ADVERTISEMENT

ಅಂದು ₹ 200 ಇದ್ದಿದ್ದರೆ ಇರ್ಫಾನ್‌ ಕ್ರಿಕೆಟಿಗನಾಗುತ್ತಿದ್ದರೇ?

ಗಿರೀಶದೊಡ್ಡಮನಿ
Published 30 ಏಪ್ರಿಲ್ 2020, 1:30 IST
Last Updated 30 ಏಪ್ರಿಲ್ 2020, 1:30 IST
ಪಾನ್‌ಸಿಂಗ್ ತೋಮರ್ ಚಿತ್ರದಲ್ಲಿ ಇರ್ಫಾನ್ ಖಾನ್ –ಟ್ವಿಟರ್ ಚಿತ್ರ
ಪಾನ್‌ಸಿಂಗ್ ತೋಮರ್ ಚಿತ್ರದಲ್ಲಿ ಇರ್ಫಾನ್ ಖಾನ್ –ಟ್ವಿಟರ್ ಚಿತ್ರ   

ಬೆಂಗಳೂರು: ಮೂರು ದಶಕಗಳ ಹಿಂದೆ ಇರ್ಫಾನ್ ಖಾನ್‌ ಜೇಬಿನಲ್ಲಿ 200 ರೂಪಾಯಿ ಇದ್ದಿದ್ದರೆ ಅವರ ಭವಿಷ್ಯವೇ ಬದಲಾಗಿ ಬಿಡುತ್ತಿತ್ತೇನೋ?

ಹೌದು; ರಾಜಸ್ಥಾನ ರಾಜ್ಯದ 23 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ಇರ್ಫಾನ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕಿತ್ತು. ಆದರೆ, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಅವರಿಗೆ ಅಡ್ಡಿಯಾಯಿತು. ಅಜ್ಮೇರ್‌ನಲ್ಲಿ ನಡೆಯುವ ಟೂರ್ನಿಗೆ ಹೋಗಲು ಪ್ರಯಾಣದ ವೆಚ್ಚ ಭರಿಸಲು ಅವರಿಗೆ ದುಡ್ಡು ಹೊಂದಿಸಲು ಸಾಧ್ಯವಾಗಲಿಲ್ಲ.ಹಿಂದೆ ಸರಿದರು. ಆದರೆ ನಟನಾಲೋಕ ಅವರನ್ನು ಕೈಬೀಸಿ ಕರೆಯಿತು. ಟಿವಿ ಧಾರಾವಾಹಿಯಿಂದಆರಂಭವಾಗಿ ಹಾಲಿವುಡ್ ಸಿನಿಮಾದವರೆಗೂ ಬೆಳೆದು ಇತಿಹಾಸವಾದರು.

‘ಮನೆಯಲ್ಲಿ ಯಾರಿಗೂ ಹೇಳದೇ ಆಡಲು ಹೋಗುತ್ತಿದ್ದೆ. ಅವರಿಗೆ ಗೊತ್ತಾಗಿದ್ದರೆ ಬೈಸಿಕೊಳ್ಳಬೇಕಿತ್ತು. ಆದರೆ ನಾನು ಕದ್ದುಮುಚ್ಚಿ ಹೋಗಿ ಆಡುತ್ತಿದ್ದೆ. ಆಲ್‌ರೌಂಡರ್‌ ಆಗಿದ್ದೆ. ಬ್ಯಾಟಿಂಗ್‌ ನನಗೆ ಅಚ್ಚುಮೆಚ್ಚಿನದ್ದಾಗಿತ್ತು. ಆದರೆ, ತಂಡದ ನಾಯಕ ಬೌಲಿಂಗ್ ಮಾಡಿಸುತ್ತಿದ್ದರು. ನಾನು ಬೌಲಿಂಗ್ ಮಾಡುವಾಗ ಒಂದಿಷ್ಟು ವಿಕೆಟ್‌ಗಳು ಅದ್ಹೇಗೋ ಬಿದ್ದುಬಿಡುತ್ತಿದ್ದವು’ ಎಂದು ಮೂರು ವರ್ಷಗಳ ಹಿಂದೆ ಇರ್ಫಾನ್ ಯೂಟ್ಯೂಬ್‌ ಚಾನೆಲ್‌ನ ‘ಸನ್‌ ಆಫ್‌ ಅಬೀಶ್‌’ ಕಾರ್ಯಕ್ರಮದಲ್ಲಿ ಹೇಳಿದ್ದರು.

ADVERTISEMENT

ಆಗಿನ ಸಂದರ್ಭದಲ್ಲಿ ಸಿ.ಕೆ. ನಾಯ್ಡು ಟೂರ್ನಿಯಲ್ಲಿ ಉತ್ತಮವಾಗಿ ಆಡಿದವರಿಗೆರಣಜಿ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಅಷ್ಟು ಪ್ರತಿಭೆ ಅವರಿಗೆ ಇತ್ತು. ಆದರೆ, ಇರ್ಫಾನ್ ಅದೃಷ್ಟದಲ್ಲಿ ಬೇರೆಯೇ ಇತ್ತಲ್ಲವೇ?

ಕ್ರಿಕೆಟ್ ಲೋಕದ ಬಹಳಷ್ಟು ದಿಗ್ಗಜರು ಇರ್ಫಾನ್‌ಗೆ ಅಭಿಮಾನಿಗಳಾಗಿದ್ದಾರೆ. ಅವರ ನಟನೆಗೆ ಮನಸೋತಿದ್ದಾರೆ. ಅವರ ನಿಧನದ ನಂತರ ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಮೊಹಮ್ಮದ್ ಶಮಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಡಿರುವ ಸಂತಾಪ ಸಂದೇಶದ ಟ್ವೀಟ್‌ಗಳನ್ನು ನೋಡಿದರೆ ಇರ್ಫಾನ್‌ ವರ್ಚಸ್ಸು ತಿಳಿಯುತ್ತದೆ.

ಅವರು ಕ್ರಿಕೆಟಿಗನಾಗದಿದ್ದರೂ ಕ್ರೀಡಾ ಪ್ರೀತಿಯನ್ನು ಬಿಟ್ಟಿರಲಿಲ್ಲ. ಅವರ ಅಭಿನಯದ ‘ಪಾನ್‌ ಸಿಂಗ್ ಥೋಮರ್‌’ ಬಹಳಷ್ಟು ಗಮನ ಸೆಳೆದ ಚಿತ್ರ.ಅಥ್ಲೀಟ್‌ ಒಬ್ಬನ ನೈಜ ಕಥೆಯಾಧಾರಿತವಾಗಿದ್ದ ಚಿತ್ರ ಅದು. ಅದಕ್ಕಾಗಿ ಅವರು ಹಿರಿಯ ಅಥ್ಲೆಟಿಕ್ ಕೋಚ್ ಸತ್ಪಾಲ್ ಸಿಂಗ್ ಅವರಿಂದ ತರಬೇತಿ ಪಡೆದಿದ್ದರಂತೆ.

ಅಭಿಮಾನಿಗಳಿಗೆ ಇರ್ಫಾನ್ಕೊನೆಯ ಸಂದೇಶ

... ನನಗಾಗಿ ಕಾದಿರಿ!

‘ಜೀವನವನ್ನು ಸಂಪೂರ್ಣವಾಗಿ ಜೀವಿಸಿ ಮತ್ತು ಕಠಿಣ ಸಮಯದಲ್ಲಿ ದೊಡ್ಡ ನಗುವಿನೊಂದಿಗೆ ಪಯಣಿಸಿ’

–ಇದು ಬುಧವಾರ ಸಾವನ್ನಪ್ಪಿದ ಬಾಲಿವುಡ್ ನಟ ಇರ್ಫಾನ್ ಖಾನ್ ತಮ್ಮ ಅಭಿಮಾನಿಗಳಿಗೆ ನೀಡಿದ ಕೊನೆಯ ಸಂದೇಶ.

‘ಅಂಗ್ರೇಜಿ ಮೀಡಿಯಂ’ ಸಿನಿಮಾದ ಪ್ರಚಾರದಲ್ಲಿಭಾಗವಹಿಸಲು ಸಾಧ್ಯವಾಗದ ಕಾರಣ ಇರ್ಫಾನ್ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದರು.

‘ಹಲೋ ಸಹೋದರ, ಸಹೋದರಿಯರೇ... ನಾನು ಇರ್ಫಾನ್. ಇವತ್ತು ನಾನು ನಿಮ್ಮೊಂದಿಗೆ ಇದ್ದೇನೆ. ಆದರೂ ನಿಮ್ಮೊಂದಿಗೆ ಇಲ್ಲ’ ಎಂದು ಸಂದೇಶ ಆರಂಭಿಸಿದ್ದ ಇರ್ಫಾನ್ ತುಂಬಾ ಭಾವುಕರಾಗಿದ್ದರು. ನ್ಯೂರೊಎಂಡೊಕ್ರೈನ್ ಗಡ್ಡೆಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಹೋಮಿ ಅದಾಜಾನಿಯ ನಿರ್ದೇಶನದ ‘ಅಂಗ್ರೇಜಿ ಮೀಡಿಯಂ’ ಸಿನಿಮಾದಲ್ಲಿ ಅಭಿನಯಿಸಿದ್ದರು.

‘ಒಂದು ಮಾತಿದೆ. ಜೀವನವು ನಿಮಗೆ ನಿಂಬೆಹಣ್ಣುಗಳನ್ನು ನೀಡಿದಾಗ ನೀವು ಅದರಿಂದ ನಿಂಬೆ ಪಾನಕವನ್ನು ತಯಾರಿಸುತ್ತೀರಿ. ಅದು ಒಳ್ಳೆಯದೇ. ಆದರೆ, ಜೀವನವು ನಿಜಕ್ಕೂ ನಿಮ್ಮ ಕೈಯಲ್ಲಿ ನಿಂಬೆಹಣ್ಣನ್ನು ಇರಿಸಿದಾಗ ಅದರಿಂದ ನಿಂಬೆ ಪಾನಕ ತಯಾರಿಸುವುದು ನಿಜಕ್ಕೂ ಕಠಿಣ’ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದರು.

‘ಆದರೆ, ಕಠಿಣ ಸನ್ನಿವೇಶಗಳಲ್ಲಿ ಸಕಾರಾತ್ಮಕವಾಗಿರುವ ಹೊರತಾಗಿ ಬೇರೆ ಆಯ್ಕೆ ಏನಿದೆ? ನಾವು ಅದೇ ಸಕಾರಾತ್ಮಕ ಭಾವದಿಂದ ಈ ಚಿತ್ರವನ್ನು ಮಾಡಿದ್ದೇವೆ. ಈ ಚಿತ್ರ ನಿಮಗೆ ಕಲಿಸುತ್ತದೆ, ನಗಿಸುತ್ತದೆ, ಅಳಿಸುತ್ತದೆ ಮತ್ತೆ ನಿಮ್ಮನ್ನು ನಗಿಸುತ್ತದೆ ಎಂದು ನಾನು ಭಾವಿಸುತ್ತೇನೆ.ಚಿತ್ರದ ಟ್ರೇಲರ್ ನೋಡಿ ಆನಂದಿಸಿ, ಪರಸ್ಪರ ಸಹಾನುಭೂತಿ ತೋರಿಸಿ... ಮತ್ತು ಹೌದು, ನನಗಾಗಿ ಕಾಯಿರಿ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.