ಅವರು ಬದುಕಿನ ಇನ್ನೊಂದು ಸತ್ಯ ನೋಡತೊಡಗಿದರು.

ADVERTISEMENT

ಫಿಟ್‌ನೆಸ್ ಈ ವೃತ್ತಿಯಲ್ಲಿ ಇಷ್ಟೊಂದು ಮುಖ್ಯವೇ ಎಂಬ ಪ್ರಶ್ನೆ ಮೊದಲು ಕಾಡಿತ್ತು. ಆಮೇಲೆ ಅನಿವಾರ್ಯ ಎನ್ನುವುದು ಸ್ಪಷ್ಟವಾಯಿತು.

'ಬರೀ 34-26-34 ಎಂಬ ಹಳೆಯ ವ್ಯಾಖ್ಯಾನಕ್ಕೆ ಫಿಟ್‌ನೆಸ್ ಅನ್ನು ಈಗ ಸೀಮಿತಗೊಳಿಸಲು ಆಗದು. ಪಾತ್ರಕ್ಕೊಂದು ರೂಹು ಇರುತ್ತದೆ. ಹಾಗೆಯೇ ದೇಹ. ಅದಕ್ಕೆ ತಕ್ಕಂತೆ ಬದಲಾಗುತ್ತಾ ಇರಬೇಕಾಗುತ್ತದೆ. ನನ್ನ ಹೃದಯ, ಯಕೃತ್ತು ವಿಪರೀತ ವ್ಯಾಯಾಮವನ್ನು ಸಹಿಕೊಳ್ಳಲಾಗದು. ಹೀಗಾಗಿಯೇ ತಲೆಬಿಸಿ ಆಗಿತ್ತು' ಎಂದು ಪರಿಣೀತಿ ತಮ್ಮ ಮಾತಿಗೆ ಪೀಠಿಕೆ ಹಾಕಿದ್ದರು.

ಸ್ಥೂಲಕಾಯ ಅವರ ಹಾರ್ಮೋನುಗಳ ಕೊಡುಗೆ. ಅದನ್ನು ಸಪೂರಗೊಳಿಸಲು ಅವರು ಸರಣಿ ವೈದ್ಯರನ್ನು ಭೇಟಿ ಮಾಡಿದರು. ಗುಳಿಗೆಗಳ ಅಗತ್ಯವೂ ಬಿತ್ತೆನ್ನಿ. ದಿನಕ್ಕೆ ನಾಲ್ಕು ತಾಸಿಗಿಂತ ಹೆಚ್ಚು ದೇಹ ದಂಡಿಸುವಂತಿಲ್ಲ. ಪಥ್ಯಾಹಾರವೂ ಅತಿಯಾದರೆ ಕಷ್ಟ ಎನ್ನುವ ಪರಿಸ್ಥಿತಿ. ಇವೆಲ್ಲವನ್ನೂ ಮೀರಿ ಪರಿಣೀತಿ ಮತ್ತೆ ಸಪೂರವಾದರು.

'ವೈಯಕ್ತಿಕವಾಗಿ ನನಗೆ ವಿಪರೀತ ಫಿಟ್‌ನೆಸ್ ಪ್ರಜ್ಞೆ ಇಟ್ಟುಕೊಳ್ಳುವುದು ಇಷ್ಟವಿಲ್ಲ. ನನ್ನ ಸ್ನೇಹಿತರು ಈ ವಿಷಯದಲ್ಲಿ ಇಂಧನವಾದರು. ನಿರ್ದಿಷ್ಟ ವೃತ್ತಿಗೆ ದೇಹಾಕಾರವೂ ಮುಖ್ಯ ಎಂದಮೇಲೆ ಅದನ್ನು ಕಾಪಾಡಿಕೊಳ್ಳದೇ ವಿಧಿಯಿಲ್ಲ ಎನ್ನುವುದನ್ನು ಮನದಟ್ಟು ಮಾಡಿಸಿದರು. ನಾನು ದೀರ್ಘಾವಧಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಹೋದರೂ ಯಾರೂ ನಿವೃತ್ತಳಾದೆ ಎಂದೇನೂ ಬರೆಯಲಿಲ್ಲ. ಅದು ನನಗೆ ಖುಷಿ ಕೊಟ್ಟಿತು. ವೃತ್ತಿಬದುಕಿನಲ್ಲಿ ಯಾವುದೋ ತಿರುವು ಇರಬಹುದು ಎಂಬ ನಿರೀಕ್ಷೆ ಗರಿಗೆದರಲು ಅಷ್ಟು ಸಾಕಾಯಿತು' ಎಂಬ ಪರಿಣೀತಿ ಮಾತಿನಲ್ಲಿನ ಆಶಾವಾದ ಗಮನಿಸಿಬೇಕು.

ಇತ್ತೀಚೆಗೆ ತೆರೆಕಂಡ 'ಕೇಸರಿ' ಹಿಂದಿ ಸಿನಿಮಾದಲ್ಲಿ ಪರಿಣೀತಿ ನಟಿಸಿದ್ದಾರೆ. ಆದರೆ ಪಾತ್ರಕ್ಕೆ ಹೇಳಿಕೊಳ್ಳುವಂಥ ಕಸುವು ಇಲ್ಲ. 'ಇಂತಹ ಪಾತ್ರಗಳೂ ನಮಗೆ ಉಸಿರಾಡಲು ಬೇಕಾಗುತ್ತವೆ. ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾಗೂ ನಾನು ಕಣ್ಣು ಮುಚ್ಚಿಕೊಂಡು ಸಹಿ ಮಾಡಿದ್ದೆ. ಕೆಲವು ಅವಕಾಶಗಳನ್ನು ಬಂದಹಾಗೆಯೇ ಸ್ವೀಕರಿಸಬೇಕು ಎಂದುಕೊಂಡಿದ್ದೇನೆ. ಅಸ್ತಿತ್ವಕ್ಕೆ ಇಂತಹ ಸಣ್ಣ ಪುಟ್ಟ ರಾಜಿ ಮಾಡಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ' ಎನ್ನುವ ಈ ಪ್ರತಿಭಾವಂತ ನಟಿ ಬೆಳ್ಳಿ ಬೆಳಕಿನ ನಿರೀಕ್ಷೆಯಲ್ಲಂತೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.