ADVERTISEMENT

ಬಾಲಿವುಡ್‌ನ ಹಿರಿಯ ನಟ ರಾಜೀವ್ ಕಪೂರ್ ನಿಧನ

ಪಿಟಿಐ
Published 9 ಫೆಬ್ರುವರಿ 2021, 14:49 IST
Last Updated 9 ಫೆಬ್ರುವರಿ 2021, 14:49 IST
ರಾಜೀವ್ ಕಪೂರ್
ರಾಜೀವ್ ಕಪೂರ್    

ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ-ನಟ ರಾಜ್ ಕಪೂರ್ ಅವರ ಪುತ್ರ ನಟ-ನಿರ್ದೇಶಕ ರಾಜೀವ್ ಕಪೂರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ದಿವಂಗತ ನಟ ರಿಷಿ ಕಪೂರ್ ಅವರ ಪತ್ನಿ ನೀತು ಕಪೂರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಅವರು ತನ್ನ ಮೈದುನನ ಚಿತ್ರದೊಂದಿಗೆ 'ಆರ್‌ಐಪಿ' ಎಂದು ಬರೆದಿದ್ದಾರೆ.

ರಾಜ್ ಕಪೂರ್ ಅವರ ಕಿರಿಯ ಮಗ ರಾಜೀವ್ ಕಪೂರ್ 1983ರಲ್ಲಿ 'ಏಕ್ ಜಾನ್ ಹೈ ಹಮ್' ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ 1985 ರಲ್ಲಿ ತಂದೆ ರಾಜ್ ಕಪೂರ್ ನಿರ್ದೇಶನದ 'ರಾಮ್ ತೇರಿ ಗಂಗಾ ಮೈಲಿ' ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

ನಂತರ ಆಸ್ಮಾನ್, ಲವರ್ ಬಾಯ್, ಜಬರ್ದಸ್ತ್ ಹಾಗೂ ಹಮ್ ತೋ ಚಲೆ ಪರ್ದೇಸ್ ರಾಜೀವ್ ಕಪೂರ್ ಅಭಿನಯದ ಪ್ರಮುಖ ಸಿನಿಮಾಗಳು. 1990 ರಲ್ಲಿ ತೆರೆಕಂಡ 'ಜಿಮ್ಮೆದಾರ್' ಸಿನಿಮಾ ರಾಜೀವ್ ಅಭಿನಯದ ಕೊನೆಯ ಸಿನಿಮಾ. ಇದಾದ ನಂತರ ರಾಜೀವ್ ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದತ್ತ ಗಮನ ಹರಿಸಿದರು.

ಅವರ ಮೊದಲ ನಿರ್ಮಾಣ 'ಹೆನ್ನಾ', ಇದನ್ನು ಹಿರಿಯ ಸಹೋದರ ರಣಧೀರ್ ಕಪೂರ್ ನಿರ್ದೇಶಿಸಿದ್ದರು ಮತ್ತು ರಿಷಿ ಕಪೂರ್ ಅಭಿನಯಿಸಿದ್ದಾರೆ. 1996 ರಲ್ಲಿ ರಾಜೀವ್ ಕಪೂರ್ 'ಪ್ರೇಮ್ ಗ್ರಂಥ್' ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು. ಇದರಲ್ಲಿ ರಿಷಿ ಕಪೂರ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದಾರೆ.

ರಿಷಿ ಕಪೂರ್ ನಿರ್ದೇಶನದ 1999ರ ರೊಮ್ಯಾಂಟಿಕ್ ಸಿನಿಮಾ 'ಆ ಅಬ್ ಲೌಟ್ ಚಲೇ' ಅನ್ನು ಸಹ ನಿರ್ಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.