ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ ಓ ಮೈ ಗಾಡ್-2 ಮತ್ತು ಸನ್ನಿ ಡಿಯೋಲ್ ನಟಿಸಿರುವ ಗದರ್–2 ಆಗಸ್ಟ್ 11ರಂದು ಬಿಡುಗಡೆಯಾಗಿತ್ತು. ಎರಡು ಚಿತ್ರಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪ್ರದರ್ಶನ ವಲಯದಲ್ಲಿ ‘ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಶ್ರೇಷ್ಠ ವಾರವನ್ನು’ ನೀಡಿದ್ದಕ್ಕಾಗಿ ನಟ ಅಕ್ಷಯ್ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ) ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಪ್ರಕಾರ, ಕೋವಿಡ್ ಲಾಕ್‌ಡೌನ್ ನಂತರ ಸಿನಿಮಾ ಮಂದಿರಗಳು ತೆರೆದಾಗಿನಿಂದ ಆಗಸ್ಟ್ 11 ರಿಂದ 13ರವರೆಗೆ ‘ಅತ್ಯಂತ ಬ್ಯುಸಿ ಸಿಂಗಲ್ ವೀಕೆಂಡ್’ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗದರ್–2 ₹134.88 ಕೋಟಿ ಗಳಿಸಿದರೆ, ಓ ಮೈ ಗಾಡ್–2 ಚಿತ್ರವು ₹43.11 ಕೋಟಿಯನ್ನು ಸಂಗ್ರಹಿಸಿಕೊಂಡಿದೆ ಎಂದು ತಿಳಿಸಿದೆ.
ಓ ಮೈ ಗಾಡ್–2 ಚಿತ್ರಕ್ಕೆ ತೋರಿಸಿರುವ ನಿಮ್ಮ ಪ್ರೀತಿಗೆ ಹಾಗೂ ‘ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ನಮಗೆ ಅತ್ಯುತ್ತಮ ವಾರವನ್ನು ನೀಡಿದ್ದಕ್ಕಾಗಿ’ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದಗಳು. ಚಿತ್ರಮಂದಿರಗಳಲ್ಲಿ ಓ ಮೈ ಗಾಡ್–2 ಮತ್ತು ಗದರ್–2 ಚಿತ್ರಗಳಿಗೆ ನೀವು ತೋರಿಸಿರುವ ಪ್ರೀತಿಗೆ ಕೃತಜ್ಞತೆಗಳು ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಕ್ಷಯ್ ಬರೆದುಕೊಂಡಿದ್ದಾರೆ.
ಅಮಿತ್ ರೈ ನಿರ್ದೇಶನದ ‘ಓ ಮೈ ಗಾಡ್–2’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಶಿವ ಭಕ್ತನಾಗಿದ್ದು, ಕಾಂತಿ ಶರಣ್ ಮುದ್ಗಲ್ ಮತ್ತು ಅಕ್ಷಯ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ವಯಾಕಾಮ್18 ಸ್ಟುಡಿಯೋಸ್ ಪ್ರಸ್ತುತ ಪಡಿಸಿರುವ ‘ಓ ಮೈ ಗಾಡ್–2’ ಚಿತ್ರವನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ವಕಾವೂ ಕಂಪನಿ ನಿರ್ಮಿಸಿದೆ. ಈ ಚಿತ್ರವು ಹದಿಹರೆಯದವರ ವಿವಿಧ ಸಮಸ್ಯೆಗಳು ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಹೊಂದಿದೆ.
ಓ ಮೈ ಗಾಡ್–2 ಚಿತ್ರವು ಬಿಡುಗಡೆಯಾದಾಗಿನಿಂದ ಇದುವರೆಗೆ ₹79.47 ಕೋಟಿ ಗಳಿಸಿದೆ ಎಂದು ವಕಾವೂ ಕಂಪನಿ ಬುಧವಾರ ಪ್ರಕಟಿಸಿದೆ. ‘ನಿಮ್ಮ ಪ್ರೀತಿಯೇ ನಮ್ಮ ಬಹುಮಾನ’ ಎಂದು ಪ್ರೊಡಕ್ಷನ್ ಬ್ಯಾನರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಅನಿಲ್ ಶರ್ಮಾ ನಿರ್ದೇಶನದ ಗದರ್–2, ಬಿಡುಗಡೆಯಾದ ಆರನೇ ದಿನಕ್ಕೆ ₹32.37 ಕೋಟಿ ಗಳಿಸಿದ್ದು, ಅದರ ಒಟ್ಟು ಬಾಕ್ಸ್ ಆಫೀಸ್ ಗಳಿಕೆಯು ₹261.35 ಕೋಟಿಗೆ ತಲುಪಿದೆ ಎಂದು ಪ್ರೊಡಕ್ಷನ್ ಹೌಸ್ ಝೀ ಸ್ಟುಡಿಯೋಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.